ADVERTISEMENT

ವಾಚನ ಯಾನಕ್ಕೆ ಮರುಜೀವ

ಲಾಕ್‌ಡೌನ್‌ ಸಡಿಲಿಕೆ: ಗ್ರಂಥಾಲಯ ಬಳಕೆಗೆ ಅವಕಾಶ

ಬಿ.ಜೆ.ಧನ್ಯಪ್ರಸಾದ್
Published 11 ಅಕ್ಟೋಬರ್ 2020, 4:12 IST
Last Updated 11 ಅಕ್ಟೋಬರ್ 2020, 4:12 IST
ಚಿಕ್ಕಮಗಳೂರಿನ ನಗರ ಕೇಂದ್ರ ಗ್ರಂಥಾಲಯದಲ್ಲಿ ವಾಚಕರು ಓದಿನಲ್ಲಿ ತೊಡಗಿರುವುದು. ಪ್ರಜಾವಾಣಿ ಚಿತ್ರ/ ಎ.ಎನ್‌.ಮೂರ್ತಿ
ಚಿಕ್ಕಮಗಳೂರಿನ ನಗರ ಕೇಂದ್ರ ಗ್ರಂಥಾಲಯದಲ್ಲಿ ವಾಚಕರು ಓದಿನಲ್ಲಿ ತೊಡಗಿರುವುದು. ಪ್ರಜಾವಾಣಿ ಚಿತ್ರ/ ಎ.ಎನ್‌.ಮೂರ್ತಿ   

ಚಿಕ್ಕಮಗಳೂರು: ಲಾಕ್‌ಡೌನ್‌ ಸಡಿಲಿಕೆಯಿಂದ ಗ್ರಂಥಾಲಯಗಳು ಬಳಕೆಗೆ ಮುಕ್ತವಾಗಿವೆ. ಸುರಕ್ಷತಾ ಕ್ರಮಗಳು, ಮಾರ್ಗಸೂಚಿಗಳನ್ನು ಅನ್ವಯಿಸಿ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿದೆ. ಸ್ಪರ್ಧಾರ್ಥಿಗಳು, ಓದುಗರ ವಾಚನ ಯಾನ ಶುರುವಾಗಿದೆ.

ಕೋವಿಡ್‌–19ನಿಂದಾಗಿ ಆರು ತಿಂಗಳಿನಿಂದ ಗ್ರಂಥಾಲಯ ಬಳಕೆಗೆ ಲಭ್ಯ ಇರಲಿಲ್ಲ. ಸೆ.12ರಿಂದ ಗ್ರಂಥಾಲಯಗಳನ್ನು ಮತ್ತೆ ಆರಂಭಿಸಲಾಗಿದೆ. ಕೋಣೆಗಳನ್ನು ಸ್ವಚ್ಛಗೊಳಿಸಿ, ಸೋಂಕು ನಿವಾರಕ ದ್ರಾವಣ ಸಿಂಪಡಿಸಿ ಸಜ್ಜುಗೊಳಿಸಲಾಗಿದೆ.

ಓದುಗರಿಗೆ ಗ್ರಂಥಾಲಯದಲ್ಲಿನ ಸವಲತ್ತುಗಳ ಬಳಕೆಗೆ ಅನುವು ಮಾಡಲಾಗಿದೆ. ನಗರ ಕೇಂದ್ರ ಗ್ರಂಥಾಲಯ ಬೆಳಿಗ್ಗೆ 8ರಿಂದ ರಾತ್ರಿ 8 ಗಂಟೆವರೆಗೆ ಕಾರ್ಯನಿರ್ವಹಿಸುತ್ತಿದೆ. ಅಂತರ ಪಾಲನೆ ಗಮನದಲ್ಲಿಟ್ಟುಕೊಂಡು ದಿನಪತ್ರಿಕೆ ವಿಭಾಗ ಸಹಿತ ವಿವಿಧ ವಿಭಾಗಗಳ ಆಸನ, ಮೇಜು ವ್ಯವಸ್ಥೆ ಮರುಜೋಡಣೆ ಮಾಡಲಾಗಿದೆ. ಬೆಳಿಗ್ಗೆ ಬಾಗಿಲು ತೆರೆದಾಗಿನಿಂದ ರಾತ್ರಿ ಬಾಗಿಲು ಮುಚ್ಚುವವರೆಗೂ ಈ ಗ್ರಂಥಾಲಯದಲ್ಲೇ ಇದ್ದು ಓದುವ ಅನೇಕ ಸ್ಪರ್ಧಾರ್ಥಿಗಳು ಇದ್ದಾರೆ.

