ಕೊಪ್ಪ: ತಾಲ್ಲೂಕಿನಲ್ಲಿ ರೈತರ ಜಮೀನಿಗೆ ಹಾನಿ ಮಾಡುತ್ತಿರುವ ಆನೆಯನ್ನು ಶೀಘ್ರ ಸೆರೆ ಹಿಡಿಯುವ ಕೆಲಸ ಮಾಡಬೇಕು. ಆತಂಕದಿಂದ ತೋಟವನ್ನು ಹಾಳು ಬಿಡುವಂತಾಗಿದೆ. ಸತ್ತಾಗ ಮನುಷ್ಯನ ಜೀವಕ್ಕೆ ಕೊಡುವ ಹಣದ ಬದಲು ಆನೆ ಸೆರೆ ಹಿಡಿಯಲು ಖರ್ಚು ಮಾಡಿ. ಆಗ ಜೀವವಾದರೂ ಉಳಿಯುತ್ತದೆ ಎಂದು ಮುಖಂಡ ಡಿ.ಎನ್. ಜೀವರಾಜ್ ಹೇಳಿದರು.
ಉಪ ಅರಣ್ಯ ಸಂರಕ್ಷಣಾಧಿಕಾರಿ ಕಚೇರಿ ಎದುರು ಮಂಗಳವಾರ ತಾಲ್ಲೂಕಿನ ಮರಿತೊಟ್ಟಿಲು, ನರಸೀಪುರ, ತುಳುವಿನಕೊಪ್ಪ ಗ್ರಾಮಸ್ಥರು ನಡೆಸಿದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ನಕಲಿ ಪರಿಸರವಾದಿಗಳಿಂದ ಮಲೆನಾಡಿಗರ ಬದುಕಿಗೆ ತೊಂದರೆ ಉಂಟಾಗುತ್ತಿದೆ ಎಂದರು.
ಕಾಡಾನೆ ರೈತರ ಜಮೀನಿನಲ್ಲಿ ಬೆಳೆ ಹಾನಿ ಮಾಡುತ್ತಿರುವುದು ಮಾತ್ರವಲ್ಲ ಜನರ ಜೀವಕ್ಕೆ ಅಪಾಯ ತಂದೊಡ್ಡಿದೆ. ಆನೆಗಳ ಸಂಖ್ಯೆ ಜಾಸ್ತಿಯಾದಲ್ಲಿ ಕಾಡು ಬೆಳೆಯುವುದಿಲ್ಲ. ಭದ್ರಾ ನದಿಯಿಂದ ಕಾಡಾನೆ ಈಚೆ ಬಂದಿವೆ ಎಂದು ನಾನು ಚುನಾವಣೆ ಸೋತ ವರ್ಷ ಎನ್.ಆರ್.ಪುರದ ಸಭೆಯೊಂದರಲ್ಲಿ ಹೇಳಿದ್ದೆ. ಆದರೆ ಅಂದು ನನ್ನ ಮಾತನ್ನು ಕಡೆಗಣಿಸಿದ್ದರು ಎಂದರು.
