ADVERTISEMENT

ಮೂಡಿಗೆರೆ: ಅಡ್ಡಾದಿಡ್ಡಿ ವಾಹನ ನಿಲುಗಡೆಗೆ ತಡೆ

ಸಂಚಾರದಟ್ಟಣೆ ನಿವಾರಣೆಗೆ ಪೊಲೀಸರಿಂದ ಕ್ರಮ: ಏಕಮುಖ ಸಂಚಾರ ಕಡ್ಡಾಯ

​ಪ್ರಜಾವಾಣಿ ವಾರ್ತೆ
Published 23 ಜುಲೈ 2025, 4:16 IST
Last Updated 23 ಜುಲೈ 2025, 4:16 IST
ಮೂಡಿಗೆರೆ ಪಟ್ಟಣದ ಎಂ.ಜಿ.ರಸ್ತೆಯಲ್ಲಿ ವಾಹನ ದಟ್ಟಣೆ ನಿವಾರಣೆ ಸಂಬಂಧ ಪ.ಪಂ.ಅಧ್ಯಕ್ಷ ಕೆ.ವೆಂಕಟೇಶ್, ಪೊಲೀಸ್‌ ಅಧಿಕಾರಿಗಳು ಪರಿಶೀಲನೆ ನಡೆಸಿದರು
ಮೂಡಿಗೆರೆ ಪಟ್ಟಣದ ಎಂ.ಜಿ.ರಸ್ತೆಯಲ್ಲಿ ವಾಹನ ದಟ್ಟಣೆ ನಿವಾರಣೆ ಸಂಬಂಧ ಪ.ಪಂ.ಅಧ್ಯಕ್ಷ ಕೆ.ವೆಂಕಟೇಶ್, ಪೊಲೀಸ್‌ ಅಧಿಕಾರಿಗಳು ಪರಿಶೀಲನೆ ನಡೆಸಿದರು   

ಮೂಡಿಗೆರೆ: ಪಟ್ಟಣದಲ್ಲಿ ವಾಹನ ದಟ್ಟಣೆ ನಿವಾರಿಸಲು ಪಟ್ಟಣ ಪಂಚಾಯಿತಿ, ಪೊಲೀಸರು ಮುಂದಾಗಿದ್ದು, ಕ್ರಮ ಕೈಗೊಂಡಿದ್ದಾರೆ.

ಕೆಲವು ರಸ್ತೆಗಳಲ್ಲಿ ಏಕಮುಖ ಸಂಚಾರವನ್ನು ಬಿಗಿಗೊಳಿಸಿದ್ದಾರೆ. ಎಂ.ಜಿ.ರಸ್ತೆಯಲ್ಲಿ ಪೊಲೀಸ್ ಠಾಣೆ ಮುಂಭಾಗದಿಂದ, ಟಿಎಪಿಸಿಎಂಎಸ್ ಕಚೇರಿವರೆಗೆ ಒಂದು ಬದಿಯಲ್ಲಿ ದ್ವಿಚಕ್ರ ವಾಹನ, ಅಲ್ಲಿಂದ ಎಂ.ಜಿ.ರಸ್ತೆ ಕೊನೆಯವರೆಗೆ 4 ಚಕ್ರದ ವಾಹನ ನಿಲುಗಡೆಗೆ ‌ವ್ಯವಸ್ಥೆ ಮಾಡಲಾಗಿದೆ.

ಮೈಸೂರ್ ಬ್ಯಾಂಕ್ ರಸ್ತೆ, ಪೊಲೀಸ್ ಠಾಣೆ ಹಿಂಭಾಗದ ರಸ್ತೆ, ಬದ್ರಿಯಾ ಮಸೀದಿ ರಸ್ತೆಗಳಲ್ಲಿ ಕೆ.ಎಂ. ರಸ್ತೆಯಿಂದ ಎಂ.ಜಿ.ರಸ್ತೆಗೆ ಏಕಮುಖವಾಗಿ ಸಂಚರಿಸಬೇಕು. ಆಜಾದ್ ರಸ್ತೆ, ಮೋಯ್ದಿನ್ ಕುಟ್ಟಿ ರಸ್ತೆ ಹಾಗೂ ಕುರಿ ಮಾಂಸದ ಮಾರುಕಟ್ಟೆ ರಸ್ತೆಗಳಲ್ಲಿ ಎಂ.ಜಿ. ರಸ್ತೆಯಿಂದ ಕೆ.ಎಂ.ರಸ್ತೆಗೆ ಸಂಚರಿಸಲು ಅವಕಾಶ ಮಾಡಿಕೊಡಲಾಗಿದೆ. ಯಾವ ವಾಹನ ಎಲ್ಲಿ ನಿಲುಗಡೆ ಮಾಡಬೇಕು ಹಾಗೂ ಏಕಮುಖ ಸಂಚಾರ ರಸ್ತೆಯ ಆರಂಭಗೊಳ್ಳುವ ಎಲ್ಲ ಕಡೆ ಪೊಲೀಸರು ಬ್ಯಾರಿಕೇಡ್ ಅಡ್ಡ ಇರಿಸಿ ಸಾರ್ವಜನಿಕರಿಗೆ ಮಾಹಿತಿ ನೀಡುವ ಬ್ಯಾನರ್ ಅಳವಡಿಸಿದ್ದಾರೆ.

