ಕಡೂರು: ‘ಪ್ರತಿಷ್ಠಿತ ಶೈಕ್ಷಣಿಕ ಸಂಸ್ಥೆಗಳು ಕಡೂರಿನಲ್ಲಿ ಕಾಲೇಜು ತೆರೆಯಲು ಮುಂದಾದರೆ ಸಂಪೂರ್ಣ ಸಹಕಾರ ನೀಡಲು ಸಿದ್ಧ’ ಎಂದು ಶಾಸಕ ಕೆ.ಎಸ್.ಆನಂದ್ ಹೇಳಿದರು.
ದ್ವಿತೀಯ ಪಿ.ಯು.ಸಿ. ಪರೀಕ್ಷೆಯ ವಿಜ್ಞಾನ ವಿಭಾಗದಲ್ಲಿ ರಾಜ್ಯಕ್ಕೆ ನಾಲ್ಕನೇ ರ್ಯಾಂಕ್ ಪಡೆದ ಎ.ಪಿ.ಷಡ್ಜಯ್ ಅವರನ್ನು ಅಭಿನಂದಿಸಿ ಅವರು ಮಾತನಾಡಿದರು.
ಕಡೂರಿನಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿಗಳಿದ್ದಾರೆ. ಹತ್ತನೇ ತರಗತಿ ಮುಗಿದ ಕೂಡಲೇ ಮಂಗಳೂರು, ದಾವಣಗೆರೆ ಮುಂತಾದೆಡೆ ಇರುವ ಕಾಲೇಜುಗಳಿಗೆ ಮಕ್ಕಳನ್ನು ಸೇರಿಸಲು ಪೋಷಕರು ಮುಂದಾಗುತ್ತಾರೆ. ಸ್ಥಳೀಯವಾಗಿ ನೀಟ್, ಸಿಇಟಿ ಮುಂತಾದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ನೀಡುವ ಸಂಯುಕ್ತ ಕಾಲೇಜು ಕಡೂರಿಗೆ ಅಗತ್ಯವಿದೆ. ಅಂತಹ ಕಾಲೇಜು ತೆರೆಯಲು ಶೈಕ್ಷಣಿಕ ಸಂಸ್ಥೆಗಳು ಮುಂದೆ ಬಂದರೆ ಅವರಿಗೆ ಸಹಕಾರ ನೀಡಲು ಸಿದ್ಧ ಒಟ್ಟಾರೆ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ, ಮಾರ್ಗದರ್ಶನ ದೊರೆಯಬೇಕೆಂಬ ಆಶಯ ನಮ್ಮದು’ ಎಂದರು.
10ನೇ ತರಗತಿ ಫಲಿತಾಂಶದಲ್ಲಿ ಕಡೂರು ಮತ್ತು ಬೀರೂರು ಶೈಕ್ಷಣಿಕ ವಲಯದ ಒಟ್ಟಾರೆ ಫಲಿತಾಂಶ ಇಳಿಮುಖವಾಗಿರುವುದು ಬೇಸರದ ಸಂಗತಿಯಾದರೂ ಕೆಲ ವಿದ್ಯಾರ್ಥಿಗಳು 615ಕ್ಕೂ ಹೆಚ್ಚು ಅಂಕಗಳನ್ನು ಪಡೆದಿರುವುದು ಸಮಾಧಾನಕರ. ಫಲಿತಾಂಶ ಹೆಚ್ಚಳಕ್ಕೆ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಶೀಘ್ರ ಇಲಾಖಾಧಿಕಾರಿಗಳ ಸಭೆ ಕರೆದು ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು’ ಎಂದರು.
ಬಳ್ಳಿಗನೂರು ಶಶಿ, ವಿನಯ್ ವಳ್ಳು, ಅರುಣ್ ಚಂದ್ರಪ್ಪ, ಅಬೀದ್ ಪಾಶಾ, ಪತ್ರಕರ್ತರ ಸಂಘದ ಅಧ್ಯಕ್ಷ ಎಂ.ಎನ್.ಜಗದೀಶ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.