ಕಳಸ: ಇಲ್ಲಿನ ಶ್ರೀಚಂದ್ರನಾಥ ಸ್ವಾಮಿ ಬಸದಿ ಮತ್ತು ಪದ್ಮಾವತಿ ದೇವಸ್ಥಾನದ ಪಂಚ ಕಲ್ಯಾಣಕ್ಕೆ ಭಾನುವಾರ ಅದ್ಧೂರಿ ಚಾಲನೆ ನೀಡಲಾಯಿತು.
ಬೆಳಿಗ್ಗೆ ಕಾರ್ಕಳದಿಂದ ಬಂದ ಲಲಿತಕೀರ್ತಿ ಭಟ್ಟಾರಕರನ್ನು ಮೆರವಣಿಗೆ ಮೂಲಕ ಬಸದಿಗೆ ಕರೆದೊಯ್ಯಲಾಯಿತು. ಗುಣಭದ್ರ ನಂದಿ ಮತ್ತು ಸತ್ಸಂಗ ಹಾಗೂ ಪ್ರಸಂಗ ಸಾಗರ ಮುನಿಗಳನ್ನು ಪಂಚ ಕಲ್ಯಾಣಕ್ಕೆ ಆಹ್ವಾನಿಸಲಾಯಿತು. ಆನಂತರ ಎರಡೂ ಬಸದಿಗಳು, ಯಜ್ಞಶಾಲೆ, ಕ್ಷೇತ್ರಪಾಲ ಗುಡಿಯಲ್ಲಿ ತೋರಣ ಮುಹೂರ್ತ ನೆರವೇರಿಸಲಾಯಿತು.
ಹೊಸದಾಗಿ ನಿರ್ಮಾಣವಾದ ಚಂದ್ರನಾಥ ವೃತ್ತದಿಂದ ಬಸದಿವರೆಗೆ ಮೆರವಣಿಗೆಯಲ್ಲಿ ಅಗ್ರೋದಕ ಕೊಂಡೊಯ್ಯಲಾಯಿತು. ಬಳಿಕ, ಧ್ವಜಾರೋಹಣ, ದೇವರ ಸನ್ನಿಧಿಯಲ್ಲಿ ನಾಂದಿ ಮಂಗಲ, ವಾಸ್ತು ಪೂಜೆ ನೆರವೇರಿಸಿ ಸಂಜೆ ಅಷ್ಟ ಕನ್ಯೆಯರ ಸಹಿತ ಭದ್ರಾನದಿಯಿಂದ ಜಲಯಾತ್ರೆ ನಡೆಯಿತು. ಆನಂತರ ಜಿನಮಾತೆಯರ ಗರ್ಭಾವತರಣ ಕಲ್ಯಾಣ, ಸೀಮಂತ ನೆರವೇರಿಸಲಾಯಿತು.
ಸಂಜೆ ನಡೆದ ಧಾರ್ಮಿಕ ಸಭೆಯಲ್ಲಿ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಕೆ.ಸಿ.ಧರಣೇಂದ್ರಯ್ಯ ಸ್ಮರಣ ಸಂಚಿಕೆ ಬಿಡುಗಡೆ ಮಾಡಿದರು. ಬ್ರಹ್ಮದೇವ, ಅರ್ಕಕೀರ್ತಿ, ಶೇಷಗಿರಿ, ಬಿ.ಜಿನರಾಜಯ್ಯ, ಪಾಂಡುರಂಗ, ಚಂದ್ರರಾಜಯ್ಯ ಭಾಗವಹಿಸಿದ್ದರು. ಹೊರನಾಡಿನ ವಾಗ್ಮಿ ಶ್ರೀವರ್ಮ ಹೆಗ್ಗಡೆ ಅಧ್ಯಕ್ಷತೆ ವಹಿಸಿದ್ದರು.
ಬಸದಿ ಕೆಲಸದಲ್ಲಿ ಶ್ರಮಿಸಿದ ಕುಶಲಕರ್ಮಿಗಳನ್ನು ಸನ್ಮಾನಿಸಲಾಯಿತು. ಪಂಚ ಕಲ್ಯಾಣಕ್ಕೆ ಪೂರಕವಾಗಿ ನಡೆದ ಜೈನ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯನ್ನು ಶ್ರೀವರ್ಮ ಹೆಗ್ಗಡೆ ವಹಿಸಿದ್ದರು. ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಹೇಶ್ ಜೋಷಿ, ತಹಶೀಲ್ದಾರ್ ಕಾವ್ಯ, ಸೂರಿ ಶ್ರೀನಿವಾಸ್, ಎಚ್.ಸಿ. ಅಣ್ಣಯ್ಯ, ಕೆ.ಸಿ.ಧರಣೇಂದ್ರ, ಸತೀಶ್ ಚಂದ್ರ, ಮಮ್ತಾಜ್ ಭಾಗವಹಿಸಿದ್ದರು.
ಇತಿಹಾಸ ಗೋಷ್ಠಿಯಲ್ಲಿ ಮಹಾವೀರ ಮತ್ತು ಪಾಂಡುರಂಗ ಮಾತನಾಡಿದರು. ಸುಕನ್ಯಾ ಕಳಸ ಅಧ್ಯಕ್ಷತೆಯಲ್ಲಿ ಕವಿ ಗೋಷ್ಠಿ ನಡೆಯಿತು. ಸಂಶೋಧಕರಾದ ಡಾ. ಅಪ್ಪಣ್ಣ ಹಂಜೆ, ಪದ್ಮಿನಿ ನಾಗರಾಜು ಹಾಗೂ ದೇವೇಂದ್ರಪ್ಪ ಎನ್.ಅಕ್ಕಿ ಅವರಿಗೆ ಸಾಹಿತ್ಯ ಸಿರಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.