ಕಡೂರು: ‘ವಿಜ್ಞಾನ ಮತ್ತು ನಾಗರಿಕತೆ ಹೆಚ್ಚಿದಂತೆ ಸಮಾಜದಲ್ಲಿ ಅಶಾಂತಿ, ಗೊಂದಲ ಹೆಚ್ಚುತ್ತಿದ್ದು, ಧರ್ಮ ಮತ್ತು ಸಂಸ್ಕೃತಿಯ ಪಾಲನೆಯ ಮಾರ್ಗದಿಂದ ಮಾತ್ರ ಶಾಂತಿ ಮೂಡುತ್ತದೆ’ ಎಂದು ರಂಭಾಪುರಿ ಪೀಠದ ವೀರಸೋಮೇಶ್ವರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ತಾಲ್ಲೂಕಿನ ಹುಲಿಕೆರೆಯಲ್ಲಿ ಶನಿವಾರ ಹುಲಿಕೆರೆ ದೊಡ್ಡಮಠದ ಬಸವರಾಜ ದೇಶಿಕೇಂದ್ರ ಸ್ವಾಮೀಜಿ ಪುಣ್ಯಾರಾಧನೆ, ವಿರೂಪಾಕ್ಷಲಿಂಗ ಶಿವಾಚಾರ್ಯ ಸ್ವಾಮೀಜಿಯ 80ನೇ ವರ್ಷದ ವರ್ಧಂತಿ, ಮಲ್ಲಿಕಾರ್ಜುನ ಪಂಡಿತಾರಾಧ್ಯ ಶಿವಾಚಾರ್ಯರ ಎರಡನೇ ವರ್ಷದ ಪಟ್ಟಾಧಿಕಾರ ಮಹೋತ್ಸವದ ಧಾರ್ಮಿಕ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.
ಧಾರ್ಮಿಕ ಮತ್ತು ಸಾಮಾಜಿಕ ಮೌಲ್ಯಗಳ ಪಾಲನೆಯಿಂದ ಮನುಷ್ಯನ ಬದುಕು ಉಜ್ವಲಗೊಳ್ಳುತ್ತದೆ. ಮನುಷ್ಯನಲ್ಲಿ ಆತ್ಮಬಲ ಬೆಳೆಯಲು ಅಧ್ಯಾತ್ಮದ ಹಸಿವು, ಸನ್ಮಾರ್ಗದಲ್ಲಿ ನಡೆಯುವ ಛಲ ಬೇಕು. ಮನುಷ್ಯ ಜಾಗೃತಗೊಂಡು ಆದರ್ಶ ಸಂಸ್ಕೃತಿ ಉಳಿವಿಗಾಗಿ ಶ್ರಮಿಸಬೇಕಾಗಿದೆ. ಸತ್ಯ ಶುದ್ಧ ಕಾಯಕದಿಂದ ಜೀವನ ಸಾರ್ಥಕಗೊಳ್ಳುತ್ತದೆ ಎಂದರು.
ಬಸವರಾಜ ದೇಶಿಕೇಂದ್ರ ಶಿವಾಚಾರ್ಯ ಸ್ವಾಮೀಜಿಯ ಸಂಸ್ಕಾರದ ಗರಡಿಯಲ್ಲಿ ಬೆಳೆದು, ಸರಳತೆ ಮತ್ತು ಸಾತ್ವಿಕತೆಗೆ ಹೆಸರಾದ ದೊಡ್ಡಮಠದ ವಿರೂಪಾಕ್ಷಲಿಂಗ ಶಿವಾಚಾರ್ಯರು ವೀರಶೈವ ಧರ್ಮ, ಸಂಸ್ಕೃತಿ ಬೆಳೆಸಲು ಶ್ರಮಿಸಿದ್ದಾರೆ. ಧಾರ್ಮಿಕ ಮತ್ತು ಶೈಕ್ಷಣಿಕ ರಂಗದಲ್ಲಿ ಅಮೂಲ್ಯ ಕೊಡುಗೆ ನೀಡಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಸ್ವಾಮೀಜಿ ಆರೋಗ್ಯ ಮತ್ತು ಸತ್ವಪೂರ್ಣ ಜೀವನ ಮುನ್ನಡೆಸಿ ಶತಮಾನೋತ್ಸವ ವರ್ಧಂತಿಯನ್ನು ಆಚರಿಸಿಕೊಳ್ಳುವಂತಾಗಲಿ ಎಂದರು.
ಹುಲಿಕೆರೆ ಮಠದ ವಿರೂಪಾಕ್ಷಲಿಂಗ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಉಸಿರು ಇರುವವರೆಗೆ ವೀರಶೈವ ಸಂಸ್ಕೃತಿ ಮತ್ತು ಗುರು ಪರಂಪರೆಯ ವೈಶಿಷ್ಟ್ಯಗಳನ್ನು ಬೆಳೆಸುವುದೇ ನಮ್ಮ ಗುರಿಯಾಗಿದೆ ಎಂದರು.
