ADVERTISEMENT

ಅಡಿಕೆ ಆಮದು ನಿರ್ಧಾರ; ಬೆಳೆಗಾರರಿಗೆ ಕಂಟಕ: ಸುಧೀರ್ ಕುಮಾರ್ ಮುರೊಳ್ಳಿ

​ಪ್ರಜಾವಾಣಿ ವಾರ್ತೆ
Published 2 ಅಕ್ಟೋಬರ್ 2022, 6:23 IST
Last Updated 2 ಅಕ್ಟೋಬರ್ 2022, 6:23 IST
ಸುಧೀರ್ ಕುಮಾರ್
ಸುಧೀರ್ ಕುಮಾರ್   

ಕೊಪ್ಪ: ‘ಅಡಿಕೆ ಬೆಳೆಗೆ ಹಳದಿ ರೋಗ, ಕೊಳೆ ರೋಗ ಇನ್ನಿತರೆ ಕಾಯಿಲೆಗಳ ಜತೆಗೆ ಇದೀಗ ಕಾಣಿಸಿಕೊಂಡಿರುವ ಎಲೆಚುಕ್ಕಿ ರೋಗ, ಅತಿವೃಷ್ಟಿಯಿಂದ ಅಡಿಕೆ ಬೆಳೆಗಾರರ ಕಂಗಾಲಾಗಿದ್ದಾರೆ. ಕೇಂದ್ರ ಸರ್ಕಾರದ ಅಡಿಕೆ ಆಮದು ನೀತಿ ಕಂಟಕಪ್ರಾಯವಾಗಿದೆ’ ಎಂದು ಕೆಪಿಸಿಸಿ ವಕ್ತಾರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುಧೀರ್ ಕುಮಾರ್ ಮುರೊಳ್ಳಿ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಅವರು ಮಾತ ನಾಡಿ, ‘ಪ್ರತಿಯೊಂದನ್ನು ಜಿಎಸ್‌ಟಿ ವ್ಯಾಪ್ತಿಗೆ ತಂದಿರುವ ಕೇಂದ್ರ ಸರ್ಕಾರ ಹೊರದೇಶದಿಂದ ಅಡಿಕೆ ಆಮದಿಗೆ ಶುಲ್ಕ ರಹಿತ ಪರವಾನಗಿ ನೀಡುವ ಮೂಲಕ ಈ ಭಾಗದ ರೈತರಿಗೆ ಅನ್ಯಾಯ ಮಾಡಿದೆ. ಈ ಬಾರಿ ಅತಿವೃಷ್ಟಿಯಿಂದ ಹಾಗೂ ಎಲೆಚುಕ್ಕಿ ರೋಗದಿಂದ ಅಡಿಕೆ ಬೆಳೆ ಕುಸಿತ ಕಂಡಿದೆ, ಬೆಲೆ ನಿರೀಕ್ಷೆಯಲ್ಲಿದ್ದ ರೈತರನ್ನು ಬೀದಿಗೆ ತಂದು ನಿಲ್ಲಿಸಿದೆ’ ಎಂದು ದೂರಿದರು.

‘ರಾಜ್ಯದಲ್ಲಿನ ಬೆಳೆಗಾರರು ಸಂಪೂರ್ಣ ನಷ್ಟ ಹೊಂದಿ ಬೀದಿಗೆ ಬರಬೇಕು. ಚುನಾವಣೆ ಸಂದರ್ಭ ಬೆಳೆಗಾರರ ಮಕ್ಕಳು ತಮ್ಮೊಂದಿಗೆ ಘೋಷಣೆ ಕೂಗುತ್ತಾ ಗಲಭೆ, ದೊಂಬಿಗಳಿಗೆ ಬಳಕೆಯಾಗಬೇಕು ಎನ್ನುವ ಬಿಜೆಪಿಯ ಹುನ್ನಾರ ಇದು. ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಸಂಸದೆ ಹಾಗೂ ಕೇಂದ್ರ ಕೃಷಿ ಸಚಿವೆ ಶೋಭಾ ಕರಂದ್ಲಾಜೆ ಅವರು ಅಡಿಕೆ ಆಮದಿನಿಂದ ಈ ಭಾಗದ ರೈತರ ಮೇಲಾಗುವ ದುಷ್ಪರಿಣಾಮಗಳ ಬಗ್ಗೆ ಕೇಂದ್ರದ ಗಮನಕ್ಕೆ ತರುವಲ್ಲಿ ವಿಫಲ ರಾಗಿದ್ದಾರೆ’ ಎಂದು ಆರೋಪಿಸಿದರು.

ADVERTISEMENT

ಕೇಂದ್ರ ಸಚಿವೆಗೆ ಕರೆ: ಸುದ್ದಿಗೋಷ್ಠಿ ನಡುವೆಯೇ ಶೋಭಾ ಕರಂದ್ಲಾಜೆ ಅವರಿಗೆ ದೂರವಾಣಿ ಕರೆ ಮಾಡಿದ ಸುಧೀರ್ ಅವರು, ‘ಈ ಭಾಗದ ಅಡಿಕೆ ಬೆಳೆಗಾರರ ಸಮಸ್ಯೆಯ ಬಗ್ಗೆ, ಆಗುತ್ತಿರುವ ಅತಿವೃಷ್ಟಿಯ ಬಗ್ಗೆ ವಿವರಿಸಿ ಕೇಂದ್ರ ಸರ್ಕಾರದ ಅಡಿಕೆ ಆಮದು ನೀತಿಯನ್ನು ರದ್ದು ಪಡಿಸುವಂತೆ ಕೇಂದ್ರ ಸರ್ಕಾರದ ಗಮನ ಸೆಳೆಯಬೇಕು’ ಎಂದು ಮನವಿ ಮಾಡಿದರು. ಬೆಳೆಗಾರರ ಸಮಸ್ಯೆಗೆ ಸ್ಪಂದಿಸುವುದಾಗಿ ಶೋಭಾ ಕರಂದ್ಲಾಜೆ ಭರವಸೆ ನೀಡಿದರು.

ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಎಚ್.ಎಸ್.ಇನೇಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.