ADVERTISEMENT

ಚಿಕ್ಕಮಗಳೂರು | ಪ್ರವಾಸಿ ತಾಣ: ಎಲ್ಲೆಲ್ಲೂ ಪ್ಲಾಸ್ಟಿಕ್ ಕಣ

ಪ್ರಕೃತಿ ಸೊಬಗಿನ ಜತೆಗೆ ಪ್ಲಾಸ್ಟಿಕ್ ರಾಶಿ ವೀಕ್ಷಿಸುವುದು ಪ್ರವಾಸಿಗರಿಗೆ ಅನಿವಾರ್ಯ

ವಿಜಯಕುಮಾರ್ ಎಸ್.ಕೆ.
Published 26 ಫೆಬ್ರುವರಿ 2024, 5:09 IST
Last Updated 26 ಫೆಬ್ರುವರಿ 2024, 5:09 IST
ಶ್ರೀಗುರು ದತ್ತಾತ್ರೇಯ ಬಾಬಾಬುಡನ್ ಸ್ವಾಮಿ ದರ್ಗಾದ ಬಳಿ ಬಿದ್ದಿರುವ ಪ್ಲಾಸ್ಟಿಕ್ ರಾಶಿ
ಶ್ರೀಗುರು ದತ್ತಾತ್ರೇಯ ಬಾಬಾಬುಡನ್ ಸ್ವಾಮಿ ದರ್ಗಾದ ಬಳಿ ಬಿದ್ದಿರುವ ಪ್ಲಾಸ್ಟಿಕ್ ರಾಶಿ   

ಚಿಕ್ಕಮಗಳೂರು: ಜಿಲ್ಲೆಗೆ ಬರುವ ಪ್ರವಾಸಿಗರ ಸಂಖ್ಯೆ ಹೆಚ್ಚಾದಂತೆಲ್ಲ ಪ್ರವಾಸಿ ತಾಣಗಳಲ್ಲಿ ಪ್ಲಾಸ್ಟಿಕ್ ಹಾವಳಿಯೂ ಮಿತಿ ಮೀರುತ್ತಿದೆ. ಗಿರಿ ಶಿಖರ ನೋಡಲು ಬರುವ ಜನ ಪ್ಲಾಸ್ಟಿಕ್ ಬಾಟಲಿಯ ರಾಶಿ ನೋಡಬೇಕಾಗಿದೆ.

ಚಿಕ್ಕಮಗಳೂರು ಜಿಲ್ಲೆಯು ಪರ್ವತ ಶ್ರೇಣಿ ಪ್ರದೇಶವಾಗಿದ್ದು, ಪಶ್ಚಿಮ ಘಟ್ಟದ ಒಂದು ಭಾಗ. ಹಲವು ನದಿಗಳ ಉಗಮ ಸ್ಥಾನ ಕೂಡ. ಜಿಲ್ಲೆಯ ಪ್ರವಾಸಿ ತಾಣಗಳಲ್ಲಿ ಮಳ್ಳಯ್ಯನಗಿರಿಯು ಪ್ರಮುಖ ಆಕರ್ಷಣೀಯ ಸ್ಥಳ. ಈ ಪರ್ವತವು ಭದ್ರ ವನ್ಯಜೀವಿ ಅಭಯಾರಣ್ಯ ಸುತ್ತುವರಿದಿದೆ. ಪರ್ವತ ಶ್ರೇಣಿಯ ತಪ್ಪಲಿನಲ್ಲಿ ಚಿಕ್ಕಮಗಳೂರು ನಗರಕ್ಕೆ ಕುಡಿಯುವ ನೀರು ಪೂರೈಸುವ ಹಿರೇಕೊಳಲೆ ಕೆರೆ ಕೂಡ ಇದೆ. ಹಸಿರು ಶೋಲಾ ಕಾಡು, ಹುಲ್ಲುಗಾವಲು ಮತ್ತು ಹಲವು ಜೀವ ವೈವಿಧ್ಯತೆಯಿಂದ ಕೂಡಿದೆ.

