ADVERTISEMENT

ಶೇ 50ರಷ್ಟು ಪ್ರಾತಿನಿಧ್ಯದಿಂದ ಸಬಲೀಕರಣ: ಸಾಹಿತಿ ಲಕ್ಷ್ಮೀ ಶಾಮರಾವ್

ತಾಲ್ಲೂಕು ಮಟ್ಟದ ಪ್ರಥಮ ಮಹಿಳಾ ಸಮ್ಮೇಳನ

​ಪ್ರಜಾವಾಣಿ ವಾರ್ತೆ
Published 14 ಜೂನ್ 2025, 14:17 IST
Last Updated 14 ಜೂನ್ 2025, 14:17 IST
ಚಿಕ್ಕಮಗಳೂರಿನಲ್ಲಿ ಶನಿವಾರ ನಡೆದ ತಾಲ್ಲೂಕು ಮಟ್ಟದ ಮಹಿಳಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಲಕ್ಷ್ಮೀ ಶಾಮರಾವ್ ಅಧ್ಯಕ್ಷೀಯ ಭಾಷಣ ಮಾಡಿದರು
ಚಿಕ್ಕಮಗಳೂರಿನಲ್ಲಿ ಶನಿವಾರ ನಡೆದ ತಾಲ್ಲೂಕು ಮಟ್ಟದ ಮಹಿಳಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಲಕ್ಷ್ಮೀ ಶಾಮರಾವ್ ಅಧ್ಯಕ್ಷೀಯ ಭಾಷಣ ಮಾಡಿದರು   

ಚಿಕ್ಕಮಗಳೂರು: ‘ವಿಧಾನಸಭೆ ಮತ್ತು ಲೋಕಸಭೆಯಲ್ಲಿ ಶೇ 50ರಷ್ಟು ಮಹಿಳಾ ಪ್ರಾತಿನಿಧ್ಯ ದೊರೆತಾಗ ಮಹಿಳಾ ಸಬಲೀಕರಣ ಸಾಧ್ಯ ಎಂದುಕೊಳ್ಳಬೇಕು’ ಎಂದು ಸಾಹಿತಿ ಲಕ್ಷ್ಮೀ ಶಾಮರಾವ್ ಅಭಿಪ್ರಾಯಪಟ್ಟರು.

ಕನ್ನಡ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಮಟ್ಟದ ಪ್ರಥಮ ಮಹಿಳಾ ಸಮ್ಮೇಳನದಲ್ಲಿ ಅಧ್ಯಕ್ಷೀಯ ಭಾಷಣ ಮಾಡಿದ ಅವರು, ‘ದೇಶದ ಅಭಿವೃದ್ಧಿಯಾಗಬೇಕೆಂದರೆ ಮಹಿಳೆಯರಿಗೆ ನ್ಯಾಯ ಸಮ್ಮತವಾದ ರಾಜಕೀಯ ಪ್ರಾತಿನಿಧ್ಯ ದೊರೆಯಬೇಕು’ ಎಂದು ಪ್ರತಿಪಾದಿಸಿದರು.

ಎಲ್ಲ ಕ್ಷೇತ್ರದಲ್ಲೂ ತೊಡಗಿಸಿಕೊಂಡಿರುವ ಮಹಿಳೆಯರು ಯಶಸ್ಸಿನ ಮೆಟ್ಟಿಲೇರುತ್ತಿದ್ದಾರೆ. ರಾಜಕೀಯದಲ್ಲಿ ಮಹಿಳೆಯರ ಪ್ರಾತಿನಿಧ್ಯ ನಿರಾಶಾದಾಯಕವಾಗಿದೆ. ಶೇ 33ರಷ್ಟು ಮಹಿಳಾ ಮೀಸಲಾತಿ ದೊರೆತಿದ್ದರೂ ಮಹಿಳಾ ಸಬಲೀಕರಣ ಯಶಸ್ವಿಯಾಗಿಲ್ಲ ಎಂಬುದು ಸತ್ಯ. ಈ ಬಗ್ಗೆ ಆಡಳಿತ ಪಕ್ಷಗಳು ಇಚ್ಛಾಶಕ್ತಿ ತೋರಬೇಕು ಎಂದು ಹೇಳಿದರು.

