ನರಸಿಂಹರಾಜಪುರ: ಸರ್ಕಾರದ ಆದೇಶದಂತೆ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಸರ್ಕಾರಿ ಜಾಗ, ಅರೆ ಸರ್ಕಾರಿ, ಸ್ಥಳೀಯ ಸಂಸ್ಥೆಗಳ ಒಡೆತನದಲ್ಲಿರುವ ಸ್ವತ್ತುಗಳನ್ನು ಹೊರತುಪಡಿಸಿ ಇನ್ನುಳಿದ ಕಟ್ಟಡ, ನಿವೇಶನಗಳಿಗೆ ಸಂಬಂಧಿಸಿದಂತೆ ಅಧಿಕೃತ ಆಸ್ತಿಗಳನ್ನು ‘ರಿಜಿಸ್ಟರ್ ಎ’ ದಲ್ಲಿ ಹಾಗೂ ಅನಧಿಕೃತ ಆಸ್ತಿಗಳನ್ನು ‘ರಿಜಿಸ್ಟರ್ ಬಿ’ ನಲ್ಲಿ ನಿರ್ವಹಿಸಬೇಕಾಗಿದ್ದು, ಆಸ್ತಿಗಳ ಮಾಲೀಕರಿಗೆ ಇ–ಖಾತಾ ದಾಖಲೆ ಪಡೆಯಲು ಅವಕಾಶವಿರುತ್ತದೆ.
ನರಸಿಂಹರಾಜಪುರ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಅನಧಿಕೃತ ಆಸ್ತಿಗಳಿಗೆ ಬಿ ಖಾತಾ ಪಡೆಯಲು ಅವಕಾಶವಿದ್ದು ಆಸ್ತಿಗೆ ಸಂಬಂಧಿಸಿದಂತೆ ಸ್ವತ್ತಿನ ಮಾಲೀಕತ್ವ ಸಾಬೀತು ಪಡಿಸಲು ಮೇ 10 ಕೊನೆಯ ದಿನ. ಈ ಅವಧಿಯೊಳಗೆ ನೊಂದಾಯಿತ ಮಾರಾಟ ಪತ್ರಗಳು/ದಾನಪತ್ರಗಳು/ವಿಭಾಗಪತ್ರ/ ಹಕ್ಕು ಖುಲಾಸೆ ಪತ್ರ, ಪ್ರಸಕ್ತ ಸಾಲಿನವರೆಗೆ ಋಣಭಾರ ಪ್ರಮಾಣ ಪತ್ರ(ಇ.ಸಿ) ಚಾಲ್ತಿ ಸಾಲಿನವರೆಗಿನ ಆಸ್ತಿ ತೆರಿಗೆ ಪಾವತಿ ರಶೀದಿ, ಮಾಲೀಕರ ಪೊಟೊ ಮತ್ತು ಸ್ವತ್ತಿನ ಪೋಟೊ, ಮಾಲೀಕರ ಗುರುತಿನ ದಾಖಲೆಯ ಪ್ರತಿ ಇತ್ಯಾದಿ ಅಗತ್ಯ ದಾಖಲೆಗಳನ್ನು ಸಲ್ಲಿಸಿ ಬಿ– ಖಾತಾ ದಾಖಲೆ ಪಡೆಯಬಹುದಾಗಿದೆ.
ಈ ಅವಕಾಶ ಮೇ 10ರವರೆಗೆ ಮಾತ್ರ ಇದ್ದು ಅವಧಿ ಮೀರಿ ಬರುವ ಅರ್ಜಿಗಳಿಗೆ ಅವಕಾಶವಿರುವುದಿಲ್ಲ. ಪಟ್ಟಣ ವ್ಯಾಪ್ತಿಯಲ್ಲಿರುವ ಅರ್ಹ ಆಸ್ತಿ ಮಾಲೀಕರು ಇದರ ಸದುಪಯೋಗ ಪಡೆದುಕೊಳ್ಳಬೇಕು. ಹೆಚ್ಚಿನ ಮಾಹಿತಿಗಾಗಿ ಕಚೇರಿ ವೇಳೆಯಲ್ಲಿ ಕಂದಾಯ ಶಾಖೆಯನ್ನು ಸಂಪರ್ಕಿಸಬಹುದು ಎಂದು ಪಟ್ಟಣ ಪಂಚಾಯಿತಿ ಅಧ್ಯಕ್ಷ ಜುಬೇದಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.