‘ಪ್ರವಾಸಿ ತಾಣ, ಸಾರ್ವಜನಿಕ ಸ್ಥಳಗಳಲ್ಲಿ ಪ್ಲಾಸ್ಟಿಕ್‌ ಬಳಕೆ ಮತ್ತು ಮದ್ಯಪಾನ ಬಳಕೆ ಕಡ್ಡಾಯವಾಗಿ ನಿಷೇಧಿಸಲಾಗಿದೆ, ತಪ್ಪಿದ್ದಲ್ಲಿ ₹1000 ದಂಡ ವಿಧಿಸಲಾಗುವುದು’ ಎಂಬ ಫಲಕಗಳನ್ನು ಗಿರಿ ಶ್ರೇಣಿ ಮಾರ್ಗದಲ್ಲಿ ಅಲ್ಲಲ್ಲಿ ಅಳವಡಿಸಲಾಗಿದೆ. ಅವುಗಳ ಬಣ್ಣ ಮಾಸಿರುವ ಜತೆಗೆ ಅವುಗಳಿಗೆ ಕಿಮ್ಮತ್ತು ಇಲ್ಲವಾಗಿದೆ. ಫಲಕಗಳ ಅಡಿಯಲ್ಲೇ ಪ್ಲಾಸ್ಟಿಕ್ ಬಾಟಲಿಯ ರಾಶಿಯನ್ನು ಗಿರಿ ಶ್ರೇಣಿಯಲ್ಲಿ ಕಾಣಬಹುದು.

ADVERTISEMENT

ಗಿರಿ ಶ್ರೇಣಿಯ ಮಾರ್ಗದಲ್ಲಿ, ದರ್ಗಾ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಪ್ಲಾಸ್ಟಿಕ್‌ ಲೋಟ, ಬಾಟಲಿ, ತಟ್ಟೆ, ಚೀಲ, ಪೊಟ್ಟಣಗಳದ್ದೇ ಕಾರುಬಾರು. ಪ್ಲಾಸ್ಟಿಕ್‌ ತ್ಯಾಜ್ಯ ರಾರಾಜಿಸುತ್ತಿದೆ. ಇಲ್ಲಿ ಪ್ಲಾಸ್ಟಿಕ್‌ ಬಳಕೆಗೆ ಕಡಿವಾಣ ಹಾಕುವುದು ಸವಾಲಾಗಿದೆ.

ಪ್ಲಾಸ್ಟಿಕ್‌ ತ್ಯಾಜ್ಯವನ್ನು ಎಲ್ಲೆಂದರಲ್ಲಿ ಎಸೆಯುತ್ತಾರೆ. ಮದ್ಯ ಸೇವಿಸಿ ಬಾಟಲಿಗಳನ್ನು ಎಸೆಯುತ್ತಾರೆ. ಕಸ ತೊಟ್ಟಿಗೂ ಹಾಕುವುದಿಲ್ಲ. ಬೆಟ್ಟಸಾಲಿನ ಸೊಬಗು ಕಣ್ತುಂಬಿಕೊಳ್ಳಲು, ದತ್ತಪೀಠ, ದರ್ಗಾ ದರ್ಶನಕ್ಕೆ ಸಾವಿರಾರು ಪ್ರವಾಸಿಗರು ಇಲ್ಲಿಗೆ ಬರುತ್ತಾರೆ. ವಾರಾಂತ್ಯದಲ್ಲಂತೂ ಗಿರಿಮಾರ್ಗವು ಪ್ರವಾಸಿಗರ ವಾಹನಗಳಿಂದ ಗಿಜಿಗುಡುತ್ತದೆ.

