ADVERTISEMENT

ಕೆ.ಎನ್. ರಾಜಣ್ಣರನ್ನು ಪುನಃ ಸಚಿವ ಸಂಪುಟಕ್ಕೆ ಸೇರಿಸಿ: ವಾಲ್ಮೀಕಿ ಸಮಾಜ ಒತ್ತಾಯ

​ಪ್ರಜಾವಾಣಿ ವಾರ್ತೆ
Published 14 ಆಗಸ್ಟ್ 2025, 5:57 IST
Last Updated 14 ಆಗಸ್ಟ್ 2025, 5:57 IST
ತರೀಕೆರೆ ಪಟ್ಟಣದ ಪ್ರವಾಸಿ ಮಂದಿರದಲ್ಲಿ ರಾಜ್ಯ ಸಚಿವ ಸಂಪುಟದಿಂದ ಕೈಬಿಡಲಾಗಿರುವ ಕೆ.ಎನ್. ರಾಜಣ್ಣ ಅವರನ್ನು ಪುನಃ ಸಚಿವ ಸಂಪುಟಕ್ಕೆ ಸೇರಿಸಿಕೊಳ್ಳಬೇಕೆಂದು ತರೀಕೆರೆ ತಾಲ್ಲೂಕು ವಾಲ್ಮೀಕಿ ನಾಯಕ ಸಮಾಜದ ಮುಖಂಡರು ಒತ್ತಾಯಿಸಿದರು
ತರೀಕೆರೆ ಪಟ್ಟಣದ ಪ್ರವಾಸಿ ಮಂದಿರದಲ್ಲಿ ರಾಜ್ಯ ಸಚಿವ ಸಂಪುಟದಿಂದ ಕೈಬಿಡಲಾಗಿರುವ ಕೆ.ಎನ್. ರಾಜಣ್ಣ ಅವರನ್ನು ಪುನಃ ಸಚಿವ ಸಂಪುಟಕ್ಕೆ ಸೇರಿಸಿಕೊಳ್ಳಬೇಕೆಂದು ತರೀಕೆರೆ ತಾಲ್ಲೂಕು ವಾಲ್ಮೀಕಿ ನಾಯಕ ಸಮಾಜದ ಮುಖಂಡರು ಒತ್ತಾಯಿಸಿದರು   

ತರೀಕೆರೆ: ‘ರಾಜ್ಯ ಸಚಿವ ಸಂಪುಟದಿಂದ ಕೈಬಿಡಲಾಗಿರುವ ನಿಷ್ಠಾವಂತ ಜನನಾಯಕ ಕೆ.ಎನ್. ರಾಜಣ್ಣ ಅವರನ್ನು ಪುನಃ ಸಚಿವ ಸಂಪುಟಕ್ಕೆ ಸೇರಿಸಿಕೊಳ್ಳಬೇಕು’ ಎಂದು ತರೀಕೆರೆ ತಾಲ್ಲೂಕು ವಾಲ್ಮೀಕಿ ನಾಯಕರ ಸಮಾಜ ಒತ್ತಾಯಿಸಿದೆ.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಸಮಾಜದ ಮುಖಂಡರು ಮಾತನಾಡಿ, ‘ರಾಜಣ್ಣ ಅವರು ಮಧುಗಿರಿ ವಿಧಾನಸಭಾ ಸಾಮಾನ್ಯ ಕ್ಷೇತ್ರದಲ್ಲಿ 35,500 ಮತಗಳ ಅಂತರದಿಂದ ಜಯಗಳಿಸಿದ್ದು, ತುಮಕೂರು ಜಿಲ್ಲೆಯಾದ್ಯಂತ ಎಲ್ಲಾ ಜಾತಿ ಧರ್ಮದವರಿಗೂ ಜನಸೇವೆ ಮಾಡಿಕೊಂಡು ಬಂದು ಆ ಜಿಲ್ಲೆಯ ಅಹಿಂದ ನಾಯಕ ಎಂದೆ ಪ್ರಖ್ಯಾತಿ ಪಡೆದವರು. ಜೊತೆಗೆ ಹಾಸನ ಜಿಲ್ಲಾ ಉಸ್ತುವಾರಿ ಸಚಿವರಾಗಿ ಉತ್ತಮ ಆಡಳಿತ ನಿರ್ವಹಿಸಿದ್ದಾರೆ. ಅಲ್ಲದೆ ಸಚಿವ ಜಾರಕಿಹೊಳಿ ಮತ್ತು ಕೆ.ಎನ್. ರಾಜಣ್ಣರ ಸಂಘಟನೆ ಶಕ್ತಿಯಿಂದ ರಾಜ್ಯದಲ್ಲಿ 14 ಎಂಎಲ್‍ಎ ಹಾಗೂ ಇಬ್ಬರು ಎಂಪಿಗಳನ್ನು ಜಯಗಳಿಸಿ ಕಾಂಗ್ರೆಸ್‌  ಶಕ್ತಿ ತುಂಬಿದ್ದಾರೆ’ ಎಂದು ತಿಳಿಸಿದರು.

ಇಂತಹ ನಿಷ್ಠೆ ಪ್ರಾಮಾಣಿಕ, ನೇರನುಡಿ, ಜನ ಬೆಂಬಲ ಹೊಂದಿರುವ ರಾಜಣ್ಣ ಅವರನ್ನು ಹೈಕಮಾಂಡ್ ಶೀಘ್ರವೇ ಸಚಿವ ಸಂಪುಟಕ್ಕೆ ಸೇರ್ಪಡೆ ಮಾಡಿಕೊಳ್ಳಬೇಕು. ಇಲ್ಲದಿದ್ದರೆ ರಾಜ್ಯದಾದ್ಯಂತ ಹೋರಾಟ ಮಾಡುವ ಎಚ್ಚರಿಕೆಯನ್ನು ನೀಡಿದರು.

ADVERTISEMENT

ತಾಲ್ಲೂಕು ಅಧ್ಯಕ್ಷ ಗೋವಿಂದಪ್ಪ ಎಚ್.ಆರ್., ಕಾರ್ಯದರ್ಶಿ‍ ಸಂತೋಷ್, ಮುಖಂಡರಾದ ನಾಗರಾಜ್, ಕಾಂತರಾಜಪ್ಪ, ಎಲ್.ಪಿ. ಚಂದ್ರಶೇಖರ್, ಕೃಷ್ಣಮೂರ್ತಿ‍ ಟಿ. ಗುರುಮೂರ್ತಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.