ಚಿಕ್ಕಮಗಳೂರು: ಜಿಲ್ಲೆಯಲ್ಲಿ ಕೆರೆ ಒತ್ತುವರಿ ತೆರವಿಗೆ ಹಲವು ಗಡುವುಗಳನ್ನು ನೀಡಿದ್ದರೂ, ಇನ್ನೂ 489 ಕೆರೆಗಳ ಒತ್ತುವರಿ ತೆರವು ಬಾಕಿ ಉಳಿದಿದೆ. 779 ಎಕರೆಯಷ್ಟು ಒತ್ತುವರಿ ಬಾಕಿ ಉಳಿದಿದೆ.
ಜಿಲ್ಲೆಯಲ್ಲಿ 1,729 ಕೆರೆಗಳಿದ್ದು, 17,774 ಎಕರೆಯಷ್ಟು ವಿಸ್ತೀರ್ಣ ಹೊಂದಿದೆ. ಆದರೆ, ಈ ಪೈಕಿ 761 ಕೆರೆಗಳು ಒತ್ತುವರಿಯಾಗಿವೆ. ಸರ್ವೆ ಮಾಡಿದ್ದರೂ ತೆರವು ಕಾರ್ಯಾಚರಣೆಗೆ ಹಲವು ತೊಡಕುಗಳು ಕಾಡುತ್ತಿವೆ. 272 ಕೆರೆಗಳ ಒತ್ತುವರಿ ತೆರವಾಗಿದೆ. ಇನ್ನೂ 489 ಕೆರೆಗಳು ತೆರವು ಬಾಕಿ ಇದೆ. ಆಗಸ್ಟ್‌ನಲ್ಲಿ ಈ ಸಂಖ್ಯೆ 595 ಇತ್ತು.
2024ರಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ನಡೆಸಿದ ಸಭೆಗಳಲ್ಲಿ ಬಹುತೇಕ ಕೆರೆ ಒತ್ತುವರಿ ತೆರವು ವಿಷಯ ಪ್ರಸ್ತಾಪವಾಗುತ್ತಲೇ ಇದೆ. ಅವರು ಪದೇ ಪದೇ ಗಡುವು ನೀಡಿದ್ದರೂ, ಪ್ರಗತಿ ಮಾತ್ರ ಸಾಧ್ಯವಾಗಿಲ್ಲ. ಅಧಿಕಾರಿಗಳು ನೀಡಿರುವ ಮಾಹಿತಿ ಪ್ರಕಾರ ನವೆಂಬರ್ ಮತ್ತು ಡಿಸೆಂಬರ್‌ನಲ್ಲಿ 18 ಕೆರೆಗಳ ಒತ್ತುವರಿಷ್ಟೇ ತೆರವಾಗಿದೆ.
ಕಳೆದ ಎರಡು ತಿಂಗಳಲ್ಲಿ ಚಿಕ್ಕಮಗಳೂರು ತಾಲ್ಲೂಕಿನಲ್ಲಿ 10 ಕೆರೆ, ಕಡೂರು ತಾಲ್ಲೂಕಿನಲ್ಲಿ 5, ಮೂಡಿಗೆರೆ ತಾಲ್ಲೂಕಿನಲ್ಲಿ 3 ಕೆರೆಗಳ ಒತ್ತುವರಿ ತೆರವಾಗಿವೆ. ಉಳಿದ ತಾಲ್ಲೂಕುಗಳಲ್ಲಿ ಕೆರೆ ಒತ್ತುವರಿ ತೆರವು ಶೂನ್ಯ. ಕಳಸ ತಾಲ್ಲೂಕಿನಲ್ಲಿ ಇರುವುದೇ ಎರಡು ಕೆರೆ. ಎರಡೂ ಕೆರೆಯಿಂದ 1 ಎಕರೆಯಷ್ಟೇ ವಿಸ್ತೀರ್ಣ ಇದೆ. ಇಲ್ಲಿ ಒತ್ತುವರಿಯೂ ಅಗಿಲ್ಲ. ತೆರವೂ ಇಲ್ಲ.
ಕಂದಾಯ ಇಲಾಖೆ, ಭೂಮಾಪನ ಇಲಾಖೆ, ಜಿಲ್ಲಾ ಪಂಚಾಯಿತಿ, ಸಣ್ಣ ನೀರಾವರಿ ಇಲಾಖೆ, ಪೊಲೀಸ್ ಇಲಾಖೆ ಅಧಿಕಾರಿಗಳನ್ನು ಒಳಗೊಂಡ ಕಾರ್ಯಪಡೆ ರಚನೆಯಾಗಿದೆ. ಪ್ರತಿ ಶುಕ್ರವಾರ ತೆರವು ಕಾರ್ಯಾಚರಣೆ ನಡೆಸಲು ಜಿಲ್ಲಾಧಿಕಾರಿ ಸೂಚನೆ ನೀಡಿದ್ದಾರೆ. ಆದರೆ, ಒಂದಿಲ್ಲೊಂದು ಕಾರಣ ನೀಡಿ ವಿಳಂಬ ಮಾಡಲಾಗುತ್ತಿದೆ.