ADVERTISEMENT

ದೇಶದಲ್ಲಿ 67.40 ಕೋಟಿ ಮಹಿಳೆಯರಿದ್ದು, ಕುಟುಂಬ ನಿರ್ವಹಣೆ ಮಾಡುತ್ತಲೇ ಸಾರ್ವಜನಿಕ ಸೇವೆಯಲ್ಲಿ ಕ್ರಿಯಾಶೀಲವಾಗಿ ತೊಡಗಿಸಿಕೊಂಡಿದ್ದಾರೆ. ದೇಶದ ಅಭಿವೃದ್ಧಿಗೆ ದುಡಿಯುತ್ತಿರುವ ಮಹಿಳೆಯರಿಗೆ ನ್ಯಾಯ ಸಮ್ಮತವಾದ ರಾಜಕೀಯ ಪ್ರಾತಿನಿಧ್ಯತೆ ದೊರೆಯಬೇಕು. ‍ಪಡೆದುಕೊಳ್ಳಲು ಮಹಿಳಾ ಸಂಘಟನೆಗಳು ಸಿದ್ಧವಾಗಬೇಕಿದೆ ಎಂದರು.

ಸಮಸ್ಯೆಗಳಿಗೆ ಮುಕ್ತವಾಗಿ ದನಿ ಎತ್ತಬಲ್ಲ ಜವಾಬ್ದಾರಿಯುತ ನಾಯಕತ್ವ ರೂಪಿಸಿಕೊಳ್ಳುವ ಅನಿವಾರ್ಯತೆ ಈಗ ಮಹಿಳೆಯರಿಗೆ ಇದೆ. ಗ್ರಾಮೀಣ ಮಟ್ಟದಿಂದ ರಾಷ್ಟ್ರಮಟ್ಟದ ತನಕ ಮಹಿಳೆಯರು ಸಂಘಟಿತರಾದಾಗ ಮಾತ್ರ ಯಶಸ್ಸು ಸಾಧ್ಯ. ವ್ಯಕ್ತಿತ್ವ ರೂಪಿಸಿಕೊಂಡು ಸ್ವಾಭಿಮಾನ, ಛಲದಿಂದ ಸಂಘಟಿತರಾದಾಗ ನಿಜವಾಗಿ ಮಹಿಳೆಯರಿಗೆ ನ್ಯಾಯ ಸಿಗುತ್ತದೆ ಎಂದು ಹೇಳಿದರು.

‘ಚಿಕ್ಕಮಗಳೂರಿನ ಇತಿಹಾಸದಲ್ಲಿ ಪ್ರಥಮ ಮಹಿಳಾ ಸಾಹಿತ್ಯ ಸಮ್ಮೇಳನ ನಡೆಯುತ್ತಿದೆ. ಇದಕ್ಕೆ ನನ್ನನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದ ಸಾಹಿತ್ಯಪರಿಷತ್ತಿಗೆ ಋಣಿ’ ಎಂದರು.

ಸಮ್ಮೇಳನ ಉದ್ಘಾಟಿಸಿದ ನಿವೃತ್ತ ಪ್ರಾಧ್ಯಾಪಕಿ ಎಸ್.ಪಿ.ಉಮಾದೇವಿ ಸುತ್ತೂರು, ‘ಮಹಿಳೆಯರ ಸಾಹಿತ್ಯ ಕ್ಷೇತ್ರದ ಸಾಧನೆ ನಿನ್ನೆ-ಮೊನ್ನೆಯಿಂದಲ್ಲ. ಜನಪದ ಗೀತೆಗಳ ಮೂಲಕ ಸಾಹಿತ್ಯ ಕ್ಷೇತ್ರಕ್ಕೆ ಮಹಿಳೆಯರು ತಮ್ಮದೇ ಶೈಲಿಯಲ್ಲಿ ಕೊಡುಗೆ ನೀಡಿದ್ದಾರೆ’ ಎಂದರು.

