ADVERTISEMENT

ಆಲ್ದೂರು: ಗುಂಡಿಮಯ ರಸ್ತೆ; ಬಿಜೆಪಿ– ಜೆಡಿಎಸ್ ಪ್ರತಿಭಟನೆ

ಕ್ಷೇತ್ರದ ಶಾಸಕಿ ನಯನಾ ಮೋಟ್ಟಮ್ಮ ವಿರುದ್ಧ ಧಿಕ್ಕಾರ

​ಪ್ರಜಾವಾಣಿ ವಾರ್ತೆ
Published 14 ಆಗಸ್ಟ್ 2025, 5:52 IST
Last Updated 14 ಆಗಸ್ಟ್ 2025, 5:52 IST
ಜೋಳದಾಳು ಗ್ರಾಮದ ವೃತ್ತದಲ್ಲಿ ಜೆಡಿಎಸ್–ಬಿಜೆಪಿ ಕಾರ್ಯಕರ್ತರು ಬುಧವಾರ ಪ್ರತಿಭಟನೆ ನಡೆಸಿದರು
ಜೋಳದಾಳು ಗ್ರಾಮದ ವೃತ್ತದಲ್ಲಿ ಜೆಡಿಎಸ್–ಬಿಜೆಪಿ ಕಾರ್ಯಕರ್ತರು ಬುಧವಾರ ಪ್ರತಿಭಟನೆ ನಡೆಸಿದರು   

ಆಲ್ದೂರು:  ಜಿಲ್ಲೆಯ ಬಹುತೇಕ ಎಲ್ಲ ರಸ್ತೆಗಳು ಗುಂಡಿ ಬಿದ್ದಿದ್ದು, ಕೂಡಲೇ ದುರಸ್ತಿಪಡಿಸಬೇಕು ಎಂದು ಆಗ್ರಹಿಸಿ ಜೋಳದಾಳು ಗ್ರಾಮದ ವೃತ್ತದಲ್ಲಿ ಬಿಜೆಪಿ ಮತ್ತು ಜೆಡಿಎಸ್‌ ಕಾರ್ಯಕರ್ತರು ಬುಧವಾರ ಪ್ರತಿಭಟನೆ ನಡೆಸಿದರು.

ಗ್ರಾಮದ ಮುಖ್ಯ ಬೀದಿಯಲ್ಲಿ ಮೆರವಣಿಗೆ ನಡೆಸಿದ ಬಿಜೆಪಿ– ಜೆಡಿಎಸ್ ಕಾರ್ಯಕರ್ತರು, ಕಾಂಗ್ರೆಸ್ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಸರ್ಕಾರದ ವಿರುದ್ಧ ಭಿತ್ತಿಪತ್ರ ಪ್ರದರ್ಶಿಸಿ ರಸ್ತೆಯ ಗುಂಡಿಗಳಿಗೆ ಬಾಳೆ ಗಿಡವನ್ನು ನೆಟ್ಟು ಕ್ಷೇತ್ರದ ಶಾಸಕಿ ನಯನಾ ಮೋಟ್ಟಮ್ಮ ವಿರುದ್ಧ ಧಿಕ್ಕಾರ ಕೂಗಿದರು.

ಬಿಜೆಪಿ ಮುಖಂಡ ದೀಪಕ್ ದೊಡ್ಡಯ್ಯ ಮಾತನಾಡಿ, ‘ಗುಂಡಿಗಳಲ್ಲಿ ರಸ್ತೆ ಹುಡುಕಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಜನರಿಂದ ಮತ ಪಡೆದು ಜನಪ್ರತಿನಿಧಿಯಾಗಿ ಆಯ್ಕೆಯಾದ ಶಾಸಕರು ಕಾಣೆಯಾಗಿದ್ದಾರೆ. ಕ್ಷೇತ್ರದ ಪ್ರವಾಸ ಮಾಡಿ ಸಮಸ್ಯೆ ಆಲಿಸಬೇಕಾದವರು ಜನರ ಕೈಗೆ ಸಿಗುತ್ತಿಲ್ಲ’ ಎಂದರು.