ADVERTISEMENT

ನಗರ ಕೇಂದ್ರ ಗ್ರಂಥಾಲಯ ಸಹಿತ ವಿವಿಧ ಗ್ರಂಥಾಲಯಗಳಲ್ಲಿ ಹಲವಾರು ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಮೊಬೈಲ್‌ಗಳಲ್ಲಿ ‘ಆರೋಗ್ಯ ಸೇತು’ ಆ್ಯಪ್‌ ಕಡ್ಡಾಯವಾಗಿ ಬಳಸಬೇಕು ಎಂದು ಓದುಗರಿಗೆ ಸೂಚನೆ ನೀಡಲಾಗಿದೆ.

ಕಡ್ಡಾಯವಾಗಿ ಮಾಸ್ಕ್‌ ಧರಿಸಬೇಕು, ಅಂತರ ಪಾಲನೆ ಮಾಡಬೇಕು, ಬ್ಯಾಗ್‌ಗಳನ್ನು ಆಸನಗಳ ಬಳಿಗೆ ಒಯ್ಯವಂತಿಲ್ಲ, ಪ್ರತ್ಯೇಕವಾಗಿ ಇಡಬೇಕು ಎಂಬ ಷರತ್ತುಗಳನ್ನು ವಿಧಿಸಲಾಗಿದೆ. ಪ್ರವೇಶ ದ್ವಾರದಲ್ಲಿ ಥರ್ಮಲ್‌ ಸ್ಕ್ಯಾನರ್‌ನಲ್ಲಿ ತಪಾಸಣೆ ಮಾಡಬೇಕು, ಕೈ ಸ್ವಚ್ಛತೆಗೆ ಸ್ಯಾನಿಟೈಸರ್‌ ವ್ಯವಸ್ಥೆ ಮಾಡಬೇಕು ಎಂಬ ಅಂಶಗಳು ಮಾರ್ಗಸೂಚಿಯಲ್ಲಿವೆ.

ಲಾಕ್‌ಡೌನ್‌ ಸಡಿಲಿಕೆಯಿಂದ ವಿವಿಧ ನೇಮಕಾತಿ, ಅರ್ಹತಾ, ಸ್ಪರ್ಧಾ ಪರೀಕ್ಷೆಗಳು ನಡೆಯುತ್ತಿವೆ. ಪರೀಕ್ಷಾ ಸಿದ್ಧತೆಗೆ ಗ್ರಾಮೀಣ, ನಗರ ಪ್ರದೇಶಗಳ ಬಹುತೇಕ ಸ್ಪರ್ಧಾರ್ಥಿಗಳಿಗೆ ಗ್ರಂಥಾಲಯವೇ ಜೀವಾಳ. ಪತ್ರಿಕೆ, ನಿಯತಕಾಲಿಕೆ, ಪುಸ್ತಕಗಳನ್ನು ಓದಲು ಮಾಮೂಲಿಯಾಗಿ ಹಲವರು ನಿಯಮಿತವಾಗಿ ಬರುತ್ತಾರೆ. ಗ್ರಂಥಾಲಯ ಆರಂಭಿಸಿರುವುದು ಇವರಿಗೆ ಖುಷಿ ಮೂಡಿಸಿದೆ.

ಪುಸ್ತಕ ಎರವಲು: ಪುಸ್ತಕ ಎರವಲು ಈಗ ಸವಾಲಾಗಿದೆ. ಗ್ರಂಥಾಲಯದ ಸದಸ್ಯತ್ವ ಕಾರ್ಡ್‌ ಹೊಂದಿರುವವರಿಗೆ ಪುಸ್ತಕಗಳನ್ನು ವಿತರಿಸಲಾಗುತ್ತಿದೆ. ಆದರೆ, ಓದುಗರು ಹಿಂದಿರುಗಿಸಿದ ನಂತರ ಅವುಗಳನ್ನು ಸ್ಯಾನಿಟೈಸ್‌ ಮಾಡುವುದು ಸಮಸ್ಯೆಯಾಗಿದೆ.