ಊಟ ಉಪಹಾರಕ್ಕೆ ಪ್ಲಾಸ್ಟಿಕ್‌ ತಟ್ಟೆಲೋಟ ಬಳಸಿ, ಎಲ್ಲೆಂದರಲ್ಲಿ ಬಿಸಾಕಿದ್ದಾರೆ. ಕುರುಕುಲು ತಿನಿಸು ತಿಂದು ಪೊಟ್ಟಣಗಳನ್ನು ಎಸೆದಿದ್ದಾರೆ. ಗಾಳಿಗೆ ಇಡಿ ಗಿರಿಯ ತುಂಬ ಹರಡಿಕೊಳ್ಳುತ್ತಿವೆ. ಕೆಲವು ಕಡೆ ಮದ್ಯದ ಬಾಟಲಿಗಳು ಬಿದ್ದಿವೆ. ಕೆಲವು ಕಡೆ ಪ್ಲಾಸ್ಟಿಕ್‌ ತಿಪ್ಪೆಗಳೇ ನಿರ್ಮಾಣವಾಗಿವೆ.

ಇದೊಂದು ಅಪೂರ್ವ ತಾಣ. ಹಿಂದು, ಮುಸ್ಲಿಂ, ಕ್ರಿಶ್ಚಿಯನ್‌, ಜೈನ ಎಲ್ಲ ಸಮುದಾಯದವರು ಇಲ್ಲಿಗೆ ಬರುತ್ತಾರೆ. ಸ್ವಚ್ಛತೆ ಕಾಪಾಡುವುದು ಆದ್ಯ ಕರ್ತವ್ಯ ಎಂಬುದನ್ನು ಪ್ರವಾಸಿಗರು ತಿಳಿದುಕೊಳ್ಳಬೇಕು. ನಿಯಮ ಪಾಲಿಸದವರ ವಿರುದ್ಧ ಸಂಬಂಧಪಟ್ಟವರು ನಿರ್ದಾಕ್ಷಿಣ್ಯವಾಗಿ ಕ್ರಮ ಜರುಗಿಸಬೇಕು ಎಂದು ಪ್ರವಾಸಿಗರು ಹೇಳುತ್ತಾರೆ.

ಶ್ರೀಗುರು ದತ್ತಾತ್ರೇಯ ಬಾಬಾಬುಡನ್ ಸ್ವಾಮಿ ದರ್ಗಾದ ಬಳಿ ಪ್ಲಾಸ್ಟಿಕ್ ಬಾಟಲಿಗಳು ಬಿದ್ದಿರುವುದು
ಶೃಂಗೇರಿಯ ಗಾಂಧಿ ಮೈದಾನದಲ್ಲಿ ಪ್ಲಾಸ್ಟಿಕ್ ಎಲ್ಲೆಂದರಲ್ಲಿ ಬಿದ್ದಿರುವುದು
ಕೊಪ್ಪದ ಕುಂಚೂರು ಘಾಟಿಯಲ್ಲಿ ಸೂರ್ಯಸ್ತಮಾನ ವೀಕ್ಷಣ ಗೋಪುರದ ಬಳಿ ಪ್ಲಾಸ್ಟಿಕ್ ವಸ್ತುಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿರುವುದು
ಕೆಮ್ಮಣ್ಣುಗುಂಡಿ ರಸ್ತೆಯ ರಾಜಭವನ ರಸ್ತೆಯಲ್ಲಿ ಬಿದ್ದಿರುವ ಪ್ಲಾಸ್ಟಿಕ್ ರಾಶಿ
ಮೂಡಿಗೆರೆ ತಾಲ್ಲೂಕಿನ ದೇವರಮನೆಯಲ್ಲಿ ನಾಲ್ಕು ದಿನಗಳ ಹಿಂದೆ ಸಂಘಸಂಸ್ಥೆಯವರು ನಡೆಸಿದ ಸ್ವಚ್ಚತಾ ಅಭಿಯಾನದಲ್ಲಿ ಸಂಗ್ರಹಿಸಿದ ಪ್ಲಾಸ್ಟಿಕ್ ತ್ಯಾಜ್ಯ

