ADVERTISEMENT

ಅಕ್ರಮ ಮದ್ಯ ಮಾರಾಟಗಾರರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ: ಹಾಲಮೂರ್ತಿ

ತರೀಕೆರೆ–ಅಜ್ಜಂಪುರ ತಾಲ್ಲೂಕಿನ ಪರಿಶಿಷ್ಟ ಜಾತಿ, ಪಂಗಡದವರ ಕುಂದುಕೊರತೆ ಸಭೆ

​ಪ್ರಜಾವಾಣಿ ವಾರ್ತೆ
Published 11 ಜೂನ್ 2025, 14:48 IST
Last Updated 11 ಜೂನ್ 2025, 14:48 IST
ತರೀಕೆರೆ ಅಂಬೇಡ್ಕರ್‌ ಭವನದಲ್ಲಿ ಆಯೋಜಿಸಿದ್ದ ತರೀಕೆರೆ ಮತ್ತು ಅಜ್ಜಂಪುರ ತಾಲ್ಲೂಕಿನ ಪರಿಶಿಷ್ಟ ಜಾತಿ ಮತ್ತು ಪಂಗಡದವರ ಕುಂದುಕೊರತೆ ಸಭೆಯ ಅಧ್ಯಕ್ಷತೆ ವಹಿಸಿ ತರೀಕೆರೆ ಪೊಲೀಸ್ ಉಪಾಧೀಕ್ಷಕ ಹಾಲಮೂರ್ತಿ ಮಾತನಾಡಿದರು
ತರೀಕೆರೆ ಅಂಬೇಡ್ಕರ್‌ ಭವನದಲ್ಲಿ ಆಯೋಜಿಸಿದ್ದ ತರೀಕೆರೆ ಮತ್ತು ಅಜ್ಜಂಪುರ ತಾಲ್ಲೂಕಿನ ಪರಿಶಿಷ್ಟ ಜಾತಿ ಮತ್ತು ಪಂಗಡದವರ ಕುಂದುಕೊರತೆ ಸಭೆಯ ಅಧ್ಯಕ್ಷತೆ ವಹಿಸಿ ತರೀಕೆರೆ ಪೊಲೀಸ್ ಉಪಾಧೀಕ್ಷಕ ಹಾಲಮೂರ್ತಿ ಮಾತನಾಡಿದರು   

ತರೀಕೆರೆ: ಪರಿಶಿಷ್ಟರ ಕಾಲೊನಿ ಮತ್ತು ಇನ್ನಿತರೆ ಸಾರ್ವಜನಿಕ ಸ್ಥಳಗಳಲ್ಲಿ ಅಕ್ರಮ ಮದ್ಯ ಮಾರಾಟ ಮಾಡುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮಕೈಗೊಳ್ಳಲಾಗುವುದು ಎಂದು ತರೀಕೆರೆ ಪೊಲೀಸ್ ಉಪಾಧೀಕ್ಷಕ ಹಾಲಮೂರ್ತಿ ಹೇಳಿದರು.

ಪಟ್ಟಣದ ಅಂಬೇಡ್ಕರ್‌ ಭವನದಲ್ಲಿ ಆಯೋಜಿಸಿದ್ದ ತರೀಕೆರೆ ಮತ್ತು ಅಜ್ಜಂಪುರ ತಾಲ್ಲೂಕಿನ ಪರಿಶಿಷ್ಟ ಜಾತಿ ಮತ್ತು ಪಂಗಡದವರ ಕುಂದು-ಕೊರತೆ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಅಕ್ರಮ ಮದ್ಯ ಮಾರಾಟದಿಂದ ಶಾಲಾ–ಕಾಲೇಜು ವಿದ್ಯಾರ್ಥಿಗಳು, ಸ್ಥಳೀಯರು ಹೆಚ್ಚಿನ ಸಂಖ್ಯೆಯಲ್ಲಿ ಮದ್ಯವ್ಯಸನಿಗಳಾಗಿ ಜೀವನ ಹಾಳು ಮಾಡಿಕೊಳ್ಳುತ್ತಿದ್ದು, ಇದನ್ನು ತಪ್ಪಿಸಬೇಕು ಎಂದು ಅಬಕಾರಿ ಮತ್ತು ಪೊಲೀಸ್ ಇಲಾಖಾಧಿಕಾರಿಗಳಿಗೆ ಸೂಚಿಸಿದರು.

