ADVERTISEMENT

ಗ್ಯಾರಂಟಿಗಳ ಬಗ್ಗೆ ಸುಳ್ಳು ಆರೋಪ ಸರಿಯಲ್ಲ: ಮೋಟಮ್ಮ

​ಪ್ರಜಾವಾಣಿ ವಾರ್ತೆ
Published 1 ಜೂನ್ 2023, 15:44 IST
Last Updated 1 ಜೂನ್ 2023, 15:44 IST
ಮೋಟಮ್ಮ
ಮೋಟಮ್ಮ   

ಚಿಕ್ಕಮಗಳೂರು: ಕಾಂಗ್ರೆಸ್‌ ಗ್ಯಾರಂಟಿಗಳ ಬಗ್ಗೆ ಬಿಜೆಪಿ ಬೇಕೆಂದೇ ಟೀಕೆ ಮಾಡುತ್ತಿದ್ದು,‌ ಆ ಮೂಲಕ ಲೋಕಸಭೆ ಚುನಾವಣೆಯಲ್ಲಿ ಮತ ಗಳಿಸುವ ಭ್ರಮೆಯಲ್ಲಿದೆ ಎಂದು ಕಾಂಗ್ರೆಸ್ ಮುಖಂಡರಾದ ಮೋಟಮ್ಮ ಆರೋಪಿಸಿದರು.

ಚುನಾವಣಾ ಪೂರ್ವದಲ್ಲಿ ಕಾಂಗ್ರೆಸ್ ನೀಡಿರುವ ಗ್ಯಾರಂಟಿಗಳನ್ನು ಜಾರಿಗೆ ತರಲು ಸರ್ಕಾರ ಬದ್ಧವಾಗಿದೆ. ಆ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಿದೆ. ಆದರೂ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಅವರು ಸುಳ್ಳು ಹೇಳಿಕೆ ನೀಡಿ ಜನರ ದಿಕ್ಕು ತಪ್ಪಿಸುತ್ತಿದ್ದಾರೆ. ಇದು ಸರಿಯಲ್ಲ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

‘ಸಚಿವ ಸಂಪುಟ ಪೂರ್ಣ ಪ್ರಮಾಣದಲ್ಲಿ ಅಸ್ಥಿತ್ವಕ್ಕೆ ಬಂದು ವಾರವೂ ಆಗಿಲ್ಲ. ತರಾತುರಿಯಲ್ಲಿ ಅನುಷ್ಠಾನಗೊಳಿಸಲು ಆಗುವುದಿಲ್ಲ. ಬೇಕಾದ ತಯಾರಿಗಳನ್ನು ಸರ್ಕಾರ ಮಾಡಿಕೊಳ್ಳುತ್ತಿದೆ. ಐದು ಗ್ಯಾರಂಟಿಗಳನ್ನು ಜಾರಿ ಮಾಡುವ ಬಗ್ಗೆ ಯಾರಿಗೂ ಅನುಮಾನ ಬೇಡ. ಮಾರ್ಗಸೂಚಿಗಳನ್ನು ಸರ್ಕಾರ ರೂಪಿಸುತ್ತಿದೆ’ ಎಂದರು.

ADVERTISEMENT

‘ಬಿಜೆಪಿ ರೀತಿಯಲ್ಲಿ ಸುಳ್ಳು ಹೇಳಿಕೊಂಡು ಕಾಲ ಕಳೆಯುವ ಪಕ್ಷ ನಮ್ಮದಲ್ಲ. ಸ್ವಿಸ್ ಬ್ಯಾಂಕ್‌ನಲ್ಲಿರುವ ಕ‍ಪ್ಪು ಹಣ ತಂದು ತಲಾ ₹15 ಲಕ್ಷ ಹಂಚುತ್ತೇವೆ ಎಂದಿದ್ದರು. 2 ಕೋಟಿಯಷ್ಟು ಉದ್ಯೋಗ ಸೃಷ್ಟಿಸುವ ಭರವಸೆ ನೀಡಿದ್ದರು. ಇವೆಲ್ಲವೂ ಈಡೇರಿವೆಯೇ’ ಎಂದು ಪ್ರಶ್ನಿಸಿದರು.

‌‘ವಿದೇಶಗಳಿಗೆ ಹೋದಾಗ ಅಲ್ಲಿನ ಅನಿವಾಸಿ ಭಾರತೀಯರ ಬಗ್ಗೆ ಅಪಾರ ಪ್ರೀತಿಯನ್ನು ಪ್ರಧಾನಿ ತೋರಿಸುತ್ತಿದ್ದಾರೆ. ದೇಶದಲ್ಲಿನ ಜನರ ಬಗ್ಗೆ ಕಾಳಜಿ ಇಲ್ಲ. ಕುಸ್ತಿಪಟುಗಳು ನಡೆಸುತ್ತಿರುವ ಪ್ರತಿಭಟನೆ ಬಗ್ಗೆ ಬಿಜೆಪಿಯ ಯಾರೊಬ್ಬರೂ ಮಾತನಾಡುತ್ತಿಲ್ಲ. ಇವೆಲ್ಲವನ್ನೂ ಗಮನಿಸಿದರೆ ತೊಗಲಕ್ ದರ್ಬಾರ್‌ ನೆನಪಾಗುತ್ತಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.