ಪ್ಲಾಸ್ಟಿಕ್ ನಿಷೇಧಕ್ಕೆ ಜಿಲ್ಲಾಡಳಿತ ತಯಾರಿ

ಮುಳ್ಳಯ್ಯನಗಿರಿ ಪ್ರದೇಶದಲ್ಲಿ ಮಾರ್ಚ್‌ ತಿಂಗಳಿನಿಂದ ಪ್ಲಾಸ್ಟಿಕ್ ನಿಷೇಧಕ್ಕೆ ಜಿಲ್ಲಾಡಳಿತ ಸಜ್ಜಾಗಿದೆ. ಸಾರ್ವಜನಿಕ ಪ್ರಕಟಣೆ ಹೊರಡಿಸಿದ್ದು ಸಲಹೆಗಳನ್ನು ಫೆ. 23ರೊಳಗೆ ಸಲ್ಲಿಸಲು ತಿಳಿಸಿತ್ತು. ಮುಳ್ಳಯ್ಯನಗಿರಿ ಪ್ರದೇಶದಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಿದ್ದು ಮೊದಲ ಹಂತದಲ್ಲಿ ಇಲ್ಲಿ ಪ್ಲಾಸ್ಟಿಕ್ ನಿಷೇಧ ಮಾಡಲು ಉದ್ದೇಶಿಸಿದೆ. ಪ್ಲಾಸ್ಟಿಕ್ ನಿಷೇಧ ಮಾಡಿದರೆ ಪ್ರವಾಸಿಗರಿಗೆ ಕುಡಿಯುವ ನೀರಿಗೆ ತೊಂದರೆ ಆಗದಂತೆ ನೋಡಿಕೊಳ್ಳುವುದು ಜಿಲ್ಲಾಡಳಿತದ ಜವಾಬ್ದಾರಿ. ಗಿರಿಭಾಗದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸುವುದು ಅಥವಾ ಪ್ಲಾಸ್ಟಿಕ್ ಬಾಟಲಿ ಕೊಟ್ಟರೆ ಅದನ್ನು ವಾಪಸ್ ತರಲೇಬೇಕಾದ ಅನಿವಾರ್ಯತೆ ಸೃಷ್ಟಿಸಲು ಯೋಚಿಸಿದೆ. ಗಿರಿಭಾಗಕ್ಕೆ ಹೋಗುವ ಪ್ರವಾಸಿಗರು ಪ್ಲಾಸ್ಟಿಕ್ ಬಾಟಲಿಯಲ್ಲಿ ಕುಡಿಯುವ ನೀರು ತೆಗೆದುಕೊಂಡು ಹೋಗಲು ಬಯಸಿದರೆ ಒಂದು ಬಾಟಲಿಗೆ ಇಂತಿಷ್ಟು ಹಣ ಎಂದು ಪಾವತಿಸಬೇಕು. ಆ ಬಾಟಲಿಯನ್ನು ವಾಪಸ್ ತಂದು ತೋರಿಸಿದರೆ ಹಣ ವಾಪಸ್ ಕೊಡುವ ಪದ್ಧತಿ ಜಾರಿಗೆ ತರಲು ಆಲೋಚನೆ ನಡೆಸಿದೆ.

