ADVERTISEMENT

ನರಸಿಂಹರಾಜಪುರ | ಅಡುಗೆ ಅನಿಲ ಸೋರಿಕೆ: ಮುನ್ನೆಚ್ಚರಿಕೆ ವಹಿಸಿ, ಅಪಾಯ ತಡೆಗಟ್ಟಿ

​ಪ್ರಜಾವಾಣಿ ವಾರ್ತೆ
Published 15 ಏಪ್ರಿಲ್ 2025, 14:28 IST
Last Updated 15 ಏಪ್ರಿಲ್ 2025, 14:28 IST
ನರಸಿಂಹರಾಜಪುರ ತಾಲ್ಲೂಕಿನ ಗಾಂಧಿ ಗ್ರಾಮದಲ್ಲಿ ಸೋಮವಾರ ಅಗ್ನಿಶಾಮಕದಳದ ಸಿಬ್ಬಂದಿ ಅನಿಲ ಸೋರಿಕೆ ನಿರ್ವಹಣೆ ಕುರಿತು ಪ್ರಾತ್ಯಕ್ಷಿಕೆ ನೀಡಿದರು
ನರಸಿಂಹರಾಜಪುರ ತಾಲ್ಲೂಕಿನ ಗಾಂಧಿ ಗ್ರಾಮದಲ್ಲಿ ಸೋಮವಾರ ಅಗ್ನಿಶಾಮಕದಳದ ಸಿಬ್ಬಂದಿ ಅನಿಲ ಸೋರಿಕೆ ನಿರ್ವಹಣೆ ಕುರಿತು ಪ್ರಾತ್ಯಕ್ಷಿಕೆ ನೀಡಿದರು    

ನರಸಿಂಹರಾಜಪುರ: ‘ಅಡುಗೆ ಅನಿಲ ಸೋರಿಕೆಯಾಗುತ್ತಿರುವುದು ಗಮನಕ್ಕೆ ಬಂದ ತಕ್ಷಣವೇ ಕಿಟಕಿ, ಬಾಗಿಲುಗಳನ್ನು ತೆರೆದಿಡಬೇಕು’ ಎಂದು ಪ್ರಬಾರ ಅಗ್ನಿ ಶಾಮಕ ಠಾಣಾಧಿಕಾರಿ ದೇವೇಂದ್ರ ನಾಯಕ್ ಹೇಳಿದರು.

ತಾಲ್ಲೂಕಿನ ಗಾಂಧಿ ಗ್ರಾಮ ಹಾಗೂ ಸೂಸಲವಾನಿಯಲ್ಲಿ ಅಗ್ನಿಶಾಮಕ ಸೇವಾ ಸಪ್ತಾಹ ದಿನಾಚರಣೆ ಅಂಗವಾಗಿ, ಅಡುಗೆ ಅನಿಲ ಸೋರಿಕೆಯಾದ ಕೈಗೊಳ್ಳಬೇಕಾದ ತುರ್ತು ಕ್ರಮಗಳ ಕುರಿತು ಗ್ರಾಮಸ್ಥರಿಗೆ ಅವರು ಪ್ರಾತ್ಯಕ್ಷಿಕೆ ಮೂಲಕ ಮಾಹಿತಿ ನೀಡಿದರು.

‘ಅನಿಲ ಸೋರಿಕೆ ಆಗುತ್ತಿದ್ದರೆ ತಕ್ಷಣವೇ ಮನೆಯ ಕಿಟಕಿ, ಬಾಗಿಲು ತೆಗೆಯಬೇಕು. ಗಾಳಿ ಬೆಳಕು ಸರಾಗವಾಗಿ ಇರುವಂತೆ ನೋಡಿಕೊಳ್ಳಬೇಕು.ಯಾವುದೇ ಕಾರಣಕ್ಕೂ ಆ ಕೊಠಡಿಯ ವಿದ್ಯುತ್ ಸ್ವಿಚ್ ಆನ್ ಅಥವಾ ಆಫ್‌ ಮಾಡಲು ಹೋಗಬಾರದು. ಸಿಲಿಂಡರ್ ಅನ್ನು ಎಚ್ಚರಿಕೆಯಿಂದ ಮನೆಯಿಂದ ಹೊರಗೆ ತಂದು ಇಡಬೇಕು ಎಂದು ಸಲಹೆ ನೀಡಿದರು.

ADVERTISEMENT

ಸಿಲಿಂಡರ್‌ಗೆ ಬೆಂಕಿ ಹೊತ್ತಿಕೊಂಡರೆ ತಕ್ಷಣ ಬಟ್ಟೆಯನ್ನು ಒದ್ದೆ ಮಾಡಿ, ಅದರ ಮೇಲೆ ಹಾಕಿ ಸುತ್ತಬೇಕು. ಬೆಂಕಿ ಆರಿದ ನಂತರ ರೆಗ್ಯುಲೇಟರ್ ಆಪ್ ಮಾಡಬೇಕು. ಬೆಂಕಿಯಿಂದ ಹತ್ತಿರ ಹೋಗಲು ಸಾಧ್ಯವಾಗದಿದ್ದರೆ, ದೂರದಿಂದಲೇ ಪೈಪ್‌ನಿಂದ ನೀರು ಹಾಕಿ ಬೆಂಕಿಯನ್ನು ನಂದಿಸಬೇಕು. ಪ್ರತಿಯೊಬ್ಬರೂ 2 ವರ್ಷಗಳಿಗೊಮ್ಮೆ ಗ್ಯಾಸ್ ಟ್ಯೂಬ್ ಬದಲಾಯಿಸಿಕೊಳ್ಳಬೇಕು. ಐಎಸ್‌ಐ ಮಾರ್ಕ್‌ನ ಟ್ಯೂಬ್ ಹಾಕಿಸಬೇಕು. ಪ್ರತಿ ದಿನ ಗ್ಯಾಸ್ ಉಪಯೋಗಿಸಿದ ನಂತರ ರೆಗ್ಯುಲೇಟರ್‌ ಆಪ್ ಮಾಡಬೇಕು’ ಎಂದರು.

ಪ್ರಮುಖ ಅಗ್ನಿ ಶಾಮಕ ಡಿ.ಕೆ. ಸಂತೋಷಕುಮಾರ್, ಸಿಬ್ಬಂದಿ ಪಿ.ರಮೇಶ್, ಬಸವರಾಜ ಮೇಟಿ, ಡಿ.ಆರ್. ನವೀನ್ ನಾಯ್ಕ್, ಶಿವಾನಂದ ವಿ ಶಿಂದೆ ಇದ್ದರು. ಪಟ್ಟಣದ ಅಗ್ನಿಶ್ಯಾಮಕ ದಳದ ಕಚೇರಿಯಲ್ಲಿ ಹುತಾತ್ಮರಾದ ಅಗ್ನಿ ಶಾಮಕ ದಳದ ಸಿಬ್ಬಂದಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು. ಸಾರ್ವಜನಿಕರಿಗೆ ಕರಪತ್ರ ವಿತರಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.