ಹನ್ನೆರಡನೇ ಶತಮಾನದಲ್ಲಿ ಹಲವು ವಚನಕಾರ್ತಿಯರು ಕನ್ನಡದಲ್ಲಿ ವಚನ ರಚಿಸಿ ಚಳವಳಿಯನ್ನೇ ನಡೆಸಿದರು ಎಂದು ಹೇಳಿದರು.

ಚಿಕ್ಕಮಗಳೂರಿನಲ್ಲಿ ಶನಿವಾರ ನಡೆದ ತಾಲ್ಲೂಕು ಮಟ್ಟದ ಮಹಿಳಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಲಕ್ಷ್ಮೀ ಶಾಮರಾವ್ ಅವರನ್ನು ಪರಿಷತ್ತಿನ ವತಿಯಿಂದ ಗೌರವಿಸಲಾಯಿತು
ಸಮ್ಮೇಳನದವನ್ನು ನಿವೃತ್ತ ಪ್ರಾಧ್ಯಾಪಕಿ ಎಸ್.ಪಿ.ಉಮಾದೇವಿ ಸುತ್ತೂರು ಉದ್ಘಾಟಿಸಿದರು
ಸಮ್ಮೇಳನಾಧ್ಯಕ್ಷರ ಮೆರವಣಿಗೆಯಲ್ಲಿ ಮಹಿಳೆಯರು ತಾಳಕ್ಕೆ ಹೆಜ್ಜೆ ಹಾಕಿದರು
ಸಮ್ಮೇಳನದ ಅಂಗವಾಗಿ ತೆರೆದಿದ್ದ ಪುಸ್ತಕ ಮಳಿಗೆಯಲ್ಲಿ ವಿದ್ಯಾರ್ಥಿಗಳು ಪುಸ್ತಕಗಳನ್ನು ನೋಡುತ್ತಿರುವುದು

‘ಶಾಲೆಗಳಿಂದಲೇ ಸಾಹಿತ್ಯಾಸಕ್ತಿ ಬೆಳೆಸಬೇಕು’

‘ಕನ್ನಡ ಸಾಹಿತ್ಯ ಚಟುವಟಿಕೆಯನ್ನು ಶಾಲೆಗಳಲ್ಲಿ ಹಮ್ಮಿಕೊಂಡು ವಿದ್ಯಾರ್ಥಿಗಳಲ್ಲಿ ಸಾಹಿತ್ಯಾಸಕ್ತಿ ಬೆಳೆಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ’ ಎಂದು ಶಾಸಕ ಎಚ್.ಡಿ.ತಮ್ಮಯ್ಯ ಹೇಳಿದರು. ಸ್ಮರಣ ಸಂಚಿಕೆ ಬಿಡುಗಡೆ ಮಾಡಿದ ಅವರು ‘ಕನ್ನಡ ಸಾಹಿತ್ಯದಲ್ಲಿ ಮಹಿಳೆಯರ ಪಾತ್ರ ಅಪಾರ. ಅಕ್ಕಮಹಾದೇವಿಯಿಂದ ಆದಿಯಾಗಿ ಸಾವಿತ್ರಿಬಾಯಿ ಫುಲೆ ಅನುಪಮಾ ನಿರಂಜನ್ ಗೌರಿ ಲಂಕೇಶ್ ಸೇರಿದಂತೆ ಅಂತರರಾಷ್ಟ್ರೀಯ ಬೂಕರ್ ಪ್ರಶಸ್ತಿ‌ ಪಡೆದ ಬಾನು ಮುಷ್ತಾಕ್‌ ವರೆಗಿನ ಅನೇಕ ಮಹಿಳೆಯರು ಸಾಹಿತ್ಯ ಕ್ಷೇತ್ರಕ್ಕೆ ಕೊಡುಗೆ ನೀಡಿದ್ದಾರೆ ಎಂದರು. ‘ನಮ್ಮ ಜಿಲ್ಲೆಯಲ್ಲಿ ಹುಟ್ಟಿದ ಕುವೆಂಪು ಅಂಬಳೆ ಎ.ಆರ್. ಕೃಷ್ಣಶಾಸ್ತ್ರಿ ಗೊ.ರು.ಚನ್ನಬಸಪ್ಪ ಹಿರೇಮಗಳೂರು ಕಣ್ಣನ್ ಸೇರಿ ಹಲವರು ಕನ್ನಡ ನಾಡು-ನುಡಿಗೆ ಅಪಾರ ಕೊಡುಗೆ ನೀಡಿದ್ದಾರೆ. 47 ವರ್ಷಗಳ ಹಿಂದೆ ನಡೆದ ಕನ್ನಡ ಸಾಹಿತ್ಯ ಸಮ್ಮೇಳನವನ್ನು ನಮ್ಮ ಜಿಲ್ಲೆಯಲ್ಲಿ ಮತ್ತೆ ಆಯೋಜನೆ ಮಾಡಲು ಪ್ರಯತ್ನ ಮಾಡಲಾಗುವುದು’ ಎಂದು ತಿಳಿಸಿದರು.

