ADVERTISEMENT

ಸರ್ಕಾರಿ ಆಸ್ಪತ್ರೆ ಸಿಬ್ಬಂದಿ ಬಾಡಿಗೆ ಕಟ್ಟಡದಲ್ಲಿ ವಾಸ

ಹೆಚ್ಚುವರಿ ವಸತಿ ಗೃಹ ಮಂಜೂರಿಗೆ ಆಗ್ರಹ

ರಾಘವೇಂದ್ರ ಕೆ.ಎನ್
Published 21 ಅಕ್ಟೋಬರ್ 2022, 6:47 IST
Last Updated 21 ಅಕ್ಟೋಬರ್ 2022, 6:47 IST
ಶೃಂಗೇರಿ ಸಾರ್ವಜನಿಕ ಆಸ್ಪತ್ರೆ ಬಳಿ ಇರುವ ಮೂಲ ಸೌಕರ್ಯ ಇಲ್ಲದ ಸಿಬ್ಬಂದಿ ವಸತಿ ನಿಲಯ ಸುತ್ತ ಗಿಡ–ಗಂಟಿ ಬೆಳೆದಿರುವುದು.
ಶೃಂಗೇರಿ ಸಾರ್ವಜನಿಕ ಆಸ್ಪತ್ರೆ ಬಳಿ ಇರುವ ಮೂಲ ಸೌಕರ್ಯ ಇಲ್ಲದ ಸಿಬ್ಬಂದಿ ವಸತಿ ನಿಲಯ ಸುತ್ತ ಗಿಡ–ಗಂಟಿ ಬೆಳೆದಿರುವುದು.   

ಶೃಂಗೇರಿ: ಇಲ್ಲಿನ ಸಾರ್ವಜನಿಕ ಆಸ್ಪತ್ರೆಯ ಎಲ್ಲ ವೈದ್ಯರು ಹಾಗೂ ಸಿಬ್ಬಂದಿಗೆ ವಸತಿ ವ್ಯವಸ್ಥೆ ಇಲ್ಲದ ಕಾರಣ ಬಾಡಿಗೆ ಕಟ್ಟಡದ ಅವಲಂಬನೆ ಅನಿವಾರ್ಯವಾಗಿದೆ.

2009ರಲ್ಲಿಯೇ 30 ಹಾಸಿಗೆ ಸಾಮರ್ಥ್ಯದ ಇಲ್ಲಿನ ಆಸ್ಪತ್ರೆ ಮೇಲ್ದರ್ಜೆಗೆ ಏರಿಕೆಯಾಗಲು ಶಿಫಾರಸುಗೊಂಡಿದ್ದರೂ, ಸ್ಥಳಾವಕಾಶದ ಕಾರಣದಿಂದ ಮೇಲ್ದರ್ಜೆಗೆ ಏರಿಲ್ಲ. ಇರುವ ಸಿಬ್ಬಂದಿಗೂ ಅಗತ್ಯ ವಸತಿ ಗೃಹದ ವ್ಯವಸ್ಥೆ ಆಗಿಲ್ಲ.ಆಸ್ಪತ್ರೆ ಸಮೀಪದ ಎರಡು ವೈದ್ಯರ ವಸತಿ ಗೃಹಗಳಲ್ಲಿ ಒಂದು ಪೂರ್ಣವಾಗಿ ಶಿಥಿಲಗೊಂಡಿದ್ದು, ವಾಸವಿರಲು ಸಾಧ್ಯವಿಲ್ಲ. ಮುಖ್ಯ ವೈದ್ಯಾಧಿಕಾರಿ ಇರುವ ವಸತಿ ಗೃಹವನ್ನು ಸ್ವಂತ ಖರ್ಚಿನಿಂದ ದುರಸ್ತಿ ಮಾಡಿಸಿಕೊಂಡಿದ್ದಾರೆ.