ಪರಿಸರದ ಮಡಿಲಿನಲ್ಲಿ ತಪ್ಪದ ಮಾಲಿನ್ಯ

ಮೂಡಿಗೆರೆ: ತಾಲ್ಲೂಕಿನ ಹೆಸರಾಂತ ಪ್ರವಾಸಿ ತಾಣಗಳಲ್ಲಿ ದೇವರಮನೆ ಎತ್ತಿನಭುಜ ಭೈರಾಪುರ ನಾಣ್ಯಭೈರವೇಶ್ವರ ತಾಣಗಳು ಪ್ರಮುಖವಾಗಿದ್ದು ಪ್ರಕೃತಿಯ ಮಡಿಲಿನಲ್ಲಿರುವ ಈ ತಾಣಗಳು ಮಾಲಿನ್ಯಕ್ಕೆ ಸಿಲುಕಿ ನಲುಗುತ್ತಿವೆ. ಇದಕ್ಕೆ ವಾರದ ಹಿಂದೆ ಹಲವು ಪ್ರಗತಿಪರ ಸಂಸ್ಥೆಗಳು ನಡೆಸಿದ ಸ್ವಚ್ಛತಾ ಅಭಿಯಾನದಲ್ಲಿ ಸಿಕ್ಕಿ ಪ್ಲಾಸ್ಟಿಕ್ ಮದ್ಯದ ಬಾಟಲಿಗಳ ತ್ಯಾಜ್ಯದ ರಾಶಿಯೇ ಸಾಕ್ಷಿ. ಮೀಸಲು ಅರಣ್ಯ ವ್ಯಾಪ್ತಿಯಲ್ಲಿರುವ ಈ ಪ್ರವಾಸಿ ತಾಣಗಳಿಗೆ ವಾರ ಪೂರ್ತಿ ಪ್ರವಾಸಿಗರು ಎಗ್ಗಿಲ್ಲದೇ ನುಗ್ಗುತ್ತಾರೆ. ತಮ್ಮೊಂದಿಗೆ ತರುವ ತಿನಿಸುಗಳ ಪ್ಯಾಕೆಟ್ ಮದ್ಯದ ಬಾಟಲಿಗಳನ್ನು ಬಳಸಿದ ಬಳಿಕ ಅಲ್ಲಿಯೇ ಬಿಟ್ಟು ಹೋಗುವುದರಿಂದ ತ್ಯಾಜ್ಯದ ರಾಶಿಯೇ ನಿರ್ಮಾಣವಾಗುತ್ತದೆ. ಕೆಲವು ದುಷ್ಟ ಮನಸುಗಳು ಮದ್ಯದ ಬಾಟಲಿಗಳನ್ನು ರಸ್ತೆ ಮೇಲೆ ಹೊಡೆಯುವುದು ಅರಣ್ಯದೊಳಕ್ಕೆ ಎಸೆಯುವುದು ಸಾಮಾನ್ಯವಾಗಿದೆ. ತಿನಿಸುಗಳ ಪ್ಯಾಕೆಟ್‌ಗಳನ್ನು ಎಲ್ಲೆಂದರಲ್ಲಿ ಬಿಸಾಡುವುದರಿಂದ ಅದರಲ್ಲಿ ಅಳಿದುಳಿದ ಆಹಾರಕ್ಕೆ ಪ್ಲಾಸ್ಟಿಕ್ ತಿನ್ನುವ ವನ್ಯಪ್ರಾಣಿಗಳ ಜೀವಕ್ಕೆ ಕುತ್ತು ಬರುತ್ತದೆ. ಪ್ರವಾಸಿ ತಾಣಗಳಲ್ಲಿ ಆಹಾರ ಪೊಟ್ಟಣಗಳನ್ನು ಎಸೆಯಲು ಸ್ಥಳ ನಿಗದಿಗೊಳಿಸಿದ್ದರೂ ಆಹಾರ ಸೇವಿಸಿದ ಪ್ರದೇಶದಲ್ಲಿಯೇ ಪೊಟ್ಟಣಗಳನ್ನು ಎಸೆದು ಕೈ ತೊಳೆದುಕೊಳ್ಳುವ ಪರಿಪಾಠ ನಿಂತಿಲ್ಲ. ಪ್ರವಾಸಿ ತಾಣಗಳಲ್ಲಿ ಆಹಾರ ತ್ಯಾಜ್ಯವನ್ನು ಎಸೆಯದಂತೆ ಕಟ್ಟುನಿಟ್ಟಿನ‌ ಕ್ರಮ ಕೈಗೊಂಡು ಅದನ್ನು ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಪ್ರವಾಸಿ ತಾಣಗಳಿಗೆ ಕಡ್ಡಾಯವಾಗಿ ಮದ್ಯ ಸಾಗಾಟವನ್ನು ತಡೆಯಬೇಕು. ಅರಣ್ಯದಂಚಿನಲ್ಲಿ ರಸ್ತೆ ಬದಿಗಳಲ್ಲಿ ಮದ್ಯ ಸೇವಿಸುವವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಅರಣ್ಯಕ್ಕೆ ಹೊಂದಿಕೊಂಡಂತೆ ಇರುವ ಸಾಗುವಳಿ ಜಮೀನಿನಲ್ಲೂ ಡಿಜೆ ಪಾರ್ಟಿಗಳನ್ನು ಸಂಪೂರ್ಣವಾಗಿ ನಿಷೇಧಿಸಬೇಕು ಎಂಬುದು ಸಾರ್ವಜನಿಕರ ಒತ್ತಾಯ.