‘ಮಹಿಳೆಯರು ಸದಾ ಸಮರ್ಥರು’

ಭಾರತೀಯ ಸಂಸ್ಕೃತಿಯಲ್ಲಿ ಮಹಿಳೆಯರಿಗೆ ವಿಶೇಷ ಸ್ಥಾನ ನೀಡಲಾಗಿದೆ. ವೇದಗಳ ಕಾಲದಿಂದ ಇದುವರೆಗೆ ನೀಡಿದ ಅವಕಾಶವನ್ನು ಮಹಿಳೆಯರು ಸಮರ್ಪಕವಾಗಿ ಬಳಸಿಕೊಂಡಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಹೇಳಿದರು. ಸಿಂಧೂರವನ್ನು ಅಳಿಸುತ್ತೇವೆ ಎಂದು ಬಂದರು. ಕೇಂದ್ರ ಸರ್ಕಾರ ಆಪರೇಷನ್ ಸಿಂಧೂರ ಹೆಸರಿನಲ್ಲೇ ಉಗ್ರರ ವಿರುದ್ಧ ಕಾರ್ಯಾಚರಣೆ ನಡೆಸಿತ್ತು. ಅದರ ನೇತೃತ್ವ ವಹಿಸಿದವರೂ ಕರ್ನಲ್ ಸೋಪಿಯಾ ಖುರೇಷಿ ಮತ್ತು ಸೀಮಾ ಸಿಂಗ್. ಈಗಲೂ ಅವಕಾಶ ಸಿಕ್ಕರೆ ದುಷ್ಟರ ಸಂಹಾರಕ್ಕೆ ಸಿದ್ಧ ಎಂಬುದನ್ನು ಆ ಇಬ್ಬರು ತೋರಿಸಿಕೊಟ್ಟರು ಎಂದು ತಿಳಿಸಿದರು. ಭಾರತದಲ್ಲಿ ಎಲ್ಲ ಭಾಷೆಗಳೂ ಸಹ ಸಂಕಷ್ಟದಲ್ಲಿವೆ. 2 ಸಾವಿರ ವರ್ಷಗಳ ಇತಿಹಾಸವಿರುವ ಕನ್ನಡ ಭಾಷೆಗೆ 8 ಜ್ಞಾನಪೀಠ ಪ್ರಶಸ್ತಿ ಲಭಿಸಿದೆ. ಹಳ್ಳಿಗಳಲ್ಲೂ ಮಾತೃ ಭಾಷೆ ಕಲಬೆರೆಕೆ  ಆಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.