ಇನ್ನೊಂದು ವೈದ್ಯರ ವಸತಿ ಗೃಹ ಕಟ್ಟಡ ಹಳೆಯದಾಗಿದ್ದು, ಸುತ್ತಲೂ ಗಿಡ ಗಂಟಿ ಬೆಳೆದಿವೆ. ಕಟ್ಟಡವು ಸೋರಿಕೆಯಾಗುತ್ತಿದ್ದು, ಮೇಲೆ ಶೀಟ್ ಹಾಕಲಾಗಿದೆ. ಬಣ್ಣ ಕಾಣದಿರುವ ಗೋಡೆ, ಸ್ವಚ್ಛತೆ ಕಾಣದಿರುವುದರಿಂದ ವಾಸಕ್ಕೆ ಸೂಕ್ತವಾಗಿಲ್ಲ. ದಾದಿಯರು ಮತ್ತು ‘ಡಿ’ ದರ್ಜೆ ನೌಕರರಿಗಾಗಿ ನಾಲ್ಕು ವಸತಿ ಗೃಹಗಳು ಇದ್ದು, ಇವೆಲ್ಲ ಭರ್ತಿಯಾಗಿವೆ. ಇಲ್ಲಿಯೂ ಕಟ್ಟಡದ ಸುತ್ತಲೂ ಗಿಡ ಗಂಟಿ ಬೆಳೆದು ವಾಸನೆಯಿಂದ ನಾರುತ್ತಿದೆ.

ADVERTISEMENT

ಆಸ್ಪತ್ರೆಯಲ್ಲಿ ಇರುವ ವೈದ್ಯರು ಮತ್ತು ಸಿಬ್ಬಂದಿಗೆ ಹೆಚ್ಚು ವಸತಿಗೃಹದ ಅಗತ್ಯವಿದೆ. ಇರುವ ವಸತಿ ಗೃಹವನ್ನು ನೋಡಿಕೊಳ್ಳಬೇಕಾಗಿದೆ. ಬೇಗಾರ್ ಆರೋಗ್ಯ ಕೇಂದ್ರದ ವ್ಯಾಪ್ತಿಗೆ ಹರೂರು, ಕೆರೆಕಟ್ಟೆ, ಕಿಗ್ಗಾ, ಗಂಡಘಟ್ಟ, ಕುಪ್ಪನಮಕ್ಕಿ ಮತ್ತು ಹೊಳೆಕೊಪ್ಪ ಆರೋಗ್ಯ ಕೇಂದ್ರದ ವಸತಿ ಗೃಹಗಳು ಖಾಲಿ ಇವೆ. ಬೇಗಾರ್ ಆಸ್ಪತ್ರೆ ವಸತಿ ಗೃಹಗಳು ಹಳೆಯದಾಗಿದ್ದು, ಶಿಥಿಲಾವಸ್ಥೆ ತಲುಪಿವೆ. ವಸತಿ ನಿಲಯ ಇದ್ದರೂ ಅನುಪಯುಕ್ತವಾಗಿದೆ. ನೆಮ್ಮಾರ್‌ನಲ್ಲಿರುವ ವೈದ್ಯರ ವಸತಿ ಗೃಹವು ಸುಸ್ಥಿತಿಯಲ್ಲಿಲ್ಲ.

ಸಾರ್ವಜನಿಕ ಆಸ್ಪತ್ರೆಯ ವಸತಿ ಗೃಹಕ್ಕೆ ವಿದ್ಯಾರಣ್ಯಪುರ ಗ್ರಾಮ ಪಂಚಾಯಿತಿ ಮೂಲಕ ತುಂಗಾ ನದಿಯಿಂದ ನೀರು ಪೂರೈಕೆಯಾಗುತ್ತಿದ್ದು, ಪ್ರವಾಹ ಮತ್ತಿತತರ ಸಂದರ್ಭದಲ್ಲಿ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗುತ್ತದೆ. ಶಾಶ್ವತ ನೀರಿನ ವ್ಯವಸ್ಥೆ ಆಗಬೇಕು. ವೈದ್ಯರು ಹಾಗೂ ಸಿಬ್ಬಂದಿ ವಸತಿ ಗೃಹಗಳಿಗೆ ಕಾಂಪೌಂಡ್ ನಿರ್ಮಾಣವಾಗಬೇಕು ಮತ್ತು ಸೋಲಾರ್ ಬೆಳಕಿನ ವ್ಯವಸ್ಥೆಯೂ ಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.