ADVERTISEMENT

ತರೀಕೆರೆ ತಾಲ್ಲೂಕು, ಅಮೃತಾಪುರ ಹೊಬಳಿ, ನಾಗರಾಜಪುರ ಗ್ರಾಮದ ಸರ್ವೆ ನಂ.34ರಲ್ಲಿ 2ಎಕರೆ ಜಾಗ ಸ್ಮಶಾನಕ್ಕೆ ನಿಗದಿಯಾಗಿದ್ದು, ಇಲ್ಲಿ ಶವಸಂಸ್ಕಾರ ಮಾಡಲು ಅರಣ್ಯ ಇಲಾಖೆಯವರು ಅವಕಾಶ ನೀಡುತ್ತಿಲ್ಲ. ಅಲ್ಲದೆ ಪರಿಶಿಷ್ಟರು ಇದೇ ಸರ್ವೆ ನಂ.ನಲ್ಲಿ ಕಂದಾಯ ಇಲಾಖೆಯಿಂದ ಪಡೆದ ದಾಖಲೆಗಳು ಇದ್ದರೂ ಸಹ ಅರಣ್ಯ ಮತ್ತು ಇತರರು ಭೂಸ್ವಾಧೀನಕ್ಕೆ ತೊಂದರೆ ಕೊಡುತ್ತಿದ್ದು, ಅಂಥವರ ವಿರುದ್ಧ ಕ್ರಮ ಕೈಗೊಂಡು ಪರಿಶಿಷ್ಟರಿಗೆ ನ್ಯಾಯ ದೊರಕಿಸಿಕೊಡಬೇಕು. ಪರಿಶಿಷ್ಟರ ಕಾಲೊನಿಗಳಲ್ಲಿ ಗ್ರಾಮ ಪಂಚಾಯಿತಿ ವತಿಯಿಂದ ಕುಡಿಯುವ ನೀರು, ವಿದ್ಯುತ್ ದೀಪ ಹಾಗೂ ಸ್ವಚ್ಛತೆಯ ಬಗ್ಗೆ ಗಮನಹರಿಸುತ್ತಿಲ್ಲ ಎಂದು ಮುಖಂಡ ಎಚ್.ವಿ. ಬಾಲರಾಜ್ ಹೇಳಿದರು.

ಇದಕ್ಕೆ ಉತ್ತರಿಸಿದ ಡಿವೈಎಸ್‍ಪಿ ಹಾಲಮೂರ್ತಿ, ಸಭೆಯಲ್ಲಿ ಹಾಜರಿದ್ದ ಗ್ರೇಡ್‍-2 ತಹಶೀಲ್ದಾರ್ ನೂರುಲ್ಲಾ ಹುದಾ ಮತ್ತು ಆರ್‌ಎಫ್‍ಒ ಆಶೀಫ್ ಅವರಿಗೆ ಸಮಸ್ಯೆ ಬಗೆಹರಿಸಲು ಸೂಚಿಸಿದರು. 

ತರೀಕೆರೆ ಮತ್ತು ಅಜ್ಜಂಪುರ ತಾಲ್ಲೂಕಿನಲ್ಲಿ ಹಲವು ಗ್ರಾಮಗಳಲ್ಲಿ ಸ್ಮಶಾನಕ್ಕಾಗಿ ಜಮೀನುಗಳನ್ನು ಕಾಯ್ದಿರಿಸಿದ್ದು, ಅವುಗಳ ರಕ್ಷಣೆ ಮಾಡುವಲ್ಲಿ ಕಂದಾಯ ಮತ್ತು ಗ್ರಾಮ ಪಂಚಾಯಿತಿ ವಿಫಲವಾಗಿವೆ. ಹಲವು ಸ್ಮಶಾನ ಜಾಗವನ್ನು ಅರಣ್ಯ ಇಲಾಖೆ ಮತ್ತು ಬಲಾಢ್ಯರು ಒತ್ತುವರಿ ಮಾಡಿಕೊಂಡಿದ್ದಾರೆ ಎಂದು ಮುಖಂಡ ಜಿ.ಟಿ. ರಮೇಶ್‍ ಮತ್ತು ಹಲವಾರು ಮುಖಂಡರು ಆರೋಪಿಸಿದರು.

ಹಾಸ್ಟೇಲ್ ವ್ಯವಸ್ಥೆ, ನಿವೇಶನ ಮೊದಲಾದ ವಿಷಯಗಳ ಬಗ್ಗೆ ಗಂಭೀರ ಚರ್ಚೆ ನಡೆಸಲಾಯಿತು. ತರೀಕೆರೆ ಪಿಎಸ್‍ಐ ರಾಮಚಂದ್ರ ನಾಯಕ, ಅಜ್ಜಂಪುರ ಪಿ.ಎಸ್.ಐ. ವೀರೇಂದ್ರ, ಪಿಡಬ್ಲೂಡಿ ಎಇಇ ನಾಗೇಂದ್ರಪ್ಪ, ಪುರಸಭಾ ಮುಖ್ಯಾಧಿಕಾರಿ ಎಚ್. ಪ್ರಶಾಂತ್, ಮುಖಂಡರಾದ ಎನ್. ವೆಂಕಟೇಶ್‌, ಕೆ. ಚಂದ್ರಪ್ಪ, ಮಹೇಂದ್ರಸ್ವಾಮಿ, ಹೆಬ್ಬೂರು ಶಿವಣ್ಣ, ಗೌರೀಶ, ಶಿವಮೂರ್ತಿ, ವಸಂತ, ಕೃಷ್ಣನಾಯ್ಕ, ಶಿವರಾಜ್, ಸುನಿಲ್‌, ವೆಂಕಟೇಶ, ಮಂಜು, ಶಂಕರನಾಯ್ಕ, ರಾಮಚಂದ್ರಪ್ಪ ಇದ್ದರು.

ತರೀಕೆರೆ ಪಟ್ಟಣದ ಸುಂದರೇಶ್‍ ಬಡಾವಣೆಯಲ್ಲಿ ಗಾಂಜಾ ಅಕ್ರಮ ಮದ್ಯ ಮಾರಾಟ ಪ್ರಕರಣ ಹೆಚ್ಚಾಗುತ್ತಿದ್ದು ಈ ಬಗ್ಗೆ ಪೊಲೀಸ್‍ ಇಲಾಖೆ ಸೂಕ್ತ ಕ್ರಮಕೈಗೊಳ್ಳಬೇಕು
-ಎಸ್.ಕೆ. ಸ್ವಾಮಿ, ಮುಖಂಡ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.