ADVERTISEMENT

ಕಳಸ | ವಿಲೇವಾರಿ ಆಗದ 94– ಸಿ ಅರ್ಜಿ: ಸಿಗದ ಒಪ್ಪಿಗೆ; ಹಕ್ಕುಪತ್ರ ಮರೀಚಿಕೆ

ಅರಣ್ಯ ಇಲಾಖೆ ಸಕಾರಾತ್ಮಕ ಅಭಿಪ್ರಾಯ ಅಲಭ್ಯ

ರವಿ ಕೆಳಂಗಡಿ
Published 18 ಜೂನ್ 2025, 6:58 IST
Last Updated 18 ಜೂನ್ 2025, 6:58 IST
   

ಕಳಸ: ಸ್ವಂತ ಸೂರು ಇದ್ದರೂ ಅಧಿಕೃತ ಹಕ್ಕುಪತ್ರ ಬೇಕು ಎಂದು 10 ವರ್ಷದ ಹಿಂದೆಯೇ ನಿವೇಶನದ ಹಕ್ಕುಪತ್ರಕ್ಕಾಗಿ ಅರ್ಜಿ ಹಾಕಿದ ತಾಲ್ಲೂಕಿನ ನೂರಾರು ಬಡವರು ಈಗಲೂ ಹಕ್ಕುಪತ್ರಕ್ಕಾಗಿ ಚಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ. ತಾಲ್ಲೂಕಿನಲ್ಲಿ ಅರ್ಜಿ ಸಲ್ಲಿಸಿದ 1,495 ಕುಟುಂಬಗಳ ಬಡಜನರಿಗೆ ಅರಣ್ಯ ಇಲಾಖೆಯ ಸಕಾರಾತ್ಮಕ ಅಭಿಪ್ರಾಯ ಸಿಗದೆ ನಿವೇಶನ ಮಂಜೂರಾಗಿಲ್ಲ.

ಕಳಸ ತಾಲ್ಲೂಕಿನಲ್ಲಿ 2014 ರಿಂದ 3,838 ಮಂದಿ 94 –ಸಿ ಅರ್ಜಿ ಸಲ್ಲಿಸಿ ನಿವೇಶನದ ಹಕ್ಕು ಪತ್ರದ ಕನಸು ಕಾಣುತ್ತಿದ್ದಾರೆ. ಆ ಪೈಕಿ ಈವರೆಗೆ 2,252 ಜನರಿಗೆ ಹಕ್ಕುಪತ್ರ ಸಿಕ್ಕಿದೆ. 1,495 ಅರ್ಜಿಗಳಿಗೆ ಅರಣ್ಯ ಇಲಾ ಖೆಯ ಒಪ್ಪಿಗೆ ಸಿಗದೆ ಇರುವುದರಿಂದ ಹಕ್ಕುಪತ್ರ ನೀಡಿಲ್ಲ.

ಕಳಸ ತಾಲ್ಲೂಕಿನಲ್ಲಿ ಅರಣ್ಯ ಮತ್ತು ಕಂದಾಯ ಭೂಮಿಯ ಬಗ್ಗೆ ಗೊಂದಲ ಇದೆ. 1928ರಲ್ಲಿ ಆಗಿರುವ ಅಧಿಸೂಚನೆ ಆಧಾರದ ಮೇಲೆ 6,777 ಎಕರೆ ಇನಾಂ ಭೂಮಿ ಕಂದಾಯ ಇಲಾಖೆ ಯಿಂದ ಅರಣ್ಯ ಇಲಾಖೆಗೆ ವರ್ಗಾವಣೆ ಆಗಿ ಇನಾಂ ಭೂಮಿ ವಿವಾದಕ್ಕೆ ಕಾರಣವಾಗಿದೆ. ಈ ಇನಾಂ ಭೂಮಿಯಲ್ಲಿ ನೂರಾರು ಕುಟುಂಬಗಳು ವಾಸವಾಗಿದ್ದು, ಅವರಿಗೆ 94–ಸಿ ಅರ್ಜಿಯಲ್ಲಿ ನಿವೇಶನಕ್ಕೆ ಹಕ್ಕುಪತ್ರ ಸಲ್ಲಿಸಿ ದ್ದರೂ ನಿವೇಶನದ ಸಿಕ್ಕಿಲ್ಲ.

ADVERTISEMENT

ವಿವಿಧ ಸರ್ವೆ ನಂಬರ್‌ ಗಳಲ್ಲಿ ಡೀಮ್ಡ್ ಅರಣ್ಯ(ಪರಿಭಾವಿತ ಅರಣ್ಯ), ಸೆಕ್ಷನ್ –4(ಪ್ರಸ್ತಾವಿತ ಅರಣ್ಯ) ಅಧಿಸೂಚನೆ ಆಗಿರುವ ಭೂಮಿ ಯಲ್ಲಿ ವಾಸವಿದ್ದು, ನಿವೇಶನದ ಹಕ್ಕುಪತ್ರಕ್ಕೆ ಅರ್ಜಿ ಸಲ್ಲಿಸಿದವರಿಗೆ ನಿವೇಶನ ಸಿಕ್ಕಿಲ್ಲ.