ಸರ್ಕಾರದ ಮಟ್ಟದಲ್ಲಿ ಕ್ರಮ ಕೈಗೊಳ್ಳಬೇಕಾದ ಶಾಸಕರು, ಇತ್ತೀಚೆಗೆ ಬಾಳೆಹೊನ್ನೂರಿನಲ್ಲಿ ನಾವು ಪ್ರತಿಭಟನೆ ನಡೆಸುವಾಗ ಬಂದು ಕೈಕಟ್ಟಿಕೊಂಡು ನಿಂತಿದ್ದರು. ಅವರ ಜವಾಬ್ದಾರಿ ಅರಿಯಬೇಕು. ಆನೆ ದಾಳಿಯಿಂದ ಸಾವಾದರೆ ಅದಕ್ಕೆ ಅರಣ್ಯ ಇಲಾಖೆಯೇ ಹೊಣೆಯಾಗಬೇಕು. ಮಲೆನಾಡಿನ ಜನರಿಗೆ ಬದುಕಲು ಅವಕಾಶ ಮಾಡಿಕೊಡಿ ಇಲ್ಲವೇ ಸಾಮೂಹಿಕವಾಗಿ ವಿಷ ಹಾಕಿ ಬಿಡಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಾಡಾನೆ, ಕಾಡು ಕೋಣ ಕಾಡಿನಲ್ಲಿ ಇರುವುದಕ್ಕೆ ನಮ್ಮ ಅಭ್ಯಂತರವಿಲ್ಲ. ಆದರೆ ಜನವಸತಿ ಪ್ರದೇಶಕ್ಕೆ ಲಗ್ಗೆ ಇಟ್ಟು ರೈತರಿಗೆ ತೀವ್ರ ತೊಂದರೆ ಮಾಡುತ್ತಿವೆ. ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರು ಮನೆ ಬಳಿ ಕಟ್ಟಿಕೊಳ್ಳಲಿ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕೊಟ್ಟಿಗೆ ಇದ್ದರೆ ಅಲ್ಲಿ ಕಟ್ಟಿಹಾಕಲಿ. ಶಾಸಕ ರಾಜೇಗೌಡ ಅವರು ತೋಟದಲ್ಲಿ ಬಿಟ್ಟುಕೊಳ್ಳಲಿ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಹೋರಾಟಗಾರ ಅಭಿಷೇಕ್ ಮಾತನಾಡಿ, ಕಾಡಾನೆ ದಾಳಿಯಿಂದ ಐವರು ಮೃತಪಟ್ಟಿದ್ದರೂ ಇಲಾಖೆ ಹಗುರವಾಗಿ ಪರಿಗಣಿಸಿದೆ. ಇನ್ನೊಂದು ಸಾವು– ನೋವು ಆಗುವ ಮುನ್ನ ಕ್ರಮವಾಗಬೇಕು. ನಿತ್ಯ ತೋಟ ಹಾಳು ಮಾಡುತ್ತಿದೆ ಎಂದರೆ ವಲಯ ಅರಣ್ಯ ಅಧಿಕಾರಿ, ಡಿಸಿಎಫ್ ಸ್ಥಳಕ್ಕೆ ಬರುವುದಿಲ್ಲ ಎಂದರೆ ಏನರ್ಥ ಎಂದು ಪ್ರಶ್ನಿಸಿದರು.
ಇದೇ ತಿಂಗಳ 25ನೇ ತಾರೀಖಿನ ಒಳಗಾಗಿ ಆನೆ ಸೆರೆ ಹಿಡಿಯದಿದ್ದರೆ ಸಮಿತಿಯಿಂದ ದೊಡ್ಡ ಮಟ್ಟದ ಹೋರಾಟಕ್ಕೆ ಕರೆಕೊಡುತ್ತೇವೆ. ನಂತರ ಸರ್ಕಾರವೇ ಹೊಣೆ ಹೊರಬೇಕು. ಅರಣ್ಯ ಸಚಿವರನ್ನು ಬಾಳೆಹೊನ್ನೂರಿಗೆ ಕರೆಸಿ ಸಮಸ್ಯೆ ಬಗೆಹರಿಸುವುದಾಗಿ ಶಾಸಕರು ಹೇಳಿದ್ದಾರೆ. ರೈತರ ಸಮಸ್ಯೆ ನೀವಾರಿಸುವ ನಿಟ್ಟಿನಲ್ಲಿ ಅದಕ್ಕೆ ಶಾಸಕರು ಅವಕಾಶ ಮಾಡಿಕೊಡಬೇಕು ಎಂದರು.
