ಕಡೂರು (ಚಿಕ್ಕಮಗಳೂರು): ತಾಲ್ಲೂಕಿನ ಕನಕರಾಯನಗುಡ್ಡದ ಬಳಿ ಕಾರು ಮತ್ತು ಟ್ಯಾಂಕರ್ ನಡುವೆ ಮುಖಾಮುಖಿ ಡಿಕ್ಕಿಯಾಗಿದ್ದು, ಕಾರು ಚಾಲಕ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ದಾವಣಗೆರೆಯ ಪ್ರತಾಪ್ ರಾವ್ (52) ಮೃತಪಟ್ಟವರು.
ದಾವಣಗೆರೆ ಎಸ್.ಎಸ್ ಲೇಔಟ್‌ನ ನಿವಾಸಿ ಪ್ರತಾಪ್‌ರಾವ್ ಅವರು ಬುಧವಾರ ಬೆಳಿಗ್ಗೆ ಪತ್ನಿ ಮತ್ತು ಮಗುವಿನೊಡನೆ ಕಡೂರು ಹೊರವಲಯದ ರಾಷ್ಟ್ರೀಯ ಹೆದ್ದಾರಿಯ ಬೈಪಾಸ್ ಮೂಲಕ ಮೈಸೂರಿನ ಚಾಮುಂಡಿಬೆಟ್ಟಕ್ಕೆ ತೆರಳುತ್ತಿದ್ದರು. ಈ ಸಂದರ್ಭದಲ್ಲಿ ಕಾರು ನಿಯಂತ್ರಣ ತಪ್ಪಿ ಹಾಸನದಿಂದ ಬೀರೂರು ಕಡೆ ತೆರಳುತ್ತಿದ್ದ ಟ್ಯಾಂಕರ್‌ಗೆ ಡಿಕ್ಕಿಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಪಘಾತದ ರಭಸಕ್ಕೆ ಕಾರು ಹಾಗೂ ಟ್ಯಾಂಕರ್ ಎರಡೂ ಪಲ್ಟಿಯಾಗಿದ್ದು, ಟ್ಯಾಂಕರ್‌ನಲ್ಲಿದ್ದ ಡೀಸೆಲ್ ಸೋರಿಕೆಯಾಗಿದೆ. ಹೆಚ್ಚಿನ ಅನಾಹುತ ನಡೆಯದಂತೆ ಅಗ್ನಿಶಾಮಕ ಠಾಣೆಯ ಎಎಫ್‌ಎಫ್‌ಎಫ್ ವಾಹನ ಮತ್ತು ಹೆದ್ದಾರಿ ಆಂಬುಲೆನ್ಸ್‌ಗಳು ಸ್ಥಳಕ್ಕೆ ಧಾವಿಸಿದವು. ಫೋಮ್ ಸಿಂಪಡಿಸಿ, ಬೆಂಕಿ ತಗುಲದಂತೆ ಎಚ್ಚರಿಕೆ ವಹಿಸಿ, ಕ್ರೇನ್ ಮೂಲಕ ಟ್ಯಾಂಕರ್ ಅನ್ನು ಎತ್ತಿ ನಿಲ್ಲಿಸಲಾಯಿತು.
ಕಾರಿನಲ್ಲಿದ್ದ ಸೋಫಿ ಮತ್ತು ಪುತ್ರ, ಟ್ಯಾಂಕರ್ ಚಾಲಕ ವಿಜಯಕುಮಾರ್ ಅವರನ್ನು ಕಡೂರು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ, ಟ್ಯಾಂಕರ್ ಚಾಲಕನನ್ನು ಅರಸೀಕೆರೆ ಆಸ್ಪತ್ರೆಗೆ ದಾಖಲಿಸಲಾಗಿದೆ. ಸಂಚಾರ ನಿಯಂತ್ರಣ ಮತ್ತು ಪರಿಹಾರ ಕಾರ್ಯಗಳಲ್ಲಿ ಕಡೂರು ಠಾಣೆಯ ಪಿಎಸ್‌ಐಗಳಾದ ಸಜಿತ್‌ಕುಮಾರ್ ಜಿ.ಆರ್., ಧನಂಜಯ್ ಮತ್ತು ಲೀಲಾವತಿ ಆರ್. ಹಾಗೂ ಅಗ್ನಿಶಾಮಕ ಸಿಬ್ಬಂದಿ ಶ್ರಮಿಸಿದರು. ಪ್ರತಾಪ್‌ರಾವ್ ಅವರ ಪತ್ನಿ ಸೋಫಿ ಅವರು ನೀಡಿದ ದೂರಿನನ್ವಯ ಕಡೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.