ADVERTISEMENT

ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಗೆ ಬದ್ಧ: ಶಾಸಕ ಕೆ.ಎಸ್.ಆನಂದ್

₹65 ಲಕ್ಷ ವೆಚ್ಚದ ಗ್ರಾ.ಪಂಯ ನೂತನ ಕಟ್ಟಡ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ

​ಪ್ರಜಾವಾಣಿ ವಾರ್ತೆ
Published 15 ಜೂನ್ 2025, 14:16 IST
Last Updated 15 ಜೂನ್ 2025, 14:16 IST
ಬೀರೂರು ಸಮೀಪದ ಹುಲ್ಲೇಹಳ್ಳಿ ಗ್ರಾಮದಲ್ಲಿ ಭಾನುವಾರ ಗ್ರಾಮ ಪಂಚಾಯಿತಿ ಕಚೇರಿ ಕಟ್ಟಡ ನಿರ್ಮಾಣಕ್ಕೆ ಶಾಸಕ ಕೆ.ಎಸ್.ಆನಂದ್ ಭೂಮಿಪೂಜೆ ನೆರವೇರಿಸಿದರು
ಬೀರೂರು ಸಮೀಪದ ಹುಲ್ಲೇಹಳ್ಳಿ ಗ್ರಾಮದಲ್ಲಿ ಭಾನುವಾರ ಗ್ರಾಮ ಪಂಚಾಯಿತಿ ಕಚೇರಿ ಕಟ್ಟಡ ನಿರ್ಮಾಣಕ್ಕೆ ಶಾಸಕ ಕೆ.ಎಸ್.ಆನಂದ್ ಭೂಮಿಪೂಜೆ ನೆರವೇರಿಸಿದರು   

ಬೀರೂರು: ಕ್ಷೇತ್ರದ ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಶಾಸಕ ಕೆ.ಎಸ್.ಆನಂದ್ ತಿಳಿಸಿದರು.

ಬೀರೂರು ಹೋಬಳಿಯ ಹುಲ್ಲೇಹಳ್ಳಿಯಲ್ಲಿ ಭಾನುವಾರ ಎನ್‌ಆರ್‌ಇಜಿ, ರಾಷ್ಟ್ರೀಯ ಗ್ರಾಮ ಸ್ವರಾಜ್‌ ಅಡಿಯ ಅನುದಾನ, ವರ್ಗ1, ಹಾಗೂ 15ನೇ ಹಣಕಾಸು ನಿಧಿಯೂ ಸೇರಿ ಒಟ್ಟು ₹65 ಲಕ್ಷ ವೆಚ್ಚದಲ್ಲಿ ಗ್ರಾ.ಪಂಯ ನೂತನ ಕಟ್ಟಡ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.

ಪ್ರತಿಯೊಬ್ಬರೂ ಆರೋಗ್ಯಕರ ಬದುಕು ನಡೆಸಬೇಕೆಂದರೆ ಶುದ್ಧ ಕುಡಿಯುವ ನೀರು ದೊರೆಯಬೇಕು. ಸುಗಮ ಸಂಚಾರಕ್ಕೆ ಉತ್ತಮವಾದ ರಸ್ತೆಯ ಅಗತ್ಯವಿದೆ. ಪರಿಸರ ಅಚ್ಚುಕಟ್ಟಾಗಿ ಬರಬೇಕೆಂದರೆ ಚರಂಡಿ ವ್ಯವಸ್ಥೆ, ಕಸ ನಿರ್ವಹಣೆ ಹಾಗೂ ಬೀದಿದೀಪ ಅಗತ್ಯವಾಗಿದೆ. ಹಂತಹಂತವಾಗಿ ಈ ಎಲ್ಲ ಸೌಲಭ್ಯಗಳನ್ನೂ ಕಲ್ಪಿಸಲಾಗುವುದು ಎಂದರು.

