ADVERTISEMENT

ಬೀರೂರು: ಪುರಸಭೆ ಮಳಿಗೆಗಳ ಹರಾಜು

ಪ್ರತಿ ತಿಂಗಳು ಪುರಸಭೆಗೆ ₹1.40 ಲಕ್ಷ ಆದಾಯ

​ಪ್ರಜಾವಾಣಿ ವಾರ್ತೆ
Published 30 ಜೂನ್ 2025, 13:09 IST
Last Updated 30 ಜೂನ್ 2025, 13:09 IST
ಬೀರೂರು ಪುರಸಭೆಯಲ್ಲಿ ಸೋಮವಾರ ಮಳಿಗೆಗಳ ಬಹಿರಂಗ ಹರಾಜು ಪ್ರಕ್ರಿಯೆಯಲ್ಲಿ ಬಿಡ್‍ದಾರರ ನಡುವೆ ಮಾತಿನ ಚಕಮಕಿ ನಡೆಯಿತು
ಬೀರೂರು ಪುರಸಭೆಯಲ್ಲಿ ಸೋಮವಾರ ಮಳಿಗೆಗಳ ಬಹಿರಂಗ ಹರಾಜು ಪ್ರಕ್ರಿಯೆಯಲ್ಲಿ ಬಿಡ್‍ದಾರರ ನಡುವೆ ಮಾತಿನ ಚಕಮಕಿ ನಡೆಯಿತು   

ಬೀರೂರು: ಪುರಸಭೆಯು ವಿವಿಧ ಯೋಜನೆಗಳಡಿ ಕಚೇರಿ ಮುಂಭಾಗದಲ್ಲಿ ನಿರ್ಮಿಸಿರುವ ವಾಣಿಜ್ಯ ಮಳಿಗೆಗಳನ್ನು ಬಾಡಿಗೆ ಆಧಾರದಲ್ಲಿ 12 ವರ್ಷಗಳ ಅವಧಿಗೆ ನೀಡಲು ಬಹಿರಂಗ ಹರಾಜು ಸೋಮವಾರ ನಡೆಯಿತು. ಈ ಪ್ರಕ್ರಿಯೆಯಿಂದ ಪುರಸಭೆಗೆ ಮಾಸಿಕ ₹1.40 ಲಕ್ಷಕ್ಕೂ ಹೆಚ್ಚು ಆದಾಯ ಬರುವಂತಾಗಿದೆ.

ಕಳೆದ ಹಲವಾರು ವರ್ಷಗಳಿಂದಲೂ ನಿಗದಿತ ಬಾಡಿಗೆದಾರರು ಕಡಿಮೆ ಮೊತ್ತಕ್ಕೆ ಬಾಡಿಗೆ ಪಾವತಿಸಿ ಪಟ್ಟಭದ್ರರಾಗಿದ್ದಾರೆ ಎನ್ನುವ ದೂರುಗಳ ಹಿನ್ನಲೆಯೆಲ್ಲಿ ಪುರಸಭೆಯು ಬಹಿರಂಗ ಹರಾಜು ನಡೆಸಲು ಮುಂದಾಗಿತ್ತು. ಸೋಮವಾರ ಕಚೇರಿ ಸಮಯ ಆರಂಭವಾದ ಕೂಡಲೇ ಹುರುಪಿನಲ್ಲಿದ್ದ ಹೊಸ ಬಿಡ್‍ದಾರರು ಇಎಂಡಿಯನ್ನು ಪುರಸಭೆಯಲ್ಲಿ ಪಾವತಿಸಿದರು. ಪುರಸಭೆ ಮುಂಭಾಗದ 10 ಮಳಿಗೆಗಳನ್ನು ಹರಾಜು ಪ್ರಕ್ರಿಯೆಗೆ ಒಳಪಡಿಸಲಾಗಿತ್ತು. ಮಳಿಗೆ 1 ಮತ್ತು 2 ಪರಿಶಿಷ್ಟ ಜಾತಿಗೆ ಮೀಸಲಾಗಿತ್ತು. ಈ ಮಳಿಗೆಗಳಿಗೆ ಹಲವರು ಬಿಡ್ ಮಾಡಲು ಮುಂದಾದಾಗ, ಬಿಡ್‍ದಾರ ಗಣೇಶ್ ಆಕ್ಷೇಪ ವ್ಯಕ್ತಪಡಿಸಿ, ಈ ಮಳಿಗೆಗಳು ಪರಿಶಿಷ್ಟ ಜಾತಿಗೆ ಮೀಸಲಾಗಿದ್ದು, ಇತರೆ ವರ್ಗದವರು ಬಿಡ್‍ನಲ್ಲಿ ಪಾಲ್ಗೊಂಡಿದ್ದಾರೆ. ಅವರ ಜಾತಿ ದೃಢೀಕರಣ ಪತ್ರವನ್ನು ಪರಿಶೀಲಿಸಿ ಅವರಿಗೆ ಬಿಡ್ ಮಾಡಲು ಅವಕಾಶ ಕೊಡಬೇಕು. ಇಲ್ಲದಿದ್ದರೆ ಅವರನ್ನು ಪ್ರಕ್ರಿಯೆಯಿಂದ ಹೊರಗಿಡಬೇಕು ಎಂದರು.

