ADVERTISEMENT

ಪೊಲೀಸರಿಂದಲೇ ಹಲ್ಲೆ, ಜಾತಿ ನಿಂದನೆ ಆರೋಪ: ದೂರು ನೀಡಿದ್ದ ಯುವಕ ಆತ್ಮಹತ್ಯೆ

​ಪ್ರಜಾವಾಣಿ ವಾರ್ತೆ
Published 14 ಆಗಸ್ಟ್ 2025, 5:51 IST
Last Updated 14 ಆಗಸ್ಟ್ 2025, 5:51 IST
ಕಳಸ ತಾಲ್ಲೂಕಿನ ಸಂಸೆಯ ಯುವಕ ನಾಗೇಶ್ ಆತ್ಮಹತ್ಯೆ ಬಗ್ಗೆ ತಪ್ಪಿತಸ್ಥ ಪೊಲೀಸರನ್ನು ಕೂಡಲೇ ಬಂಧಿಸಬೇಕು ಎಂದು ಆಗ್ರಹಿಸಿ ಸಂಬಂಧಿಕರು ಹೆಚ್ಚುವರಿ ಎಸ್‌ಪಿ ಜಯಕುಮಾರ್ ಅವರನ್ನು ಬುಧವಾರ ಒತ್ತಾಯಿಸಿದರು
ಕಳಸ ತಾಲ್ಲೂಕಿನ ಸಂಸೆಯ ಯುವಕ ನಾಗೇಶ್ ಆತ್ಮಹತ್ಯೆ ಬಗ್ಗೆ ತಪ್ಪಿತಸ್ಥ ಪೊಲೀಸರನ್ನು ಕೂಡಲೇ ಬಂಧಿಸಬೇಕು ಎಂದು ಆಗ್ರಹಿಸಿ ಸಂಬಂಧಿಕರು ಹೆಚ್ಚುವರಿ ಎಸ್‌ಪಿ ಜಯಕುಮಾರ್ ಅವರನ್ನು ಬುಧವಾರ ಒತ್ತಾಯಿಸಿದರು   

ಕಳಸ: ಸಂಸೆ ಗ್ರಾಮದಲ್ಲಿ ಪೊಲೀಸರೇ ಹಲ್ಲೆ ನಡೆಸಿ ಜಾತಿ ನಿಂದನೆ ಮಾಡಿದ್ದಾರೆ ಎಂದು  ದೂರು ನೀಡಿದ್ದ ಯುವಕನ ವಿರುದ್ಧವೇ ಪ್ರಕರಣ ದಾಖಲಾಗಿದ್ದು, ಇದರಿಂದ ಬೇಸತ್ತ ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಸಂಸೆ ಗ್ರಾಮದ ಬಸ್ತಿಗದ್ದೆ ನಿವಾಸಿ ದಲಿತ ಸಮುದಾಯಕ್ಕೆ ಸೇರಿದ ನಾಗೇಶ್‌ ಆತ್ಮಹತ್ಯೆಗೆ ಶರಣಾಗಿರುವ ಯುವಕ.

‘ಜುಲೈ 15ರಂದು ರಾತ್ರಿ 10.30ರ ಸುಮಾರಿನಲ್ಲಿ ಆಟೊರಿಕ್ಷಾದಲ್ಲಿ ತೆರಳುತ್ತಿದ್ದಾಗ ಕುದುರೆಮುಖ ಠಾಣೆಯ ಕಾನ್‌ಸ್ಟೆಬಲ್ ಸಿದ್ದೇಶ್ ಮತ್ತು ಇಬ್ಬರು ಸ್ಥಳೀಯರು ದಾರಿಗೆ ಅಡ್ಡಲಾಗಿ ವಾಹನ ನಿಲ್ಲಿಸಿಕೊಂಡು ನಿಂತಿದ್ದರು.  ರಿಕ್ಷಾದಿಂದ ಇಳಿದು ಮೊಬೈಲ್‌ ಫೋನ್‌ನಲ್ಲಿ ಟಾರ್ಚ್ ಹಾಕಿಕೊಂಡು ಸಮೀಪಕ್ಕೆ ಹೋದಾಗ ನಾವು ಮದ್ಯ ಸೇವಿಸುತ್ತಿರುವ ದೃಶ್ಯ ಸೆರೆ ಹಿಡಿಯುತ್ತೀಯಾ ಎಂದು ಪ್ರಶ್ನಿಸಿ ಜಾತಿ ನಿಂದನೆ ಮಾಡಿ ಹಲ್ಲೆ ನಡೆಸಿದ್ದರು’ ಎಂದು ನಾಗೇಶ್ ದೂರು ನೀಡಿದ್ದರು. ಬಳಿಕ ಒಂದು ವಾರ ಚಿಕ್ಕಮಗಳೂರಿನ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು.

