ಮೂಡಿಗೆರೆ: ದಂಪತಿಗಳು ಸತ್ಯದ ಹಾದಿಯಲ್ಲಿ ಸಾಗುವ ಮೂಲಕ ಸಂಬಂಧವನ್ನು ಗಟ್ಟಿ ಮಾಡಿಕೊಳ್ಳಬೇಕು ಎಂದು ಗೌರಿಗದ್ದೆ ಅವಧೂತ ವಿನಯ ಗುರೂಜಿ ಹೇಳಿದರು.
ಪಟ್ಟಣದ ಅಡ್ಯಂತಾಯ ರಂಗಮಂದಿರದಲ್ಲಿ ಭಾನುವಾರ ಆಶ್ರಯ ಸಾಮಾಜಿಕ ಸೇವಾ ಸಂಸ್ಥೆ ಹಾಗೂ ಡಾ.ಬಿ.ಆರ್. ಅಂಬೇಡ್ಕರ್ ಜನ್ಮ ದಿನಾಚರಣೆ ಸಮಿತಿ ವತಿಯಿಂದ ಏರ್ಪಡಿಸಿದ್ದ ಸಾಮೂಹಿಕ ವಿವಾಹಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
‘ಕೋಟ್ಯಂತರ ಹಣ ಖರ್ಚು ಮಾಡಿ, ಅದ್ದೂರಿಯಿಂದ ನಡೆದ ಎಷ್ಟೋ ವಿವಾಹಗಳು ಒಂದೇ ವಾರಕ್ಕೆ ವಿಚ್ಛೇಧನಕ್ಕಾಗಿ ಕೋರ್ಟ್ ಮೆಟ್ಟಿಲೇರಿರುವುದನ್ನು ನಾವಿಂದು ಕಾಣುತ್ತಿದ್ದೇವೆ. ಅದು ಉತ್ತಮ ಬೆಳವಣಿಗೆ ಅಲ್ಲ ಎಂದು ಅವರು, ಸುಳ್ಳು ವ್ಯಭಿಚಾರ ಇದ್ದ ಹಾಗೆ. ಸುಳ್ಳಿನಿಂದ ಮಾನಸಿಕ ಮೋಸ ಹೋಗುವುದರಿಂದ ಇಂದು ಸಂಬಂಧಗಳಲ್ಲಿ ಒಡಕುಂಟಾಗುತ್ತಿವೆ. ಆದ್ದರಿಂದ ಸತ್ಯವನ್ನೇ ನುಡಿದು ಸತ್ಯದ ದಾರಿಯಲ್ಲಿಯೇ ನಡೆದರೆ ನೆಮ್ಮದಿ ಜೀವನ ಕಂಡುಕೊಳ್ಳಬಹುದು’ ಎಂದು ಹೇಳಿದರು.
ಶಾಸಕಿ ನಯನಾ ಮೋಟಮ್ಮ ಮಾತನಾಡಿ, ‘ಬಡವರು ಸಾಲ ಮಾಡಿ, ಜೀವನ ಪೂರ್ತಿ ದುಡಿಯಲು ತಮ್ಮ ಬದುಕನ್ನೇ ಮುಡಿಪಾಗಿ ಇಡುವುದನ್ನು ತಪ್ಪಿಸುವ ಸಲುವಾಗಿ ರಾಜಕೀಯ ದುರುದ್ದೇಶವಿಲ್ಲದೇ 27ವರ್ಷದಿಂದ ತನ್ನ ತಾಯಿ ಈ ಕಾರ್ಯಕ್ರಮ ನಡೆಸಿಕೊಂಡು ಬಂದಿದ್ದಾರೆʼ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಂಗ್ರೆಸ್ ನಾಯಕಿ ಮೋಟಮ್ಮ, ‘ಡಾ.ಬಿ.ಆರ್. ಅಂಬೇಡ್ಕರ್ ಅವರ ಆದರ್ಶ ಜೀವನ ತಿಳಿದುಕೊಂಡು ಅವರು ಹಾಕಿಕೊಟ್ಟ ದಾರಿಯಲ್ಲೇ ನಡೆಯಬೇಕು. ದುಶ್ಚಟಕ್ಕೆ ಬಲಿಯಾಗದೆ ಉತ್ತಮ ಜೀವನ ನಡೆಸುವ ಮೂಲಕ ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ, ಉನ್ನತ ಹುದ್ದೆ ಅಲಂಕರಿಸುವಂತೆ ಮಾಡಬೇಕು’ ಎಂದು ನವ ದಂಪತಿಗಳಿಗೆ ಕಿವಿಮಾತು ಹೇಳಿ ಪ್ರತಿಜ್ಞಾವಿಧಿ ಬೋಧಿಸಿದರು.
ಸಾಮೂಹಿಕ ವಿವಾಹದಲ್ಲಿ 9 ಜೋಡಿ ವಧು–ವರರು ಸತಿಪತಿಗಳಾದರು. ದಲಿತ ಪುರೋಹಿತರಾದ ಎಚ್.ಟಿ. ಸುಬ್ರಹ್ಮಣ್ಯ, ಕೆ.ಎಲ್. ಸಾಗರ್, ಕೋಮರಾಜ್ ಚಕ್ರಮಣಿ, ರಮೇಶ್ ದಾರಹಹಳ್ಳಿ, ತಿಮ್ಮಯ್ಯ ಹಾಲೂರು, ದೇವರಾಜ್ ಸಬ್ಲಿ ಕನ್ನಡ ಮಂತ್ರವನ್ನು ಪಠಿಸಿದರು. ಮದುವೆಯಲ್ಲಿ ಬಿಳಿಯಪ್ಪ ಹಾಗೂ ಜಯಶೀಲಾ ದಂಪತಿ ವಧು–ವರರ ಪರವಾಗಿ ಧಾರೆ ಎರೆಯುವ ಕಾರ್ಯ ನೆರವೇರಿಸಿದರು.
ಮಲೆನಾಡಿನ ಪ್ರಸಿದ್ಧ ಕಲೆಗಳಾದ ಸುಗ್ಗಿ ಕುಣಿತ, ಕೋಲಾಟ, ಜಾನಪದ ನೃತ್ಯ, ಜಾನಪದ ಗೀತೆ, ಸೋಬಾನೆ ಹಾಡು, ಭತ್ತ ಕುಟ್ಟುವ ಹಾಡು, ನಟ್ಟಿ ಹಾಡು ಸೇರಿದಂತೆ ಇತರೇ ಜಾನಪದ ಸೊಗಡಿನ ಸಾಂಸ್ಕೃತಿಕ ಕಾರ್ಯಕ್ರಮ ನಡೆದವು.
ಮಾಜಿ ಸಚಿವ ಬಿ.ಬಿ. ನಿಂಗಯ್ಯ, ಪ.ಪಂ. ಉಪಾಧ್ಯಕ್ಷ ರಮೇಶ್ ಹೊಸ್ಕೆರೆ, ಸದಸ್ಯ ಹಂಝಾ, ಬೆಂಗಳೂರಿನ ಡಾ. ಪಾರ್ವತಿ ಧನಂಜಯ್, ರೇಣುಕಾ, ಲಕ್ಷ್ಮಯ್ಯ, ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ಎಚ್.ಜಿ. ಸುರೇಂದ್ರ, ಮುಖಂಡರಾದ ಬಿ.ಎಸ್. ಜಯರಾಂ, ಸುಬ್ರಾಯಗೌಡ, ಬಿ.ಎಂ. ಶಂಕರ್, ಶ್ರೀನಾಥ್, ವೆಂಕಟಮ್ಮ ಹಾಲಯ್ಯ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.