ಕೆಮ್ಮಣ್ಣುಗುಂಡಿಯಲ್ಲೂ ಪ್ಲಾಸ್ಟಿಕ್ ರಾಶಿ

ತರೀಕೆರೆ: ತಾಲ್ಲೂಕಿನ ಪ್ರವಾಸಿ ತಾಣಗಳಾದ ಕೆಮ್ಮಣ್ಣುಗುಂಡಿ ಕಲ್ಲತ್ತಿಗಿರಿ ಸೋಮಪುರ ಸೋಮೇಶ್ವರ ದೇವಸ್ಥಾನದ ಬಳಿಯೂ ಪ್ಲಾಸ್ಟಿಕ್ ಹಾವಳಿ ಇದೆ. ಬರುವ ಪ್ರವಾಸಿಗರು ಕುಡಿಯುವ ನೀರಿಗೆ ತರುವ ಪ್ಲಾಸ್ಟಿಕ್ ಬಾಟಲಿಯನ್ನು ಅಲ್ಲಲ್ಲೇ ಬಿಸಾಡುತ್ತಿದ್ದು ನಿಯಂತ್ರಣ ಇಲ್ಲವಾಗಿದೆ. ಕೆಮ್ಮಣ್ಣುಗುಂಡಿ ಪರಿಸರ ಸೊಬಗು ಕಣ್ತುಂಬಿಕೊಳ್ಳಲು ಬರುವ ಪ್ರವಾಸಿಗರು ರಾಜಭವನ ಲೋಕೋಪಯೋಗಿ ಇಲಾಖೆ ವಸತಿ ಗೃಹಗಳ ಬಳಿ ಪ್ಲಾಸ್ಟಿಕ್ ರಾಶಿ ನೋಡಿ ಬೇಸರ ವ್ಯಕ್ತಪಡಿಸುತ್ತಾರೆ. ಕಲ್ಲತ್ತಿಗಿರಿ ಕ್ಷೇತ್ರದಲ್ಲಿ ರಸ್ತೆ ಬದಿಯಲ್ಲೇ ಪ್ಲಾಸ್ಟಿಕ್ ರಾಶಿ ಬಿದ್ದಿದೆ. ಸೋಮೇಶ್ವರ ದೇಗುಲದ ಬಳಿಯೂ ಪ್ಲಾಸ್ಟಿಕ್ ಮಿಶ್ರಿತ ಕಸದ ರಾಶಿ ಬಿದ್ದಿದೆ.

