ADVERTISEMENT

ಕೆಂಪೇಗೌಡರು ನಿರ್ಮಿಸಿದ ಕೆರೆಗಳು ಮಾಯ: ರಾಜೇಗೌಡ

ನಾಡಪ್ರಭು ಕೆಂಪೇಗೌಡ ಜಯಂತಿ ಆಚರಣೆ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 28 ಜೂನ್ 2022, 5:15 IST
Last Updated 28 ಜೂನ್ 2022, 5:15 IST
ಕೊಪ್ಪದಲ್ಲಿ ನಡೆದ ಕೆಂಪೇಗೌಡ ಜಯಂತಿ ಕಾರ್ಯಕ್ರಮದಲ್ಲಿ ತಾಲ್ಲೂಕು ಕಸಾಪ ಪೂರ್ವಾಧ್ಯಕ್ಷ ಎಚ್.ಎಂ.ರವಿಕಾಂತ್ ಮಾತನಾಡಿದರು. ಶಾಸಕ ಟಿ.ಡಿ.ರಾಜೇಗೌಡ, ತಹಶೀಲ್ದಾರ್ ಎಚ್.ಎಸ್.ಪರಮೇಶ್ ಇದ್ದರು.
ಕೊಪ್ಪದಲ್ಲಿ ನಡೆದ ಕೆಂಪೇಗೌಡ ಜಯಂತಿ ಕಾರ್ಯಕ್ರಮದಲ್ಲಿ ತಾಲ್ಲೂಕು ಕಸಾಪ ಪೂರ್ವಾಧ್ಯಕ್ಷ ಎಚ್.ಎಂ.ರವಿಕಾಂತ್ ಮಾತನಾಡಿದರು. ಶಾಸಕ ಟಿ.ಡಿ.ರಾಜೇಗೌಡ, ತಹಶೀಲ್ದಾರ್ ಎಚ್.ಎಸ್.ಪರಮೇಶ್ ಇದ್ದರು.   

ಕೊಪ್ಪ: ‘ಕೃಷಿಕರಿಗೆ ಅನುಕೂಲವಾಗುವಂತೆ ನಾಡಪ್ರಭು ಕೆಂಪೇಗೌಡರು ಅನೇಕ ಕೆರೆಗಳನ್ನು ನಿರ್ಮಿಸಿದ್ದರು. ನಗರ ಬೆಳೆಯುತ್ತಿದ್ದಂತೆ ಇಂದು ಒಂದೊಂದಾಗಿ ಅವುಗಳು ಮಾಯವಾಗುತ್ತಿವೆ’ ಎಂದು ಶಾಸಕ ಟಿ.ಡಿ.ರಾಜೇಗೌಡ ವಿಷಾಧಿಸಿದರು.

ತಾಲ್ಲೂಕು ಆಡಳಿತ ವತಿಯಿಂದ ತಾಲ್ಲೂಕು ಕಚೇರಿಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ ನಾಡಪ್ರಭು ಕೆಂಪೇಗೌಡ ಅವರ 513ನೇ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ‘ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ಸಂದರ್ಭ ರಾಷ್ಟ್ರೀಯ ಹಬ್ಬಗಳ ಆಚರಣೆಯಡಿ ಕೆಂಪೇಗೌಡರ ಜಯಂತಿ ಘೋಷಿಸಿದ್ದರು’ ಎಂದರು.

‘ಕೆಂಪೇಗೌಡರ ಸಾಧನೆಗಳನ್ನು ಶಾಲಾ ಮಕ್ಕಳಿಗೆ ತಿಳಿಸಿಕೊಡುವ ಕೆಲಸ ನಡೆಯಬೇಕು. ಆ ಮೂಲಕ ಮಕ್ಕಳನ್ನು ಸತ್ಪ್ರಜೆಗಳನ್ನಾಗಿ ರೂಪಿಸಬೇಕು. ಬೆಂಗಳೂರು ನಿರ್ಮಾತೃ ಕೆಂಪೇಗೌಡರ ಜಯಂತಿ ಆಚರಣೆ ಅರ್ಥಗರ್ಭಿತವಾಗಿ ನಡೆಯಬೇಕು. ದೇಶದ ಪ್ರಮುಖ ನಗರವಾಗಿ ಗುರುತಿಸಿಕೊಳ್ಳಲು ಕೆಂಪೇಗೌಡರ ಕೊಡುಗೆ ಪ್ರಮುಖ ಕಾರಣ’ ಎಂದು ತಿಳಿಸಿದರು.

ADVERTISEMENT

ಪ್ರಧಾನ ಉಪನ್ಯಾಸ ನೀಡಿದ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಪೂರ್ವಾಧ್ಯಕ್ಷ ಎಚ್.ಎಂ.ರವಿಕಾಂತ್ ಮಾತನಾಡಿ, ‘ನಾಡಪ್ರಭು ಕೆಂಪೇಗೌಡ ಅವರು ನೇಗಿಲಿಗೆ ಪೂಜೆ ಮಾಡುವ ಮೂಲಕ ಬೆಂಗಳೂರು ನಗರ ಸ್ಥಾಪನೆ ಶಂಕುಸ್ಥಾಪನೆ ನೆರವೇರಿಸಿದ್ದರು. ಅವರು ರಾಜನಿಷ್ಠೆ ಮತ್ತು ಪ್ರಗತಿಪರತೆಗೆ ಹೆಸರುವಾಸಿಯಾಗಿದ್ದರು’ ಎಂದರು.

ಮಂಡಲ ಬಿಜೆಪಿ ಅಧ್ಯಕ್ಷ ಅದ್ದಡ ಸತೀಶ್ ಮಾತನಾಡಿ, ‘ಕೆಂಪೇಗೌಡರ ಕೊಡುಗೆ ಅನನ್ಯವಾದದ್ದು, ಅವರ ಜಯಂತಿ ಆಚರಣೆಯನ್ನು ಒಂದು ಸಮುದಾಯಕ್ಕೆ ಸೀಮಿತಗೊಳಿಸಬಾರದು’ ಎಂದರು.

ತಾಲ್ಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಅಧ್ಯಕ್ಷರೂ ಆದ ತಹಶೀಲ್ದಾರ್ ಎಚ್.ಎಸ್.ಪರಮೇಶ್ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜಿಲ್ಲಾ ಒಕ್ಕಲಿಗರ ಸಂಘದ ನಿರ್ದೇಶಕ ಪೃಥ್ವಿರಾಜ್ ಕೌರಿ, ತಾಲ್ಲೂಕು ಒಕ್ಕಲಿಗರ ಸಂಘದ ಉಪಾಧ್ಯಕ್ಷ ಯು.ಎಸ್.ಶಿವಪ್ಪ, ಖಜಾಂಚಿ ಕೌರಿ ಪ್ರಕಾಶ್, ಪ್ರಧಾನ ಕಾರ್ಯದರ್ಶಿ ವಿ.ಡಿ.ನಾಗರಾಜ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.