‘ಹಲವು ಅರ್ಜಿದಾರರು 2012ರಿಂದ ಅದೇ ಸ್ಥಳದಲ್ಲಿ ವಾಸವಿದ್ದ ಬಗ್ಗೆ ಅರ್ಜಿಯ ಜೊತೆಗೆ ಗ್ರಾಮ ಪಂಚಾಯಿತಿಯ ದೃಢೀಕರಣ ಅಥವಾ ಮನೆ ಕಂದಾಯ ರಸೀದಿ ಸಲ್ಲಿಸಿಲ್ಲ. ವಾಸವಿರುವ ಭೂಮಿಯ ಸರ್ವೆ ಸ್ಕೆಚ್ ಲಗತ್ತಿಸಿಲ್ಲ. ಹೆಚ್ಚಿನವರು ಅಗತ್ಯವಿರುವ ಪ್ರಮಾಣಪತ್ರ ಮತ್ತಿತರ ದಾಖಲೆಯನ್ನೂ ಒದಗಿಸಿಲ್ಲ. 91 ಜನರಿಗೆ ಎಲ್ಲ ಅರ್ಹತೆ ಇದ್ದು, ಸೂಕ್ತ ದಾಖಲೆ ಕೊಟ್ಟರೆ ಹಕ್ಕುಪತ್ರ ಸಿಗಲಿದೆ’ ಎಂದು ಕಳಸ ವೃತ್ತದ ಗ್ರಾಮ ಆಡಳಿತಾಧಿಕಾರಿ ಪ್ರಸನ್ನ ಹೇಳುತ್ತಾರೆ.

‘ಜನರು ಅನಾದಿ ಕಾಲದಿಂದ ವಾಸವಿದ್ದ ಭೂಮಿಯಲ್ಲಿ ಮನೆ ಕಟ್ಟಿಕೊಂಡಿದ್ದಾರೆ. ಕಂದಾಯ ಮತ್ತು ಅರಣ್ಯ ಇಲಾಖೆಗಳ ಧೋರಣೆಯಿಂದ ಬಡವರಿಗೆ ಅನ್ಯಾಯ ಆಗುತ್ತಿದ್ದು, ಜಂಟಿ ಸರ್ವೆ ಮಾಡಿ ತಮ್ಮ ಭೂಮಿ ಗುರುತು ಮಾಡಿಕೊಳ್ಳಬೇಕು. ಅರ್ಹ ನಿವಾಸಿಗಳಿಗೆ ಹಕ್ಕುಪತ್ರ ಕೊಡಬೇಕು’ ಎಂದು ಜನಪರ ಹೋರಾಟಗಾರ ಕೆ.ಎಲ್.ವಾಸು ಆಗ್ರಹಿಸಿದರು.

ಜಂಟಿ ಸರ್ವೆ ಆಗದೆ ಸಮಸ್ಯೆ

ಅರಣ್ಯ ಇಲಾಖೆಯು 1,495 ಬಡವರ ಮನೆಗಳ ಹಕ್ಕುಪತ್ರಕ್ಕೆ ಸಕಾರಾತ್ಮಕ ಅಭಿಪ್ರಾಯ ಕೊಡುತ್ತಿಲ್ಲ ಎಂದು ಕಳಸ ವಲಯ ಅರಣ್ಯಾಧಿಕಾರಿ ನಿಶ್ಚಿತ್ ಗೌಡ ಅವರನ್ನು ಪ್ರಶ್ನಿಸಿದಾಗ, ‘ಇಲ್ಲಿನ ಹಲವು ಸರ್ವೆ ನಂಬರ್‌ಗಳಲ್ಲಿ ಕಂದಾಯ ಮತ್ತು ಅರಣ್ಯ ಭೂಮಿ ಒಟ್ಟಿಗೆ ಇದೆ. ಇದುವರೆಗೂ ಜಂಟಿ ಸರ್ವೆ ಆಗದೆ ಕಂದಾಯ ಮತ್ತು ಅರಣ್ಯ ಭೂಮಿ ಯಾವುದು ಎಂಬ ಗಡಿ ಗುರುತು ಸ್ಪಷ್ಟವಾಗಿಲ್ಲ. ಸೆಕ್ಷನ್ –4 ಅಧಿಸೂಚನೆ ಹೊರಡಿಸಿದ ಬಹಳಷ್ಟು ಭೂಮಿ ಇದೆ. ಕಳಸೇಶ್ವರ ಇನಾಂ ಭೂಮಿ ಆಗಿದ್ದ ಈಗಿನ ಮೀಸಲು ಅರಣ್ಯವೂ ಇದೆ. ಈ ಎಲ್ಲ ಸರ್ವೆ ನಂಬರ್‌ಗಳಲ್ಲಿ ಮನೆ ಕಟ್ಟಿಕೊಂಡಿರುವವರ ನಿವೇಶನದ ಹಕ್ಕುಪತ್ರ ಕೊಡಲು ಅರಣ್ಯ ಇಲಾಖೆ ಒಪ್ಪಿಗೆ ಕೊಟ್ಟಿಲ್ಲ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.