ADVERTISEMENT

ವಿಜಯೋತ್ಸವದಲ್ಲಿ ನಡೆದ ಕಾಲ್ತುಳಿತಕ್ಕೆ ಸರ್ಕಾರವೇ ಹೊಣೆ: ಬಿ.ರುದ್ರಯ್ಯ

ಸುದ್ದಿಗೋಷ್ಠಿಯಲ್ಲಿ ಬಿ.ರುದ್ರಯ್ಯ ಆರೋಪ

​ಪ್ರಜಾವಾಣಿ ವಾರ್ತೆ
Published 5 ಜೂನ್ 2025, 14:11 IST
Last Updated 5 ಜೂನ್ 2025, 14:11 IST
ಬಿ. ರುದ್ರಯ್ಯ
ಬಿ. ರುದ್ರಯ್ಯ   

ಮೂಡಿಗೆರೆ: ಆರ್‌ಸಿಬಿ ಗೆಲುವಿನ ವಿಜಯೋತ್ಸವದಲ್ಲಿ ಉಂಟಾದ ಕಾಲ್ತುಳಿತಕ್ಕೆ ರಾಜ್ಯ ಸರ್ಕಾರವೇ ನೇರ ಹೊಣೆಯಾಗಿದೆ ಎಂದು ಸಿಪಿಐ(ಎಂಎಲ್)‌ ರಾಜ್ಯ ಘಟಕದ ಕಾರ್ಯದರ್ಶಿ ಬಿ.ರುದ್ರಯ್ಯ ಆರೋಪಿಸಿದರು.

ಪಟ್ಟಣದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ದುರ್ಘಟನೆಗೆ ಸಿಪಿಐ(ಎಂಎಲ್)ನ ರಾಜ್ಯ ಸಮಿತಿ ವಿಷಾದ ವ್ಯಕ್ತಪಡಿಸುತ್ತದೆ. ಘಟನೆಯಲ್ಲಿ ಮೃತಪಟ್ಟವರಿಗೆ ಹಾಗೂ ಗಾಯಗೊಂಡವರಿಗೆ ಸರ್ಕಾರ ಹೆಚ್ಚಿನ ಪರಿಹಾರ ವಿತರಿಸಬೇಕು ಎಂದು ಪಕ್ಷ ಒತ್ತಾಯಿಸುತ್ತದೆʼ ಎಂದರು.

‘ಕ್ರಿಕೆಟ್ ಒಂದು ಕ್ರೀಡೆಯಾಗಿ ಉಳಿದಿಲ್ಲ. ಇದು ಕಾರ್ಪೊರೇಟ್, ಹಣಕಾಸು ಬಂಡವಾಳದ ಮೋಜಿನ ಕ್ರೀಡೆಯಾಗಿದೆ. ಶ್ರೀಮಂತ ಮಕ್ಕಳ ಕ್ರೀಡೆಯಾಗಿ ಬದಲಾಗಿ ದೇಶದ ಯುವಜನರನ್ನು ಉನ್ಮಾದದ ಮೂಲಕ ತಮ್ಮ ರಾಜಕೀಯ ಲಾಭಕ್ಕಾಗಿ ಇಂತಹ ಪಂದ್ಯಾವಳಿಗಳಿಗೆ ಅವಕಾಶ ಕಲ್ಪಿಸಲಾಗುತ್ತಿದೆʼ ಎಂದು ಆರೋಪಿಸಿದರು.

ADVERTISEMENT

‘ಈಗಾಗಲೇ ದೇಶದಲ್ಲಿ ಶೇ 60ರಷ್ಟು ಜನರ ದಿನದ ಆದಾಯ ನೂರು ರೂಪಾಯಿ ಆಗಿದ್ದು, ಶೇ 40ರಷ್ಟು ಜನ ಎರಡು ಹೊತ್ತಿನ ಊಟ ಮಾಡಲು ಕಷ್ಟ ಪಡುತ್ತಿರುವ ಪರಿಸ್ಥಿತಿಯನ್ನು ಸರ್ಕಾರದ ಸಂಸ್ಥೆಗಳು ಅಧ್ಯಯನ ಮಾಡಿ ಸರ್ಕಾರಕ್ಕೆ ವರದಿ ನೀಡಿವೆ. ದೇಶದ ರೈತರು ತಮ್ಮ ಬೆಳೆಗಳಿಗೆ ಬೆಂಬಲ ಬೆಲೆಗಾಗಿ ಹಲವಾರು ವರ್ಷಗಳಿಂದ ಸಂಘರ್ಷ ಮಾಡುತ್ತಿದ್ದಾರೆ. ಶಿಕ್ಷಣ, ಆರೋಗ್ಯ ಸೇರಿದಂತೆ ಸಾರ್ವಜನಿಕ ವಲಯದ ಕ್ಷೇತ್ರಗಳಲ್ಲಿ ಸರ್ಕಾರ ಖಾಸಗಿಯವರಿಗೆ ಬಂಡವಾಳ ಹೂಡಿಕೆಗೆ ಅನುಮತಿ ನೀಡಿದೆ. ಇದರಿಂದಾಗಿ ದೇಶದಲ್ಲಿ ಹಸಿವಿನಿಂದ ಸಾವುಗಳು ಸಂಭವಿಸುತ್ತಿವೆ. ಈ ನೈಜ ಸಮಸ್ಯೆಗಳನ್ನು ಜನರಿಂದ ಮುಚ್ಚಿಟ್ಟು ಕ್ರಿಕೆಟ್ ನಂತಹ ಬಂಡವಾಳಗಾರರ ಆಟವನ್ನು ದೇಶಾದ್ಯಂತ ವಿಸ್ತರಿಸಿ ಯುವಜನತೆಯನ್ನು ಉನ್ಮಾದಗೊಳಿಸಲಾಗುತ್ತಿದೆʼ ಎಂದು ಅವರು ಆರೋಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.