ಶಾಸಕ ಎಚ್.ಡಿ.ತಮ್ಮಯ್ಯ ಮಾತನಾಡಿ, ಶಿಕ್ಷಣ ಮತ್ತು ಆರೋಗ್ಯದ ಸೌಲಭ್ಯ ಕಲ್ಪಿಸುವುದು ಸರ್ಕಾರದ ಹೊಣೆಗಾರಿಕೆಯಾಗಿದೆ. ನಾಡಿನ ಮಠಗಳು ಇವೆರಡನ್ನೂ ನ್ನು ಜನ ಸಾಮಾನ್ಯರಿಗೆ ಒದಗಿಸುತ್ತಾ ಗ್ರಾಮೀಣ ಭಾಗದ ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡುವ ಮೂಲಕ ಸಾಮಾಜಿಕ ಕಾಳಜಿ ಮೆರೆಯುತ್ತಿವೆ ಎಂದರು.
ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ ಮಾತನಾಡಿ, ಸನಾತನ ಧರ್ಮದ ಮೌಲ್ಯಗಳನ್ನು ಸಂರಕ್ಷಿಸಿಕೊಂಡು ಬಂದರೆ ಎಲ್ಲ ಮತ, ಧರ್ಮಗಳು ಸಾಮರಸ್ಯದಿಂದ ಬದುಕಿ ಬಾಳಲು ಸಾಧ್ಯವಾಗುತ್ತದೆ ಎಂದರು.
ಗಿರಿಜಾಪತಿ, ಡಿ.ಎಂ.ಮಂಜುನಾಥಸ್ವಾಮಿ ಉಪನ್ಯಾಸ ನೀಡಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಹಡಿಮನೆ ಸತೀಶ್, ವಿರೂಪಾಕ್ಷಲಿಂಗ ಸ್ವಾಮೀಜಿ ಭಕ್ತರೇ ಮಠದ ಜೀವಾಳ ಎನ್ನುತ್ತ ಮಠವನ್ನು ಶೈಕ್ಷಣಿಕವಾಗಿ ಮತ್ತು ಧಾರ್ಮಿಕವಾಗಿ ಮುನ್ನೆಡೆಸುತ್ತಿದ್ದಾರೆ ಎಂದರು.
ಧರ್ಮಸಭೆಯಲ್ಲಿ ಯಡಿಯೂರು ರೇಣುಕ ಶಿವಾಚಾರ್ಯ ಸ್ವಾಮೀಜಿ, ಹುಲಿಕೆರೆ ಮಠದ ಕಿರಿಯ ಶ್ರೀ ಮಲ್ಲಿಕಾರ್ಜುನ ಪಂಡಿತಾರಾಧ್ಯ ಸ್ವಾಮೀಜಿ, ಹುಣಸಘಟ್ಟದ ಗುರುಮೂರ್ತಿ ಶಿವಾಚಾರ್ಯ ಸ್ವಾಮೀಜಿ, ಬೀರೂರು ರಂಭಾಪುರಿ ಶಾಖಾ ಮಠದ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ, ಜಿಲ್ಲಾ ವೀರಶೈವ ಮಹಾಸಭಾದ ಅಧ್ಯಕ್ಷ ಎಚ್.ಎಂ ಲೋಕೇಶ್, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಎ.ಎನ್.ಮಹೇಶ್, ಬಿಜೆಪಿ ಮುಖಂಡ ಎಚ್.ಸಿ.ಕಲ್ಮರುಡಪ್ಪ, ಡಾ.ಸಂತೋಷ್, ಮಲ್ಲೇಗೌಡ, ಜಗದೀಶ್, ಮಲ್ಲೇಶಪ್ಪ, ಗ್ರಾಮಸ್ಥರು ಭಾಗವಹಿಸಿದ್ದರು.
ಜನ ಜಾತಿ ಗಣತಿ ಶ್ಲಾಘನೀಯ
ಕೇಂದ್ರ ಸರ್ಕಾರ ಜನಗಣತಿಯ ಜೊತೆಗೆ ಜಾತಿ ಗಣತಿಯನ್ನೂ ಮಾಡಲು ಮುಂದಾಗಿರುವುದು ರಾಜ್ಯ ಸರ್ಕಾರ ಜಾತಿಗಣತಿಯ ಮರು ಸಮೀಕ್ಷೆಗೆ ಮುಂದಾಗಿದ್ದು ಸಂತಸ ತಂದಿದೆ. ಇದರಿಂದ ಎಲ್ಲರಿಗೂ ನ್ಯಾಯ ದೊರಕುವಂತಾಗಲಿ ರಂಭಾಪುರಿ ಪೀಠದ ಪ್ರಸನ್ನ ರೇಣುಕ ವೀರಸೋಮೇಶ್ವರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.