ADVERTISEMENT

ಗ್ರಾಮ ಪಂಚಾಯಿತಿ ಅಧ್ಯಕ್ಷ ರುದ್ರಪ್ಪ ಮಾತನಾಡಿ, ಮಧ್ಯಮ ವರ್ಗದ ಜನರು ವಿವಾಹವೂ ಸೇರಿದಂತೆ ಬೇರೆ ಕಾರ್ಯಕ್ರಮ ನಡೆಸಲು ಅಗತ್ಯವಿರುವ ಸಮುದಾಯ ಭವನವನ್ನು ಶಾಸಕರು ನಮ್ಮ ಗ್ರಾಮದಲ್ಲಿ ನಿರ್ಮಿಸಲು ಮುಂದಾಗಿರುವುದು ಶ್ಲಾಘನೀಯ ಎಂದರು.

ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಎಂ.ಲಕ್ಷ್ಮಣ್ ಮಾತನಾಡಿ, ಗ್ರಾಮಕ್ಕೆ ಅಗತ್ಯವಿರುವ ಕಾಮಗಾರಿಗಳಿಗೆ ಅನುದಾನ ಮಂಜೂರು ಮಾಡಿರುವುದಕ್ಕೆ ಶಾಸಕರಿಗೆ ಆಭಾರಿಯಾಗಿದ್ದೇವೆ. ಗ್ರಾಮದ ಒಳಭಾಗದಲ್ಲಿ ಕಾಂಕ್ರೀಟ್ ರಸ್ತೆ ನಿರ್ಮಿಸಿಕೊಡುವಂತೆ ಮನವಿ ಮಾಡಿದರು.

ಇದೇ ಸಂದರ್ಭದಲ್ಲಿ ಹುಲ್ಲೇಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಯರೇಹಳ್ಳಿ ಗ್ರಾಮದಲ್ಲಿ ₹16 ಲಕ್ಷ ವೆಚ್ಚದಲ್ಲಿ ಶುದ್ಧಗಂಗಾ ಘಟಕಕ್ಕೆ ಶಾಸಕರು ಭೂಮಿಪೂಜೆ ನೆರವೇರಿಸಿದರು. ಹುಲ್ಲೇಹಳ್ಳಿ ಗ್ರಾಮದ ಪ್ರವೇಶದ್ವಾರದಲ್ಲಿ ನಿರ್ಮಿಸಲಾಗಿದ್ದ ₹2.50 ಲಕ್ಷ ವೆಚ್ಚದ ಸ್ವಾಗತ ಕಮಾನು ಉದ್ಘಾಟಿಸಿ, ₹15 ಲಕ್ಷ ವೆಚ್ಚದಲ್ಲಿ ಗ್ರಾಮದಲ್ಲಿ ಶ್ರೀಲಕ್ಷ್ಮೀ ನರಸಿಂಹಸ್ವಾಮಿ ಸಮುದಾಯ ಭವನ ನಿರ್ಮಾಣಕ್ಕೆ ಭೂಮಿಪೂಜೆ ನಡೆಸಿದರು.

ಗ್ರಾಮ ಪಂಚಾಯಿತಿ ಸದಸ್ಯರಾದ ಮೂರ್ತಿ, ಲೋಕೇಶ್, ನರಸಿಂಹಮೂರ್ತಿ, ಸ್ನೇಹಾ ಸುರೇಶ್‌, ಶಾಂತಮ್ಮ ಕುಮಾರ್‌, ಧನಲಕ್ಷ್ಮಿ ಗೋಪಾಲ್ ಹಾಗೂ ಮುಖಂಡರಾದ ಮುದಿಯಪ್ಪ, ಮಲ್ಲಾಬೋವಿ, ಜೋಡಿತಿಮ್ಮಾಪುರ ಗ್ರಾಮ ಪಂಚಾಯಿತಿ ಅಧ್ಯಕ್ಷ ಆನಂದ್, ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಗೋವಿಂದಸ್ವಾಮಿ, ಗಾಳಿಹಳ್ಳಿ ಕೃಷ್ಣಮೂರ್ತಿ, ಬೀರೂರು ಪುರಸಭೆ ಸದಸ್ಯ ಬಿ.ಕೆ.ಶಶಿಧರ್, ಸುರೇಶ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.