ADVERTISEMENT

ಈ ದೂರಿನ ಬೆನ್ನಲ್ಲೇ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ ಎಂದು ಆರೋಪಿಸಿ ಕುದುರೆಮುಖ ಪೊಲೀಸರು ನಾಗೇಶ್ ವಿರುದ್ಧ ಪ್ರಕರಣ ದಾಖಲಿಸಿದ್ದರು. ಅಲ್ಲದೇ ಅವರ ಆಟೊರಿಕ್ಷಾ ಮತ್ತು ಅಡಿಕೆಗೆ ಔಷಧಿ ಸಿಂಪಡಿಸುವ ಯಂತ್ರ ವಶಪಡಿಸಿಕೊಂಡಿದ್ದರು ಎನ್ನಲಾಗಿದೆ.

ಈ ಆರೋಪ ಸಂಬಂಧ ನಾಗೇಶ್ ಜಾಮೀನು ಪಡೆದುಕೊಂಡಿದ್ದರು. ಆದರೆ, ತನ್ನ ಆಟೊ ಬಿಡಿಸಿಕೊಳ್ಳಲು ಹಣ ಇಲ್ಲದೆ, ದುಡಿಮೆಯೂ ಇಲ್ಲದೆ ಸಾಲದ ಕಂತು ಕೂಡ ಕಟ್ಟಲಾರದೆ ಆರ್ಥಿಕ ಸಂಕಷ್ಟದಿಂದ ಕಂಗಾಲಾಗಿದ್ದರು ಎಂದು ಸಂಬಂಧಿಕರು ತಿಳಿಸಿದ್ದಾರೆ.

ನಾಗೇಶ್ ಪತ್ನಿ ಹೆರಿಗೆಗೆ ಬಾಳೆಹೊಳೆಗೆ ಹೋಗಿದ್ದು ಒಂದೂವರೆ ತಿಂಗಳ ಮಗು ಇದೆ. ‘ಪೊಲೀಸರ ಜತೆಗೆ ಜಟಾಪಟಿ ನಂತರ ನಾಗೇಶ್ ತನ್ನ ಫೋನ್ ಕರೆಯನ್ನೂ ಸ್ವೀಕರಿಸುತ್ತಿರಲಿಲ್ಲ. ಪೊಲೀಸರ ಬಗ್ಗೆ ಹೆದರಿಕೊಂಡಿದ್ದರು’ ಎಂದು ಅವರ ಪತ್ನಿ ಹೇಳಿದರು.

ನಾಗೇಶ್ ಆತ್ಮಹತ್ಯೆಗೆ ಮೊದಲು ಬರೆದಿರುವ ಪತ್ರದಲ್ಲಿ ‘ನನ್ನ ಮೇಲೆ ಪೊಲೀಸ್ ಸಿಬ್ಬಂದಿಯ ದೌರ್ಜನ್ಯ ಮತ್ತು ಕುದುರೆಮುಖ ಸಬ್‌ ಇನ್‌ಸ್ಪೆಕ್ಟರ್ ಕೂಡ ಈ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎಂದು ಪ್ರಸ್ತಾಪಿಸಿದ್ದಾರೆ. ಆರೋಪಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು’ ಎಂದು ತಿಳಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಅವರ ಮೃತದೇಹವನ್ನು ಕಳಸ ಸಮುದಾಯ ಆರೋಗ್ಯ ಕೇಂದ್ರಕ್ಕೆ ತರಲಾಗಿತ್ತು. ಜಮಾಯಿಸಿದ ಸಂಬಂಧಿಕರು ಪ್ರತಿಭಟನೆ ನಡೆಸಿದರು.

ಮುಖಂಡ ಅಂಗಡಿ ಚಂದ್ರು ಮಾತನಾಡಿ, ‘ನಾಗೇಶ್ ಸಾವಿಗೆ ಕಾರಣರಾದ ಕಾನ್‌ಸ್ಟೆಬಲ್ ಸಿದ್ದೇಶ ಮತ್ತು ಸುಳ್ಳು ದೂರು ದಾಖಲು ಮಾಡಿದ ಸಬ್‌ ಇನ್‌ಸ್ಪೆಕ್ಟರ್ ಆದರ್ಶ್ ಅವರನ್ನು ಸೇವೆಯಿಂದ ವಜಾ ಮಾಡಿ ಬಂಧಿಸಬೇಕು. ನಾಗೇಶ್ ಕುಟುಂಬಕ್ಕೆ ₹50 ಲಕ್ಷ ಪರಿಹಾರ ನೀಡಬೇಕು’ ಎಂದು ಆಗ್ರಹಿಸಿದರು.

ದೂರು ಸ್ವೀಕರಿಸಿ ಮಾತನಾಡಿದ ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಯಕುಮಾರ್, ‘ನಾಗೇಶ್ ಸಾವಿನಿಂದ ನಮಗೂ ನೋವಾಗಿದೆ. ಒಂದು ತಿಂಗಳ ಮಗು ಮತ್ತು ಪತ್ನಿ ಬಗ್ಗೆ ನಮಗೂ ಸಹಾನುಭೂತಿ ಇದೆ. ತಪ್ಪಿತಸ್ಥರ ವಿರುದ್ಧ ದೂರು ದಾಖಲಿಸಿ ನಿಷ್ಪಕ್ಷಪಾತದ ಕ್ರಮ ಕೈಗೊಳ್ಳಲಾಗುವುದು’ ಎಂದು ಭರವಸೆ ನೀಡಿದರು.

ನಾಗೇಶ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.