ಮುಖಂಡ ಎಚ್.ಎಂ. ರವಿಕಾಂತ್ ಮಾತನಾಡಿ, ಹೊಸ ಹೊಸ ಕಾನೂನುಗಳಿಂದಾಗಿ ರೈತರ ಜೀವನ ಕಷ್ಟಕರವಾಗಿದೆ. ಮಲೆನಾಡಿನಲ್ಲಿ ಜನಸಂಖ್ಯೆಗಿಂತ ಹೆಚ್ಚು ಹಂದಿಗಳು ಇವೆ. ಇಲ್ಲಿ ಬಂದಿರುವ ಆನೆ ಪುಂಡಾನೆ. ಆನೆಯನ್ನು ಓಡಿಸುವುದಲ್ಲ, ಸೆರೆ ಹಿಡಿಯಬೇಕು. ರೈತರ ಕುರಿತು ಅಲಕ್ಷ್ಯ ಸರಿಯಲ್ಲ. ಅರಣ್ಯವೇ ಗೊತ್ತಿಲ್ಲದ, ಬದುಕಿನ ರೀತಿ ನೀತಿ ಗೊತ್ತಿಲ್ಲದವರು ಅರಣ್ಯ ಸಚಿವರಾಗುವುದು ದುರಂತ ಸಂಗತಿ. ಅರಣ್ಯ ಸಚಿವರು ಕೊಪ್ಪಕ್ಕೆ ಒಂದು ಬಾರಿಯೂ ಬಂದಿಲ್ಲ. ಮಲೆನಾಡಿಗೆ ಎಷ್ಟು ಬಾರಿ ಬಂದಿದ್ದಾರೆ ಎಂದು ಪ್ರಶ್ನಿಸಿದರು.
ಮುಖಂಡ ನಾರ್ವೆ ಅನಿಲ್ ಕುಮಾರ್ ಮಾತನಾಡಿದರು. ತಹಶೀಲ್ದಾರ್ ಲಿಖಿತಾ ಮೋಹನ್, ಸರ್ಕಲ್ ಇನ್‌ಸ್ಪೆಕ್ಟರ್ ಗುರುದತ್ ಕಾಮತ್, ಸಬ್ ಇನ್‌ಸ್ಪೆಕ್ಟರ್ ಜಿ.ಕೆ. ಬಸವರಾಜ್ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದರು.
ಕಾಡಾನೆ ಸೆರೆ ಹಿಡಿಯಲು ಮನವಿ
ಕಾಡಾನೆ ಸೆರೆ ಹಿಡಿಯುವಂತೆ ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರಿಗೆ ಉಪ ಅರಣ್ಯ ಸಂರಕ್ಷಣಾಧಿಕಾರಿ ಶಿವಶಂಕರ್ ಅವರ ಮೂಲಕ ಪ್ರತಿಭಟನಾಕಾರರು ಮನವಿ ಸಲ್ಲಿಸಿದರು. ‘ಕಾಡಾನೆಯೊಂದು ಕುಂಚೂರು ಹುಲುಗಾರು ಉಡಾಣ ಅಂದಗಾರು ತನೂಡಿ ಆರೂರು ಕಾಚಗಲ್ ಮರಿತೊಟ್ಟಿಲು ಸೋಮ್ಲಾಪುರ ಭಾಗದಲ್ಲಿ ಕೃಷಿ ಜಮೀನುಗಳಿಗೆ ದಾಳಿ ನಡೆಸಿ ಭತ್ತ ಅಡಿಕೆ ತೆಂಗು ಕಾಫಿ ಮುಂತಾದ ಬೆಳೆ ನಾಶ ಮಾಡಿದೆ’ ಎಂದು ಮನವಿ ಪತ್ರದಲ್ಲಿ ತಿಳಿಸಿದ್ದಾರೆ. ಕೃಷಿ ಚಟುವಟಿಕೆಗಳನ್ನು ನಡೆಸಲು ರೈತರು ಕೃಷಿ ಕಾರ್ಮಿಕರು ಜೀವ ಭಯದಿಂದ ಹಿಂದೇಟು ಹಾಕುತ್ತಿದ್ದಾರೆ. ಶೃಂಗೇರಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಇದುವರೆಗೆ ಐವರನ್ನು ಕಾಡಾನೆಗಳು ಸಾಯಿಸಿವೆ. ಮನೆಯಂಗಳಕ್ಕೂ ಕಾಡಾನೆ ಬರುತ್ತಿದ್ದು ಆತಂಕವಾಗಿದೆ. ಈ ಹಿಂದೆಯೂ ಕಾಡಾನೆ ಸೆರೆ ಹಿಡಿಯಲು ಅರಣ್ಯ ಇಲಾಖೆಗೆ ಮನವಿ ಮಾಡಿದರು ಪ್ರಯೋಜನವಾಗಿಲ್ಲ. ಕಾಡಾನೆ ಸೆರೆ ಹಿಡಿದು ನಷ್ಟವಾದ ಜಮೀನು ಬೆಳೆಗಳಿಗೆ ಪರಿಹಾರ ಕೊಡಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.