ಮೂಡಿಗೆರೆ: ಮಹಿಳೆಯರು, ಮಕ್ಕಳನ್ನು ಅಪಹರಿಸಿ ಮಾನವ ಕಳ್ಳ ಸಾಗಣೆ ಮಾಡುವುದು ಕಾನೂನು ಬಾಹಿರವಾಗಿದ್ದು, ಇಂತಹ ಪ್ರಕರಣಗಳನ್ನು ತಡೆಗಟ್ಟಬೇಕು ಎಂದು ಜೆಎಂಎಫ್ ನ್ಯಾಯಾಲಯದ ಹಿರಿಯ ಸಿವಿಲ್ ನ್ಯಾಯಾಧೀಶ ಪಿ.ಎಂ. ಪ್ರಕಾಶ್ ಹೇಳಿದರು.
ತಾಲ್ಲೂಕಿನ ಗೋಣಿಬೀಡು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜೇಸಿಐ ಹೊಯ್ಸಳ ಘಟಕ, ತಾಲ್ಲೂಕು ಕಾನೂನು ಸೇವಾ ಸಮಿತಿ ಹಾಗೂ ವಕೀಲರ ಸಂಘದ ಸಹಯೋಗದಲ್ಲಿ ನಡೆದ ಮಾನವ ಕಳ್ಳಸಾಗಣಿಕೆ ವಿರೋಧಿ ದಿನಾಚರಣೆ ಹಾಗೂ ಕಾನೂನು ಅರಿವು - ನೆರವು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮಹಿಳೆಯರು, ಮಕ್ಕಳನ್ನು ವಾಮ ಮಾರ್ಗದಿಂದ ಮಾರಾಟ ಮಾಡಿ ಹಣ ಸಂಪಾದನೆ ಮಾಡುವ ಕೃತ್ಯಗಳು ಇಂದಿಗೂ ಅಲ್ಲಲ್ಲಿ ದಾಖಲಾಗುತ್ತಿವೆ. ಮಾನವ ಕಳ್ಳ ಸಾಗಣಿಕೆಯು ನೀಚ ಕಾರ್ಯವಾಗಿದ್ದು, ಇಂತಹ ಪ್ರಕರಣಗಳ ಬಗ್ಗೆ ಮಾಹಿತಿ ಇದ್ದವರು ಯಾವುದೇ ಭಯವಿಲ್ಲದೆ ದೂರು ನೀಡಬೇಕು' ಎಂದರು.
ಪ್ರಧಾನ ಸಿವಿಲ್ ನ್ಯಾಯಧೀಶ ಎ.ವಿಶ್ವನಾಥ್ ಮಾತನಾಡಿ, 'ಬಡವರು ಹಾಗೂ ನಿರ್ಗತಿಕರ ಮಕ್ಕಳನ್ನೇ ಗುರಿಯಾಗಿಸಿಕೊಂಡು ಅಪಹರಿಸುವ ಜಾಲಗಳು ಹುಟ್ಟಿಕೊಂಡಿದ್ದು, ಮಕ್ಕಳ ಅಂಗಾಂಗಗಳನ್ನು ಮಾರಾಟ ಮಾಡುತ್ತಿರುವ ಪ್ರಕರಣ ಹಾಗೂ ಹೆಣ್ಣು ಮಕ್ಕಳನ್ನು ಲೈಂಗಿಕ ಕೃತ್ಯಗಳಿಗೆ ಬಳಸಿಕೊಳ್ಳುತ್ತಿರುವ ಪ್ರಕರಣ ವರದಿಯಾಗುತ್ತಿವೆ. ಸಮಾಜದಲ್ಲಿ ಇಂತಹ ಹೀನ ಕೃತ್ಯಗಳನ್ನು ತಪ್ಪಿಸುವುದು ನಾಗರಿಕ ಸಮಾಜದ ಜವಾಬ್ದಾರಿಯಾಗಿದೆ' ಎಂದರು.
ಜೇಸಿಐ ಗೋಣಿಬೀಡು ಹೊಯ್ಸಳ ಘಟಕದ ಅಧ್ಯಕ್ಷ ಜಗತ್ ಬಿ.ಎಂ.ಮಾತನಾಡಿ, ‘ಕಾನೂನಿನ ಮುಂದೆ ನಾವೆಲ್ಲರೂ ಒಂದೇ ಎಂಬ ಮನೋಭಾವನೆ ಬೆಳಸಿಕೊಂಡರೆ ಮಾತ್ರ ಸಮಾಜದಲ್ಲಿ ಪ್ರತಿಯೊಬ್ಬರು ಸಮಾನತೆಯಿಂದ ಬಾಳ ಬಹುದು. ಆದ್ದರಿಂದ ಪ್ರತಿಯೊಬ್ಬರು ಕಾನೂನು ಅರಿವು ಪಡೆಯಬೇಕು. ಕಾನೂನಿನ ಜ್ಞಾನ ಉಂಟಾದರೆ ಮಾತ್ರ ಅಪರಾಧಗಳಿಂದ ದೂರ ಉಳಿಯಬಹುದು' ಎಂದರು.
ಉಪನ್ಯಾಸ ನೀಡಿದ ವಕೀಲ ಆದರ್ಶ ಎಚ್.ಜಿ , 'ಅನಕ್ಷರತೆ, ಬಡತನ, ನಿರುದ್ಯೋಗ ಸಹಿತ ಹಲವು ಕಾರಣಗಳು ಮಾನವ ಕಳ್ಳ ಸಾಗಣಿಕೆ ಕಾರಣವಾಗಿದೆ. ಆನ್‌ಲೈನ್ ನಲ್ಲಿ ಅಪರಿಚಿತರೊಂದಿಗೆ ವೈಯಕ್ತಿಕ ವಿಚಾರ ಹಂಚಿಕೊಳ್ಳಬಾರದು. ಆಸೆ, ಆಕಾಂಕ್ಷೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ಆಮಿಷಕ್ಕೆ ಬಲಿಯಾಗಬಾರದು' ಎಂದರು.
ಕಾರ್ಯಕ್ರಮದಲ್ಲಿ ವಕೀಲರ ಸಂಘದ ಅಧ್ಯಕ್ಷ ಎಚ್.ಕೆ ದೇವರಾಜ್, ಕಾರ್ಯದರ್ಶಿ ರಾಘವೇಂದ್ರ, ಜೇಸಿಐ ಕಾರ್ಯದರ್ಶಿ ಎಚ್.ಎಂ., ಸಂತೋಷ, ಸಿ.ಎಸ್. ಚಂದ್ರಶೇಖರ್, ಯೋಗೇಶ್, ಕುಮಾರ್, ಶಾಲೆಯ ಮುಖ್ಯಶಿಕ್ಷಕಿ ಶಕುಂತಳ, ಶಾಲಾಭಿವೃದ್ದಿ ಸಮಿತಿ ಉಪಾಧ್ಯಕ್ಷೆ ನೌಶದ್ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.