ಒತ್ತುವರಿದಾರರು ಬಹುತೇಕ ಬಲಾಢ್ಯರೇ ಇದ್ದಾರೆ. ರಾಜಕೀಯ ಒತ್ತಡಗಳೂ ತೆರವಿಗೆ ವಿಳಂಬವಾಗುತ್ತಿದೆ ಎಂಬ ಆರೋಪಗಳಿವೆ. ‘ಯಾವುದೇ ಒತ್ತಡಕ್ಕೂ ಮಣಿಯಬಾದರು. ಕೆರೆ ಒತ್ತುವರಿ ತೆರವುಗೊಳಿಸಿ ಪ್ರತಿ ಶುಕ್ರವಾರ ವರದಿ ನೀಡಬೇಕು’ ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ರಾಜೇಂದರ್‌ಕುಮಾರ್ ಕಟಾರಿಯಾ ಅವರು ಅಧಿಕಾರಿಗಳಿಗೆ ತಾಕೀತು ಮಾಡಿದ್ದಾರೆ.
ಕೆರೆಯಲ್ಲಿ ನೀರಿದ್ದು, ಅಲ್ಲಿಗೆ ಜೆಸಿಬಿಯೊಂದಿಗೆ ತೆರಳಲು ಸಾಧ್ಯವಾಗುತ್ತಿಲ್ಲ ಎಂದು ಕಾರಣಗಳನ್ನು ಅಧಿಕಾರಿಗಳು ನೀಡುತ್ತಿದ್ದಾರೆ. ಬೇಸಿಗೆಯಲ್ಲಿ ಎಲ್ಲಾ ಕೆರೆಗಳು ಖಾಲಿಯಾಗಿದ್ದವು. ಆಗಲೂ ಸಮರೋಪಾದಿಯಲ್ಲಿ ತೆರವು ಕಾರ್ಯಾಚರಣೆ ನಡೆಸಲಿಲ್ಲ. ಈಗ ಮಳೆ ಬಿಡುವು ನೀಡಿದೆ, ಕೆರೆಗಳಲ್ಲಿ ನೀರು ಕೂಡ ಕಡಿಮೆಯಾಗುತ್ತಿದೆ. ಒತ್ತುವರಿ ತೆರವಿಗೆ ಅಡಚಣೆ ಏನು ಎಂಬುದು ಜನರ ಪ್ರಶ್ನೆ.
ಚಿಕ್ಕಮಗಳೂರು ತಾಲ್ಲೂಕಿನಲ್ಲಿ ಕೆರೆಗಳ ಸಂಖ್ಯೆ ಕೂಡ ಹೆಚ್ಚಿದ್ದು ಒತ್ತುವರಿ ಕೂಡ ಇದೇ ತಾಲ್ಲೂಕಿನಲ್ಲಿ ಹೆಚ್ಚು. 668 ಕೆರೆಗಳಿದ್ದರೆ 344 ಕೆರೆಗಳಲ್ಲಿ ಒತ್ತುವರಿಯಾಗಿದೆ ಎಂಬುದನ್ನು ಅಧಿಕಾರಿಗಳು ಗುರುತಿಸಿದ್ದಾರೆ. 262 ಎಕರೆಯಷ್ಟು ಒತ್ತುವರಿಯಾಗಿದ್ದು 69 ಕೆರೆಗಳ 81 ಎಕರೆಯನ್ನು ತೆರವುಗೊಳಿಸಲಾಗಿದೆ. ಇನ್ನೂ 275 ಕೆರೆಗಳಲ್ಲಿ 181 ಎಕರೆ ಒತ್ತುವರಿ ತೆರವು ಬಾಕಿ ಇದೆ.
ಕೆರೆಗಳ ಸಂಖ್ಯೆಯಲ್ಲಿ ಕಡೂರು ಎರಡನೇ ಸ್ಥಾನದಲ್ಲಿದ್ದರೆ ವಿಸ್ತೀರ್ಣದಲ್ಲಿ ಮೊದಲನೇ ಸ್ಥಾನದಲ್ಲಿದೆ. 290 ಕೆರೆಗಳಿದ್ದು 8707 ಎಕರೆಯಷ್ಟು ವಿಸ್ತೀರ್ಣ ಇದೆ. 120 ಕೆರೆಗಳಲ್ಲಿ 527 ಎಕರೆ ಒತ್ತುವರಿ ಗುರುತಿಸಲಾಗಿದೆ. ಈ ಪೈಕಿ 63 ಕೆರೆಗಳ 225 ಎಕರೆ ತೆರವಾಗಿದೆ. ಇನ್ನೂ 57 ಎಕರೆಗಳಲ್ಲಿ 301 ಎಕರೆ ತೆರವು ಬಾಕಿ ಇದೆ.
ತರೀಕೆರೆ ತಾಲ್ಲೂಕಿನಲ್ಲಿ 224 ಕೆರೆಗಳಿದ್ದು 2175 ಎಕರೆ ವಿಸ್ತೀರ್ಣ ಹೊಂದಿದೆ. ಈ ಪೈಕಿ 106 ಕೆರೆಗಳಲ್ಲಿ 191 ಎಕರೆಯಷ್ಟು ಒತ್ತುವರಿ ಗುರುತಿಸಲಾಗಿದೆ. 13 ಕೆರೆಗಳಲ್ಲಿ ಒತ್ತುವರಿಯಾಗಿದ್ದರೆ 10 ಎಕರೆಯಷ್ಟೇ ತೆರವಾಗಿದೆ. ಇನ್ನೂ 93 ಕೆರೆಗಳಲ್ಲಿ 181 ಎಕರೆ ತೆರವು ಬಾಕಿ ಇದೆ. ಕಳೆದ ಎರಡು ತಿಂಗಳಲ್ಲಿ ಒಂದೇ ಒಂದು ಕೆರೆಯಲ್ಲಿ ಒತ್ತುವರಿ ತೆರವು ಕಾರ್ಯ ನಡೆದಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.