ADVERTISEMENT

ಭಾಷೆ ತುಳಿಯುವ ಕೆಲಸ ಸಹಿಸಲಾಗದು: ಕಮಲ್ ಹಾಸನ್ ಹೇಳಿಕೆ ಖಂಡಿಸಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 31 ಮೇ 2025, 14:33 IST
Last Updated 31 ಮೇ 2025, 14:33 IST
ಕಮಲ್‌ ಹಾಸನ್‌ ಹೇಳಿಕೆ ಖಂಡಿಸಿ ಜಿಲ್ಲಾ ಕನ್ನಡಸೇನೆಯಿಂದ ನಗರದ ಆಜಾದ್‌ಪಾರ್ಕ್ ವೃತ್ತದಲ್ಲಿ ಪ್ರತಿಭಟನೆ
ಕಮಲ್‌ ಹಾಸನ್‌ ಹೇಳಿಕೆ ಖಂಡಿಸಿ ಜಿಲ್ಲಾ ಕನ್ನಡಸೇನೆಯಿಂದ ನಗರದ ಆಜಾದ್‌ಪಾರ್ಕ್ ವೃತ್ತದಲ್ಲಿ ಪ್ರತಿಭಟನೆ   

ಚಿಕ್ಕಮಗಳೂರು: ತಮಿಳಿನಿಂದ ಕನ್ನಡ ಭಾಷೆ ಜನಿಸಿದೆ ಎಂದು ಅವಹೇಳನಕಾರಿ ಹೇಳಿಕೆ ನೀಡಿರುವ ನಟ ಕಮಲ್ ಹಾಸನ್ ನಡೆ ಖಂಡಿಸಿ ಶನಿವಾರ ಜಿಲ್ಲಾ ಕನ್ನಡ ಸೇನೆ ಕಾರ್ಯಕರ್ತರು ನಗರದ ಆಜಾದ್‌ಪಾರ್ಕ್ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.

ಬಳಿಕ ಮಾತನಾಡಿದ ಕನ್ನಡ ಸೇನೆ ಜಿಲ್ಲಾ ಘಟಕದ ಅಧ್ಯಕ್ಷ ಪಿ.ಸಿ.ರಾಜೇಗೌಡ, ಸಿನಿಮಾರಂಗ ಹಾಗೂ ರಾಜಕೀಯವಾಗಿ ಸೋತಿರುವ ಕಮಲ್‌ ಹಾಸನ್ ಬಿಟ್ಟಿ ಪ್ರಚಾರಕ್ಕಾಗಿ ಕನ್ನಡವನ್ನು ತುಳಿಯುವ ಕೆಲಸ ಮಾಡಿರುವುದು ಕನ್ನಡಿಗರು ಎಂದಿಗೂ ಸಹಿಸಿಕೊಳ್ಳುವುದಿಲ್ಲ. ವೈಯಕ್ತಿಕ ಸಿನಿ ಲಾಭಕ್ಕಾಗಿ ಪುರಾತನ ಭಾಷೆಯನ್ನು ನಿಂದಿಸುವುದು ಶೋಭೆ ತರುವುದಿಲ್ಲ ಎಂದರು.

ಈಗಾಗಲೇ ಕನ್ನಡ ಚಿತ್ರಗಳಲ್ಲಿ ನಟಿಸಿರುವ ಕಮಲ್‌ ಹಾಸನ್ ಭಾಷೆಯ ಸ್ವಗಂಧವೇ ಅರಿತಿಲ್ಲ. ಕನ್ನಡ ಭಾಷೆ ರಾಷ್ಟ್ರದಲ್ಲೇ ಅತ್ಯಂತ ಪ್ರಸಿದ್ಧಿ ಪಡೆದುಕೊಂಡಿರುವ ಭಾಷೆ. ಕವಿ, ಸಂತರು, ದಾರ್ಶನಿಕರು, ಮಹಾಪುರುಷರು, ಕೀರ್ತನೆಗಾರರಿಂದ ಮನ್ನಣೆ ಪಡೆದುಕೊಂಡಿರುವ ಕನ್ನಡ ಭಾಷೆಗೆ ಇತರೆ ರಾಜ್ಯದವರು ಸರ್ಟಿಫಿಕೇಟ್ ಕೊಡುವ ಅಗತ್ಯವಿಲ್ಲ ಎಂದರು.

ADVERTISEMENT

ಕನ್ನಡಕ್ಕೆ ಪ್ರಾಚೀನ ಲಿಪಿ ಹಾಗೂ ಸಾಹಿತ್ಯ ಪರಂಪರೆಯಿದೆ. ಸಾವಿರಾರು ವರ್ಷಗಳಿಂದ ಭಾಷಾ ಸಂಸ್ಕೃತಿ ಉಳಿಸಿಕೊಂಡಿರುವ ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನವು ಲಭಿಸಿದ್ದು, ಇದನ್ನು ಅಪಮಾನಗೊಳಿಸಿದ್ದು ಕೋಟಿ ಕನ್ನಡಿಗರ ಭಾವನೆಗೆ ಧಕ್ಕೆಯುಂಟು ಮಾಡಿದೆ ಎಂದು ದೂರಿದರು.

ಕೂಡಲೇ ನಟ ಕಮಲ್‌ ಹಾಸನ್ ಸಾರ್ವಜನಿಕವಾಗಿ ಕ್ಷಮೆಯಾಚಿಸಿ ತಪ್ಪೊಪ್ಪಿಕೊಳ್ಳಬೇಕು. ಅದೇ ಮೊಂಡುತನ ಮುಂದುವರೆಸಿದರೆ ರಾಜ್ಯದಲ್ಲಿ ಕಮಲ್‌ನ ಚಿತ್ರಗಳು ಪ್ರದರ್ಶನಗೊಳ್ಳುವುದಿಲ್ಲ ಹಾಗೂ ನಾಡಿನ ಯಾವುದೇ ಜಿಲ್ಲೆಗಳಿಗೂ ಕಾಲಿಡದಂತೆ ಉಗ್ರಹೋರಾಟ ರೂಪಿಸಲಾಗುವುದು ಎಂದು ಎಚ್ಚರಿಸಿದರು.

ಕಮಲ್ ಹಾಸನ್ ಕ್ಷಮೆಗೂ ಮುನ್ನ ರಾಜ್ಯದ ಯಾವುದೇ ಚಿತ್ರಮಂದಿರಗಳಲ್ಲಿ ಅವರ ಸಿನಿಮಾ ಬಿಡುಗಡೆಗೆ ಮುಂದಾದರೆ ನೇರವಾಗಿ ಚಿತ್ರಮಂದಿರದ ಮಾಲೀಕರು ಗಲಭೆಗೆ ಕಾರಣವಾಗಲಿದ್ದು ಈ ಬಗ್ಗೆ ಮಾಲೀಕರು ಎಚ್ಚರಿಕೆ ವಹಿಸಬೇಕು ಎಂದು ಹೇಳಿದರು.

ಈ ವೇಳೆ ಆಟೊ ಸಂಘದ ಅಧ್ಯಕ್ಷ ಜಯಪ್ರಕಾಶ್, ಮುಖಂಡರಾದ ‌ಅನ್ವರ್, ಕಳವಾಸೆ ರವಿ, ಕಲ್ಲುದೊಡ್ಡಿ ಸತೀಶ್, ಶಂಕರೇಗೌಡ, ಪಾಲಾಕ್ಷಿ, ರಮೇಶ್, ನಿಲೇಶ್, ದಯಾನಂದ್, ಅತೀಕ್, ಚೇತನ್, ವಿನಯ್ ಜಿ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.