ನದಿ ದಂಡೆಯಲ್ಲಿ ರಾಶಿ ಪ್ಲಾಸ್ಟಿಕ್

ಶೃಂಗೇರಿ: ಪಟ್ಟಣ ಬೆಳೆದಂತೆ ಜನಸಂಖ್ಯೆಯೊಂದಿಗೆ ಪ್ರವಾಸಿಗರ ಸಂಖ್ಯೆಯೂ ಹೆಚ್ಚಿದ್ದು ಕಸ ವಿಲೇವಾರಿ ಇನ್ನೂ ಸಮರ್ಪಕವಾಗಿ ನಿರ್ವಹಣೆಯಾಗದೇ ಗಾಂಧಿ ಮೈದಾನ ರಸ್ತೆ ಬದಿ ಮತ್ತು ನದಿ ದಂಡೆಯಲ್ಲಿ ರಾಶಿ ರಾಶಿ ಪ್ಲಾಸ್ಟಿಕ್ ಬಾಟಲಿಯ ತ್ಯಾಜ್ಯ ಸಂಗ್ರಹಗೊಂಡಿದೆ. ಶಾರದಾ ಪೀಠಕ್ಕೆ ಬರುವ ಪ್ರವಾಸಿಗರು ತಾವು ಬಳಸುವ ಪ್ಲಾಸ್ಟಿಕ್ ವಸ್ತುಗಳು ಊಟ ಮಾಡಿದ ತಟ್ಟೆ ಲೋಟವನ್ನು ಎಲ್ಲೆಂದರಲ್ಲಿ ಹಾಕುವುದರಿಂದ ತ್ಯಾಜ್ಯ ರಾಶಿ ಹೆಚ್ಚಾಗುತ್ತಿದೆ. ಪಟ್ಟಣ ಪಂಚಾಯಿತಿಯು ಪ್ರತಿ ದಿನವೂ ಕಸ ಸಂಗ್ರಹಿಸಿ ತ್ಯಾಜ್ಯ ವಿಲೇವಾರಿ ಮಾಡುವ ಸ್ಥಳಕ್ಕೆ ಕೊಂಡೊಯ್ಯುತ್ತಿದೆ. ಆದರೆ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಪ್ರತಿನಿತ್ಯ ಕಸ ಸಂಗ್ರಹಣೆ ನಡೆಯುತ್ತಿಲ್ಲ. ವಾರಕ್ಕೊಮ್ಮೆ ಕಸ ಸಂಗ್ರಹಿಸುವ ಪದ್ದತಿಯಿಂದ ಕಸದ ರಾಶಿಯಾಗುತ್ತಿದೆ. ಪಟ್ಟಣದಿಂದ ಆಗುಂಬೆಗೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿನ ಭಕ್ತಂಪುರ ವೃತ್ತದಿಂದ ಹೊನ್ನವಳ್ಳಿಯವರೆಗಿನ ಮುಖ್ಯರಸ್ತೆಯ ಎರಡು ಬದಿ ತ್ಯಾಜ್ಯ ಹಾಕಲಾಗುತ್ತಿದೆ. ಪಟ್ಟಣದಲ್ಲಿ ನಡೆಯುವ ಸಮಾರಂಭ ಪಟ್ಟಣ ಹಾಗೂ ಗ್ರಾಮೀಣ ಭಾಗದ ಜನರು ತಮಗೆ ಬೇಡವಾದ ವಸ್ತುಗಳನ್ನು ವಾಹನದಲ್ಲಿ ತಂದು ರಸ್ತೆ ಬದಿ ಸುರಿಯುತ್ತಿದ್ದಾರೆ. ತುಂಗಾ ನದಿಗೂ ಸಾಕಷ್ಟು ಕಸ ತಂದು ಸುರಿಯಲಾಗುತ್ತಿದ್ದು ನದಿ ದಂಡೆಯುದ್ದಕ್ಕೂ ಕಸದ ರಾಶಿ ಕಂಡು ಬರುತ್ತಿದೆ. ಜನವಸತಿ ಇಲ್ಲದ ಸ್ಥಳದಲ್ಲಿ ಹೆಚ್ಚು ತ್ಯಾಜ್ಯ ಸಂಗ್ರಹಗೊಂಡಿದ್ದು ಪ್ರವಾಸಿಗರು ಹಾಗೂ ಸ್ಥಳೀಯರು ವಾಹನದಲ್ಲಿ ತೆರಳುವಾಗ ಬೇಡವಾದ ಪ್ಲಾಸ್ಟಿಕ್ ಚೀಲ ಅನುಪಯುಕ್ತ ವಸ್ತುಗಳನ್ನು ಬಿಸಾಡುತ್ತಿದ್ದಾರೆ. ಇದಕ್ಕೆ ಕಡಿವಾಣ ಹಾಕಬೇಕು ಎಂಬುದು ಸ್ಥಳೀಯರು ಒತ್ತಾಯ.