‘ಹಿಂದಿರುಗಿಸಿದ ಪುಸ್ತಕಗಳನ್ನು ಸ್ಯಾನಿಟೈಸ್‌ ಮಾಡುವುದರಿಂದ ಒದ್ದೆಯಾಗುತ್ತವೆ. ಪದೇಪದೇ ಮಾಡಿದರೆ ಹಾಳಾಗುತ್ತವೆ’ ಎಂದು ನಗರ ಕೇಂದ್ರ ಗ್ರಂಥಾಲಯದ ಮುಖ್ಯ ಗ್ರಂಥಪಾಲಕ ಉಮೇಶ್‌ ಹೇಳುತ್ತಾರೆ.

‘ಮುಂದಿನ ದಿನಗಳಲ್ಲಿ ಸ್ಪರ್ಧಾ ಪರೀಕ್ಷೆಗಳಿಗೆ ತಯಾರಿ ನಡೆಸುವವರಿಗೆ ಪ್ರತ್ಯೇಕ ವಿಭಾಗ ಕಲ್ಪಿಸುವ ಉದ್ದೇಶ ಇದೆ. ಈಗಿರುವ ಕಟ್ಟದಲ್ಲಿ ಜಾಗದ ಕೊರತೆ ಇದೆ. ಪಕ್ಕದಲ್ಲಿ ಹೆಚ್ಚುವರಿ ಕಟ್ಟಡ ನಿರ್ಮಾಣ ಕಾಮಗಾರಿ ಶುರುವಾಗಿದೆ. ಆ ಕಟ್ಟಡದಲ್ಲಿ ಸ್ಪರ್ಧಾರ್ಥಿಗಳಿಗೆ ವ್ಯವಸ್ಥೆ ಕಲ್ಪಿಸಲು ಯೋಜಿಸಿದ್ದೇವೆ’ ಎಂದು ಅವರು ತಿಳಿಸಿದರು.

ಓದುಗರ ಮೊರೆ...

ವಿವಿಧ ಸ್ಪರ್ಧಾ ಪರೀಕ್ಷೆಗಳಿಗೆ ತಯಾರಿ ನಡೆಸಿರುವವರಿಗೆ ಗ್ರಂಥಾಲಯ ಆರಂಭ ಖುಷಿ ಮೂಡಿಸಿದೆ. ಗ್ರಂಥಾಲಯಗಳಲ್ಲಿ ಈಗ ವಿಧಿಸಿರುವ ಮಾರ್ಗದರ್ಶಿ ಸೂತ್ರಗಳ ಪಾಲನೆಗೆ ನಿಗಾ ವಹಿಸಬೇಕು, ಇನ್ನು ಕೆಲವಾರು ಕ್ರಮಗಳನ್ನು ಕೈಗೊಳ್ಳಬೇಕು ಎಂದು ಹಲವು ಓದುಗರ ಮನವಿಯಾಗಿದೆ.

ನಗರ ಕೇಂದ್ರ ಗ್ರಂಥಾಲಯದಲ್ಲಿ ಕುಡಿಯಲು ಬಿಸಿ ನೀರು ವ್ಯವಸ್ಥೆ ಮಾಡಬೇಕು. ಶೌಚಾಲಯದಲ್ಲಿ ಶುಚಿತ್ವ ಕಾಪಾಡಲು ಆದ್ಯ ಗಮನ ಹರಿಸಬೇಕು. ಚಾವಣಿ ಭಾಗ, ಗೋಡೆ ಸಂದು, ಪುಸ್ತಕ ರ್ಯಾಕುಗಳಲ್ಲಿನ ದೂಳು, ಕಸವನ್ನು ನಿಯಮಿತವಾಗಿ ಗುಡಿಸುವ ವ್ಯವಸ್ಥೆ ಮಾಡಬೇಕು. ಸ್ವಚ್ಛತೆಗೆ ಒತ್ತು ನೀಡಬೇಕು. ‘ಇ–ಬುಕ್‌’, ‘ಆನ್‌ಲೈನ್‌ ಜರ್ನಲ್‌’ಗಳು ಸಿಗುವಂತೆ ‘ಡಿಜಿಟಲ್‌’ ವ್ಯವಸ್ಥೆ ಕಲ್ಪಿಸಬೇಕು. ನವ ತಂತ್ರಜ್ಞಾನ ಯುಗಕ್ಕೆ ತಕ್ಕಂತೆ ಮಾರ್ಪಾಡು ಮಾಡಿ ಸೌಕರ್ಯ ಕಲ್ಪಿಸಬೇಕು ಎಂಬುದು ಹಲವು ಓದುಗರ ಕೋರಿಕೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.