ಇದೇ ರೀತಿ ಅಂಗವಿಕಲರಿಗೆ ಮೀಸಲಾಗಿದ್ದ ಮಳಿಗೆಗಳನ್ನು ಅಂಗವಿಕಲರೇ ಬಿಡ್ ಮಾಡಬೇಕು ಎನ್ನುವ ಆಕ್ಷೇಪಕ್ಕೆ ಬಿಡ್ ಮಾಡಲು ಅಂಗವಿಕಲರಿಗೆ ಮಹಡಿ ಮೇಲೆ ಬರಲು ಸಾಧ್ಯವಿಲ್ಲದ ಕಾರಣ ಅವರ ಕುಟುಂಬ ವರ್ಗದವರು ಕೂಗಲು ಬಂದಿದ್ದು, ಅವರಿಗೆ ಅವಕಾಶ ಕೊಡಬೇಕು ಎಂದು ಬಿಡ್‍ದಾರ ಪುನೀತ್ ಧ್ವನಿ ಎತ್ತಿದರು. ಇದಕ್ಕೆ ಸಹಮತ ವ್ಯಕ್ತವಾಗಿ ಅವರ ಪರವಾಗಿ ಬಿಡ್ ಮಾಡಲು ಬಂದವರಿಗೆ ಅವಕಾಶ ಕಲ್ಪಿಸಲಾಯಿತು.

ADVERTISEMENT

ಆನಂತರ ಬಿಡ್ ಪ್ರಕ್ರಿಯೆ ಆರಂಭಗೊಂಡು ಮಳಿಗೆಗಳು ನಿರೀಕ್ಷೆಗೂ ಮೀರಿದ ಮೊತ್ತಕ್ಕೆ ಹರಾಜುಗೊಂಡವು. ಈ ಮೊದಲು ಎಲ್ಲಾ ಮಳಿಗೆಗಳು ಮಾಸಿಕ ಕೇವಲ ₹ 3 ಸಾವಿರದಿಂದ ₹ 4 ಸಾವಿರಗಳ ಮೊತ್ತದ ಬಾಡಿಗೆ ಪಾವತಿಸುತ್ತಿದ್ದವು. ಈ ಬಾರಿ ಎಲ್ಲಾ ಮಳಿಗೆಗಳು ಕನಿಷ್ಠ ₹ 6 ಸಾವಿರದಿಂದ ರಿಂದ ₹19 ಸಾವಿರಗಳ ವರೆಗಿನ ಮೊತ್ತಕ್ಕೆ ಹರಾಜುಗೊಂಡವು. ಸಾಮಾನ್ಯ ವರ್ಗಕ್ಕೆ 6 ಮಳಿಗೆಗಳು, ಅಂಗವಿಕಲರಿಗೆ 2 ಮತ್ತು ಪರಿಶಿಷ್ಟ ಪಂಗಡಕ್ಕೆ 1 ಮಳಿಗೆ  ಮೀಸಲಾಗಿತ್ತು.

1 ರಿಂದ 10 ಮಳಿಗೆಗಳ ಹರಾಜು ಪ್ರಕ್ರಿಯೆಯಲ್ಲಿ 4 ಮಳಿಗೆಯವರು ಹಾಲಿ ವ್ಯವಹಾರ ನಡೆಸುತ್ತಿದ್ದು, ಬಿಡ್ ಮಾಡಲಾದ ಮೊತ್ತಕ್ಕೆ ಶೇ 5ರಷ್ಟು ಹೆಚ್ಚು ಪಾವತಿಸಿ ತಾವೇ ಅದೇ ಮಳಿಗೆಯಲ್ಲಿ ಬಾಡಿಗೆದಾರರಾಗಿ ಮುಂದುವರಿಯಲು ಬಯಸಿದರು. ಉಳಿದ 6 ಮಳಿಗೆಗಳನ್ನು ಹೊಸ ಬಾಡಿಗೆದಾರರು ಬಿಡ್‍ನಲ್ಲಿ ಪಡೆದುಕೊಂಡರು. ಒಟ್ಟಾರೆ ಪುರಸಭೆ ನಡೆಸಿದ 10 ಮಳಿಗೆಗಳ ಬಹಿರಂಗ ಹರಾಜಿನಿಂದ ಆದಾಯ ಹೆಚ್ಚಿದ್ದು ಪುರಸಭೆಗೆ ವರದಾನವಾಗಿದೆ ಎನ್ನುವ ಅಭಿಪ್ರಾಯ ವ್ಯಕ್ತವಾಯಿತು.

ಈ ಸಂದರ್ಭದಲ್ಲಿ ಪುರಸಭೆ ಪ್ರಭಾರ ಅಧ್ಯಕ್ಷ ಎನ್‌.ಎಂ.ನಾಗರಾಜ್‌, ಸ್ಥಾಯಿ ಸಮಿತಿ ಅಧ್ಯಕ್ಷ ಜಿ.ಲಕ್ಷ್ಮಣ್‌, ಮುಖ್ಯಾಧಿಕಾರಿ ಜಿ.ಪ್ರಕಾಶ್‌, ಸದಸ್ಯರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.