ADVERTISEMENT

‘ಎರಡುವರೆ ವರ್ಷ ತಾಳ್ಮೆಯಿಂದ ಕಾದಿದ್ದೇವೆ. ಮುಂಬರುವ ದಿನಗಳಲ್ಲಿ ಉಗ್ರ ಪ್ರತಿಭಟನೆ ನಡೆಸುತ್ತೇವೆ. ಗ್ಯಾರಂಟಿ ಯೋಜನೆಗಳನ್ನು ನಂಬಿ ಮತ ನೀಡಿದ ಮತದಾರರು ಹಿಡಿಶಾಪ ಹಾಕುವಂತಾಗಿದೆ. ಇತ್ತ ಗ್ಯಾರಂಟಿ ಅನುಷ್ಠಾನವು ಇಲ್ಲ, ಅತ್ತ ಅಭಿವೃದ್ಧಿಯು ಮರೀಚಿಕೆಯಾಗಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಬಿಜೆಪಿ ಮಂಡಲ ಅಧ್ಯಕ್ಷ ರವಿ ಬಸರವಳ್ಳಿ, ‘ರಾಜ್ಯ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಅಭಿವೃದ್ಧಿ ಶೂನ್ಯವಾಗಿದೆ. ದುಸ್ತರವಾಗಿರುವ ರಸ್ತೆಗಳ ಗುಂಡಿ ಮುಚ್ಚಲು ಸಹ ಯೋಗ್ಯತೆ ಇಲ್ಲದ ಸ್ಥಿತಿ ಸರ್ಕಾರಕ್ಕೆ ಬಂದಿದೆ. ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿ ಮುಂದುವರೆಯುವ ಯೋಗ್ಯತೆ ಕಳೆದುಕೊಂಡಿದೆ’ ಎಂದು  ಆಕ್ರೋಶ ವ್ಯಕ್ತಪಡಿಸಿದರು.

ಜೆಡಿಎಸ್ ಕ್ಷೇತ್ರ ಸಮಿತಿಯ ಅಧ್ಯಕ್ಷ ಡಿ.ಜೆ. ಸುರೇಶ್, ‘ಕರ್ನಾಟಕದಲ್ಲಿ ಜೆಡಿಎಸ್ –ಬಿಜೆಪಿ ಸಮ್ಮಿಶ್ರ  ಮತ್ತು ಈ ಹಿಂದಿನ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ಅಭಿವೃದ್ಧಿ ಆಗಿರುವುದನ್ನು ಹೊರತುಪಡಿಸಿ ಕಾಂಗ್ರೆಸ್ ಅವಧಿಯಲ್ಲಿ ಅಭಿವೃದ್ಧಿಯೇ ಶೂನ್ಯವಾಗಿದೆ’ ಎಂದು ದೂರಿದರು.

ಕಾಲಹರಣ ಮಾಡುತ್ತಿರುವ ಸರ್ಕಾರವನ್ನು ಜನಸಾಮಾನ್ಯರು ಗಮನಿಸುತ್ತಿದ್ದಾರೆ. ಮುಂಬರುವ ದಿನಗಳಲ್ಲಿ ತಕ್ಕ ಪಾಠ ಕಲಿಸುತ್ತಾರೆ ಎಂದರು.