ಪ್ಲಾಸ್ಟಿಕ್ ರಾಶಿಯೇ ಸವಾಲು

ಕೊಪ್ಪ: ಪಟ್ಟಣ ಸಮೀಪದ ತ್ಯಾಜ್ಯ ಸಂಸ್ಕರಣೆ ಘಟಕದಲ್ಲಿ ಬೃಹದಾಕಾರವಾಗಿ ಪ್ಲಾಸ್ಟಿಕ್ ವಸ್ತುಗಳು ಇವೆ. ಇದರ ಸಂಸ್ಕರಣೆಯೇ ದೊಡ್ಡ ಸವಾಲಾಗಿ ಪರಿಣಮಿಸಿದೆ. ಎಲ್ಲೆಂದರಲ್ಲಿ ಪ್ಲಾಸ್ಟಿಕ್ ವಸ್ತುಗಳು ಕಣ್ಣು ಕುಕ್ಕುತ್ತಿವೆ. ರಸ್ತೆಯ ಇಕ್ಕೆಲಗಳಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ. ರಾಷ್ಟ್ರೀಯ ಹೆದ್ದಾರಿ 169ರಲ್ಲಿ ಅಮ್ಮಡಿ ಬಳಿ ಗುಡ್ಡೆ ಹಾಕಿದಂತಿರುವ ಪ್ಲಾಸ್ಟಿಕ್ ಚೀಲ ಕವರ್‌‌ಗಳು ಕಣ್ಣಿಗೆ ರಾಚುತ್ತಿವೆ. ಪಟ್ಟಣದಿಂದ ಜಯಪುರ ಕಡೆಗೆ ಹೋಗುವ ರಸ್ತೆಯಲ್ಲಿ ಕುಂಚೂರು ಘಾಟಿಯಲ್ಲಿನ ಸೂರ್ಯಸ್ಥಮಾನ ಗೋಪುರದ ಬಳಿ ಬಿದ್ದಿರುವ ಪ್ಲಾಸ್ಟಿಕ್ ವಸ್ತುಗಳು ಪ್ರಕೃತಿಯ ಅಂದಗೆಡಿಸಿದೆ. ಅಂಗಡಿ ಮುಂಗಟ್ಟುಗಳಲ್ಲಿ ಮಾರಾಟ ನಿಷೇಧಿತ ಪ್ಲಾಸ್ಟಿಕ್ ಕವರ್‌ಗಳು ಚೀಲಗಳು ಮರುಬಳಕೆಯಾಗದೇ ಭೂಮಿಗೆ ಸೇರುತ್ತಿವೆ. ಮಳೆಗಾಲದಲ್ಲಿ ಅವುಗಳು ಹಳ್ಳ–ಕೊಳ್ಳಗಳಲ್ಲಿ ತೇಲಿಕೊಂಡು ಬಂದು ಕಿರಿದಾದ ಮೋರಿ ಸೇತುವೆ ಅಕ್ಕ ಪಕ್ಕದಲ್ಲಿ ಶೇಖರಣೆಗೊಂಡು ಪರಿಸರಕ್ಕೆ ಹಾನಿಯುಂಟು ಮಾಡಿವೆ.

ಮೊದಲ ಹಂತದಲ್ಲಿ ಮುಳ್ಳಯ್ಯನಗಿರಿ ಭಾಗದಲ್ಲಿ ಪ್ಲಾಸ್ಟಿಕ್ ನಿಷೇಧ ಮಾಡಲಾಗುವುದು. ಅದೇ ಮಾದರಿಯಲ್ಲಿ ಉಳಿದ ಕಡೆ ಪ್ಲಾಸ್ಟಿಕ್ ನಿಷೇಧ ಮಾಡುವುದು ಸುಲಭವಾಗಲಿದೆ.
-ಮೀನಾ ನಾಗರಾಜ್, ಜಿಲ್ಲಾಧಿಕಾರಿ

ಪೂರಕ ಮಾಹಿತಿ: ರವಿಕುಮಾರ್ ಶೆಟ್ಟಿಹಡ್ಲು, ಕೆ.ನಾಗರಾಜ್, ರಾಘವೇಂದ್ರ ಕೆ.ಎನ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.