ADVERTISEMENT

ಮೂಡಿಗೆರೆ: ಹಲವೆಡೆ ಭೂ ಕುಸಿತ, ಧರೆಗುರುಳಿದ ಮರ

ನಿಲ್ಲದ ‌ಮಳೆಗೆ ನಲುಗಿದ ಜನರು

​ಪ್ರಜಾವಾಣಿ ವಾರ್ತೆ
Published 11 ಜುಲೈ 2022, 2:58 IST
Last Updated 11 ಜುಲೈ 2022, 2:58 IST
ಮೂಡಿಗೆರೆ ಹುಲ್ಲೇಮನೆ ಗ್ರಾಮದ ಗೌರಮ್ಮ ಮನೆಗೆ ಹಾನಿಯಾಗಿರುವುದು
ಮೂಡಿಗೆರೆ ಹುಲ್ಲೇಮನೆ ಗ್ರಾಮದ ಗೌರಮ್ಮ ಮನೆಗೆ ಹಾನಿಯಾಗಿರುವುದು   

ಮೂಡಿಗೆರೆ: ತಾಲ್ಲೂಕಿನಲ್ಲಿ ಸುರಿಯುತ್ತಿರುವ ಮಳೆಯ ಆರ್ಭಟವು ಭಾನುವಾರವೂ ಮುಂದುವರಿದಿದ್ದು ಜನ ನಲುಗುವಂತೆ ಮಾಡಿತು.

ಶನಿವಾರ ತಡರಾತ್ರಿಯಿಂದ ಆರ್ಭಟಿಸಿದ ಮಳೆಯು, ಭಾನುವಾರ ಇಡೀ ದಿನ ಸುರಿಯಿತು. ಮಧ್ಯಾಹ್ನದ ಬಳಿಕ ಮಳೆಯೊಂದಿಗೆ ಗಾಳಿಯೂ ‌ಬೀಸಿದ್ದರಿಂದ ಅಪಾರ ಪ್ರಮಾಣದಲ್ಲಿ ಹಾನಿ ಉಂಟಾಯಿತು.

ಮಳೆಯಿಂದ ಹಲವೆಡೆ ವಿದ್ಯುತ್ ಕಂಬಗಳು, ಮನೆಗಳು, ಕೊಚ್ಚಿ ಹೋಗಿದ್ದು, ನಾಲ್ಕು ಕಡೆಗಳಲ್ಲಿ ಭೂ ಕುಸಿತವಾಗಿದೆ. ಗ್ರಾಮೀಣ ಪ್ರದೇಶಗಳ್ಳಿ ವಿದ್ಯುತ್ ಪೂರೈಕೆ ಸ್ಥಗಿತವಾಗಿದೆ. ಪಟ್ಟಣದಲ್ಲೂ ದಿನ ಪೂರ್ತಿ ವಿದ್ಯುತ್ ಸ್ಥಗಿತವಾಗಿತ್ತು.‌ ವಿದ್ಯುತ್ ಸಮಸ್ಯೆಯಿಂದ ಗ್ರಾಮೀಣ ಪ್ರದೇಶದಲ್ಲಿ ಕುಡಿಯುವ ನೀರಿನ ಪೂರೈಕೆಗೂ ಅಡ್ಡಿಯುಂಟಾಗಿದೆ.

ADVERTISEMENT

ಹುಲ್ಲೇಮನೆ ಗ್ರಾಮದ ಗೌರಮ್ಮ ಎಂಬುವವರ ಮನೆಯ ಮುಂಭಾಗ ಕುಸಿತವಾಗಿದೆ. ಗೋಣಿಬೀಡು ಹೋಬಳಿ ಹೊಸಮನೆ ಗ್ರಾಮದ ಸೀತಮ್ಮ ಮನೆಯ ಗೋಡೆ ಕುಸಿದಿದೆ. ಸಬ್ಲಿ ಗ್ರಾಮದ ರಾಮಮ್ಮ ಎಂಬುವವರ ಮನೆ ಸಂಪೂರ್ಣ ಹಾನಿಯಾಗಿದ್ದು, ಬಕ್ಕಿ ಗ್ರಾಮದ ಮೋಟಮ್ಮ ಮನೆಯ ಚಾವಣಿ ಕುಸಿದಿದೆ. ಬಾಳೂರು ಹೋಬಳಿಯ ಮಾಳಿಗನಾಡು ಗ್ರಾಮದ ಜಾನಕಿ, ಮುತ್ತಿಗೆಪುರದ ಅಣ್ಣಪ್ಪ, ಬಾಳೂರು ಗ್ರಾಮದ ಗಣೇಶ್ ಎಂಬುವರ ಮನೆಗಳಿಗೂ ಹಾನಿಯುಂಟಾಗಿದೆ. ಜಾವಳಿ ಗ್ರಾಮದ ಜಯೇಂದ್ರ ಎಂಬುವವರ ಮನೆಯ ಬಳಿ ರಸ್ತೆಗೆ ನಿರ್ಮಿಸಲಾಗಿದ್ದ ತಡೆಗೋಡೆ ಕುಸಿದು ಹಾನಿ ಸಂಭವಿಸಿದೆ.

ಬೆಟ್ಟದಮನೆ ಗ್ರಾಮದ ಅಂಗನವಾಡಿ ಕೇಂದ್ರಕ್ಕೆ ಹಾನಿಯಾಗಿದ್ದು, ಮುಗ್ರಹಳ್ಳಿ ಗ್ರಾಮದ ಬಳಿಯಿರುವ ಹೇಮಾವತಿ ನದಿಯ ಹಳೆ ಸೇತುವೆ ಕುಸಿದಿದೆ.

ಹೇಮಾವತಿ ನದಿಯು ಅಪಾಯದ ಮಟ್ಟದಲ್ಲಿ ಹರಿಯುತ್ತಿದ್ದು, ಉಗ್ಗೆಹಳ್ಳಿ ಗ್ರಾಮದಲ್ಲಿ ತಡೆಗೋಡೆಗೆ ಅಪ್ಪಳಿಸುವ ಭೀತಿ ಇದೆ. ಮುಗ್ರಹಳ್ಳಿ, ಹೊರಟ್ಟಿ, ಸಬ್ಬೇನಹಳ್ಳಿ, ಕಿತ್ತಲೆಗಂಡಿ, ಕೆಸವೊಳಲು ಗ್ರಾಮದ ಬಳಿ ಹೇಮಾವತಿಯು ಗದ್ದೆ ಬಯಲಿಗೆ ವ್ಯಾಪಿಸಿದ್ದು, ನಾಟಿಗಾಗಿ ಉಳುಮೆ ಮಾಡಿದ್ದ ಭತ್ತದ ಗದ್ದೆಗಳಿಗೆಲ್ಲಾ ಹಾನಿಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.