ಆವತಿ ಹೋಬಳಿ ಬಿಜೆಪಿ ಘಟಕದ ಅಧ್ಯಕ್ಷ ಕೆರೆಮಕ್ಕಿ ಮಹೇಶ್, ‘ಗ್ಯಾರಂಟಿ ಹೆಸರಿನಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ರಾಜ್ಯ ಸರ್ಕಾರ ದಲಿತರಿಗೆ ಮೀಸಲಿಟ್ಟಿದ್ದ ಹಣ ನುಂಗಿದೆ. ವಿಧಾನಸಭೆಯಲ್ಲಿ ಬೇರೆ ವಿಷಯಗಳಲ್ಲಿ ಸಮಯ ವ್ಯರ್ಥ ಮಾಡುತ್ತಿದೆ. ಗ್ರಾಮೀಣ ರಸ್ತೆ ಅಲ್ಲದಿದ್ದರೂ ಮುಖ್ಯ ರಸ್ತೆಗಳನ್ನು ದುರಸ್ತಿ ಮಾಡಿಸುವ ಸೌಜನ್ಯವನ್ನು ತೋರುತ್ತಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇದೇ ರೀತಿ ಮುಂದುವರೆದರೆ ಎಲ್ಲಾ ಪ್ರಮುಖ ರಸ್ತೆಗಳ ದೊಡ್ಡ ಗುಂಡಿಗಳಿಗೆ ಮುಖ್ಯಮಂತ್ರಿ ಮತ್ತು ಸಚಿವರ  ನಾಮಫಲಕ ಇಡಲಾಗುವುದು. ಬಿಜೆಪಿ– ಜೆಡಿಎಸ್ ಒಟ್ಟಾಗಿ ದೊಡ್ಡ ಮಟ್ಟದಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.

ಜೆಡಿಎಸ್ ಮುಖಂಡ ಎಚ್.ಎನ್. ಕೃಷ್ಣೇಗೌಡ ಮಾತನಾಡಿ, ‘ಮುಂಬರುವ ಎಲ್ಲಾ ಚುನಾವಣೆಗಳಲ್ಲೂ ಬಿಜೆಪಿ –ಜೆಡಿಎಸ್ ಮೈತ್ರಿ ಮುಂದುವರಿಸಲಾಗುವುದು. ಕಾಂಗ್ರೆಸ್ ಪಕ್ಷಕ್ಕೆ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಿ ಸೋಲಿನ ರುಚಿ ಕಲಿಸಲಾಗುವುದು’ ಎಂದರು.

ಪ್ರತಿಭಟನೆಯಲ್ಲಿ ಬಿಜೆಪಿ ಮುಖಂಡ ಕುರುವಂಗಿ ವೆಂಕಟೇಶ್, ಹೋಬಳಿ ಅಧ್ಯಕ್ಷ ಭೂತನಕಾಡು ನಾಗೇಶ್, ವಸ್ತಾರೆ ಜಿ.ಟಿ. ಪ್ರಸನ್ನ, ಎನ್.ಎಂ.ಮಂಜುನಾಥ್, ಮೈಲಿಮನೆ ಕೃಷ್ಣಮೂರ್ತಿ, ಶಂಕರ್ ಮಡೇನೇರಲು, ಪ್ರತಿಭಾ ನವೀನ್, ಜ್ಯೋತಿ ಸುರೇಶ್, ಚಂಪಾಜಗದೀಶ್, ಭವ್ಯನಟೇಶ್, ಅರವಿಂದ್ ಕೂದುವಳ್ಳಿ, ಪ್ರಥಮ್, ಮನುರಾಮ್, ರವೀಂದ್ರ ಆನಿಗನಹಳ್ಳಿ, ಸೋಮೇಶ್, ಆತ್ಮಿಕ್, ಅರುಣ್, ನಾಗಪ್ಪಗೌಡ, ಸಿಂಧು ಕುಮಾರ್, ಜೆಡಿಎಸ್ ಮುಖಂಡರಾದ ರುದ್ರೇಗೌಡ, ಸತೀಶ್, ನಂದನ್, ಬೈಗೂರು ನಾಗೇಶ್, ದೊಡ್ಡ ಮಾಗರವಳ್ಳಿ ನಾಗೇಶ್, ಮಿಥುನ್ ಹಳಿಯೂರು, ಸ್ವರೂಪ್ ಭಾಗವಹಿಸಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.