ADVERTISEMENT

ಮೂಡಿಗೆರೆ: ‘ಬಿದಿರು ನೀನ್ಯಾರಿಗಲ್ಲದವಳು’ ಮೋಟಮ್ಮ ಆತ್ಮಕಥನ ಬಿಡುಗಡೆ ನಾಳೆ

​ಪ್ರಜಾವಾಣಿ ವಾರ್ತೆ
Published 3 ಜುಲೈ 2022, 1:59 IST
Last Updated 3 ಜುಲೈ 2022, 1:59 IST
ಮೋಟಮ್ಮ
ಮೋಟಮ್ಮ   

ಮೂಡಿಗೆರೆ: ಮೋಟಮ್ಮ ಅವರ ಅಭಿಮಾನಿ ಬಳಗದಿಂದ ಪಟ್ಟಣದ ರೈತ ಭವನದಲ್ಲಿ ಇದೇ 4 ರಂದು ಬೆಳಿಗ್ಗೆ 11 ಗಂಟೆಗೆ ‘ಬಿದಿರು ನೀನ್ಯಾರಿಗಲ್ಲ ದವಳು’ ಎಂಬ ಮೋಟಮ್ಮ ಅವರ ಆತ್ಮಕಥನ ಬಿಡುಗಡೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ಬೆಳೆಗಾರರ ಒಕ್ಕೂಟದ ಮಾಜಿ ಅಧ್ಯಕ್ಷ ಬಿ.ಎಸ್. ಜಯರಾಂ ಹೇಳಿದರು.

ಶನಿವಾರ ಪಟ್ಟಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ‘ತಾಲ್ಲೂಕಿನಲ್ಲಿರುವ ಜನಪ್ರತಿನಿಧಿಗಳ ಸಾಧನೆ ಬಗ್ಗೆ ಜನರು ತಿಳಿದುಕೊಂಡು ಪ್ರೋತ್ಸಾಹಿಸಬೇಕಾಗಿದೆ. ಮೋಟಮ್ಮ ತಮ್ಮ ಆಡಳಿತದ ಅವಧಿಯಲ್ಲಿ ಮಾಡಿದ ಅಭಿವೃದ್ಧಿ ಹಾಗೂ ಜನಪರ ಕಾರ್ಯಗಳ ಬಗ್ಗೆ ಜನರು ತಿಳಿದುಕೊಳ್ಳಬೇಕಿದೆ. ಈ ನಿಟ್ಟಿನಲ್ಲಿ ಮೋಟಮ್ಮ ಅವರ ‘ಬಿದಿರು ನೀನ್ಯಾರಿಗಲ್ಲದವಳು’ ಎಂಬ ಆತ್ಮಕಥನವನ್ನು ಬೆಂಗಳೂರಿನಲ್ಲಿ ಸಾಂಕೇತಿಕ ವಾಗಿ ಬಿಡುಗಡೆ ಮಾಡಿದ್ದು, ಮೋಟಮ್ಮ ಅವರ ಅಭಿಮಾನಿಗಳು ಹಾಗೂ ತಾಲ್ಲೂಕಿನ ಜನತೆಯ ಒತ್ತಾಯದಂತೆ ಮೂಡಿಗೆರೆಯಲ್ಲಿಯೂ ಕೂಡ ಕಾರ್ಯಕ್ರಮ ನಡೆಸಲಾಗುತ್ತಿದೆ’ ಎಂದರು.

‘ಮುಂದಿನ ದಿನದಲ್ಲಿ ಪಕ್ಷಾತೀತವಾಗಿ ತಾಲ್ಲೂಕಿನಲ್ಲಿರುವ ಎಲ್ಲಾ ಪಕ್ಷದ ಹಿರಿಯ ನಾಯಕರ ಸಾಧನೆ ಬಗ್ಗೆ ಪುಸ್ತಕ ಬಿಡುಗಡೆ ಮಾಡುವ ಕಾರ್ಯಕ್ರಮ ನಡೆಸಲಾಗುವುದು’ ಎಂದರು.

ADVERTISEMENT

ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ಎಚ್.ಜಿ. ಸುರೇಂದ್ರ ಮಾತನಾಡಿ, ‘ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೆಜಿಎಫ್ ಮಾಜಿ ಅಧ್ಯಕ್ಷ ಬಿ.ಎಸ್. ಜಯರಾಂ ವಹಿಸಲಿದ್ದು, ಮಾಜಿ ಸಚಿವ ಡಿ.ಬಿ. ಚಂದ್ರೇಗೌಡ ಉದ್ಘಾಟಿಸಲಿದ್ದಾರೆ. ಹೊಸದುರ್ಗದ ಡಾ.ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ವಿಧಾನ ಪರಿಷತ್ ಸದಸ್ಯರಾದ ಬಿ.ಕೆ.ಹರಿಪ್ರಸಾದ್, ಎಂ.ಕೆ.ಪ್ರಾಣೇಶ್, ಎಸ್.ಎಲ್. ಭೋಜೇಗೌಡ, ಐವನ್ ಡಿಸೋಜ, ಶಾಸಕ ಎಂ.ಪಿ. ಕುಮಾರಸ್ವಾಮಿ, ಮಾಜಿ ಸಚಿವರಾದ ಡಿ.ಕೆ. ತಾರಾದೇವಿ, ರಮಾನಾಥ ರೈ, ಬಿ.ಬಿ. ನಿಂಗಯ್ಯ, ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ರಂಜನ್ ಅಜಿತ್ ಕುಮಾರ್, ಸಾಹಿತಿ ಹಿ.ಶಿ. ಚಂದ್ರೇಗೌಡ, ಪತ್ರಕರ್ತರಾದ ಬಿ.ಎಂ.ಹನೀಫ್, ಗಿರಿಜಾಶಂಕರ್ ಸೇರಿದಂತೆ ಎಲ್ಲಾ ಪಕ್ಷದ ಜನಪ್ರತಿನಿಧಿಗಳು ಹಾಗೂ ಮುಖಂಡರು ಭಾಗವಹಿಸಲಿದ್ದಾರೆ’ ಎಂದರು.

ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್ ವಕ್ತಾರ ಎಂ.ಎಸ್. ಅನಂತ್, ಪದಾಧಿಕಾರಿಗಳಾದ ಕೆ.ಪಿ. ಶಿವಕುಮಾರ್, ನಿಶಾಂತ್‍ ಪಟೇಲ್, ಎಂ.ಬಿ. ಸಂಪತ್‍ಕುಮಾರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.