ADVERTISEMENT

ಪಟ್ಟಣದ ಚರ್ಚ್ ಮುಂಭಾಗ, ಪೊಲೀಸ್ ಠಾಣೆ ಮುಂಭಾಗ, ಪರಿಮಳಮ್ಮ ದೇವಸ್ಥಾನ ರಸ್ತೆ, ಬಾಲಕಿಯರ ಕಾಲೇಜು ರಸ್ತೆ, ಛತ್ರ ಮೈದಾನ ಬಡಾವಣೆ ರಸ್ತೆಗಳ ಬದಿಯಲ್ಲಿ ವಾಹನ ನಿಲುಗಡೆಗೆ ಅವಕಾಶ ಕಲ್ಪಿಸಲಾಗಿದೆ. ಪಟ್ಟಣ ಪಂಚಾಯಿತಿ ಆಡಳಿತದ ನಿರ್ಧಾರ ಹಾಗೂ ಪೊಲೀಸರ ಕಾರ್ಯಾಚರಣೆಗೆ ಸಾರ್ವಜನಿಕರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

‘ಪಾರ್ಕಿಂಗ್ ಸಮಸ್ಯೆ ಬಗ್ಗೆ ಸಾರ್ವಜನಿಕರಿಂದ ನಿರಂತರವಾಗಿ ದೂರು ಬಂದಿದ್ದರಿಂದ, ಈಚೆಗೆ ಪಟ್ಟಣ ಪಂಚಾಯಿತಿಯಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ತೀರ್ಮಾನವಾದಂತೆ ವಾಹನ ಸಂಚಾರ ಹಾಗೂ ಪಾರ್ಕಿಂಗ್ ವ್ಯವಸ್ಥೆಯಲ್ಲಿ ಕೆಲವು ಬದಲಾವಣೆ ತರಲಾಗಿದೆ. ಎಂ.ಜಿ. ರಸ್ತೆಯಲ್ಲಿ ಕಾರು ಪಾರ್ಕಿಂಗ್ ಬೇಡ ಎಂದು ಅಂದಿನ ಸಭೆಯಲ್ಲಿ ತೀರ್ಮಾನವಾಗಿದ್ದು, ಆದರೆ ಜನರಿಗೆ ತೊಂದರೆ ಆಗಬಾರದು ಎಂದು ಎಂ.ಜಿ ರಸ್ತೆಯ ಟಿಎಪಿಸಿಎಂಎಸ್ ಕಚೇರಿಯವರಿಗೆ ಬೈಕ್, ಉಳಿದಂತೆ ರಸ್ತೆ ಬದಿ ಕಾರು ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ’ ಎಂದು ಪೊಲೀಸ್‌ ಸಬ್‌ ಇನ್‌ಸ್ಪೆಕ್ಟರ್‌ ಶ್ರೀನಾಥ್‌ ರೆಡ್ಡಿ ಹೇಳಿದ್ದಾರೆ.

‘ಏಕಮುಖ ಸಂಚಾರ ಬಿಗಿಗೊಳಿಸಲಾಗಿದೆ. ಪಾರ್ಕಿಂಗ್ ವ್ಯವಸ್ಥೆ ಇರುವ ರಸ್ತೆಗಳಲ್ಲಿ ಇತರ ವಾಹನಗಳಿಗೆ ತೊಂದರೆ ಕೊಡದಂತೆ ರಸ್ತೆಯ ಬದಿಯಲ್ಲಿ ವಾಹನ ಪಾರ್ಕಿಂಗ್ ಮಾಡುವ ವ್ಯವಸ್ಥೆ ಕಲ್ಪಿಸಲಾಗಿದೆ. ಸಾರ್ವಜನಿಕರಿಗೆ ಅರಿವು ಮೂಡಿಸುವ ಬ್ಯಾನರ್ ಅಲ್ಲಲ್ಲಿ ಅಳವಡಿಸಲಾಗಿದೆ. ಸಂಚಾರ ದಟ್ಟಣೆ ನಿಯಂತ್ರಿಸಲು ಅಲ್ಲಲ್ಲಿ ಸಿಬ್ಬಂದಿ ನಿಯೋಜಿಸಲಾಗಿದೆ. ಸಾರ್ವಜನಿಕರು ವಾಹನ ದಟ್ಟಣೆ ಉಂಟಾಗದಂತೆ ಇಲಾಖೆಯೊಂದಿಗೆ ಸಹಕರಿಸಬೇಕು’ ಎಂದು ಅವರು ತಿಳಿಸಿದ್ದಾರೆ.

ಮೂಡಿಗೆರೆ ಪಟ್ಟಣದ ಎಂ.ಜಿ.ರಸ್ತೆಯಲ್ಲಿ ವಾಹನ ಪಾರ್ಕಿಂಗ್ ವ್ಯವಸ್ಥೆಯನ್ನು ಮಾರ್ಪಾಡುಗೊಳಿಸಿರುವ ಪೊಲೀಸರು ಬ್ಯಾರಿಕೇಡ್ ಇರಿಸಿ ಬ್ಯಾನರ್ ಅಳವಡಿಸಿದ್ದಾರೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.