ಕಡೂರು: ಹುಲಿ ಸಂರಕ್ಷಿತ ಪ್ರದೇಶದಲ್ಲಿ ಅಕ್ರಮವಾಗಿ ಸಾಗುವಳಿ ನಡೆಸಿದ ಆರೋಪದ ಮೇಲೆ ಗಾಳಿಗುತ್ತಿಯ ರಮೇಶ ನಾಯ್ಕ ಎಂಬಾತನನ್ನು ಟ್ರ್ಯಾಕ್ಟರ್, ನೇಗಿಲು, ಬೊಲೆರೋ ಪಿಕಪ್ ವಾಹನದ ಸಮೇತ ಅರಣ್ಯಾಧಿಕಾರಿಗಳು ಬಂಧಿಸಿದ್ದಾರೆ.
ತಾಲ್ಲೂಕಿನ ಬೀರೂರು ಹೋಬಳಿ ಎಮ್ಮೆದೊಡ್ಡಿಯ ಸರ್ವೆ ನಂ.70ರಲ್ಲಿ ಸೆಕ್ಷನ್-4ರ (ಎಮ್ಮೆದೊಡ್ಡಿ ಹುಲಿ ಸಂರಕ್ಷಿತ ಪ್ರದೇಶ) ಅಧಿಸೂಚಿತ ಅರಣ್ಯ ಪ್ರದೇಶದಲ್ಲಿ ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮದ ಕಡೂರು ಘಟಕದಿಂದ ಬೆಳೆಸಲಾದ ನೆಡುತೋಪು ಪ್ರದೇಶದಲ್ಲಿ ಅಕ್ರಮವಾಗಿ ಪ್ರವೇಶಿಸಿ ಸುಮಾರು ಒಂದು ಎಕರೆ ಪ್ರದೇಶದಲ್ಲಿ ಮುಳ್ಳುಕಂಟಿಗಳನ್ನು ತೆಗೆದು ಆರೋಪಿ, ಅಕ್ರಮ ಸಾಗುವಳಿ ನಡೆಸಿದ್ದ. 1985ರಿಂದ ನೀಲಗಿರಿ ನೆಡುತೋಪು ಬೆಳೆಸುತ್ತಿದ್ದ ಇಲ್ಲಿ, 2010ರಲ್ಲಿ ಅಂತಿಮ ಕಟಾವು ಮಾಡಲಾಗಿತ್ತು. 2013ರಲ್ಲಿ ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮವು ನೆಡುತೋಪನ್ನು ಪುನಃ ನಿರ್ಮಾಣ ಮಾಡಲು ಮುಂದಾದಾಗ ಸ್ಥಳೀಯರು ಆಕ್ಷೇಪ ವ್ಯಕ್ತಪಡಿಸಿದ್ದರಿಂದ ಕಾಮಗಾರಿ ಸ್ಥಗಿತಗೊಳಿಸಲಾಗಿತ್ತು ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಆರೋಪಿಯು ಅರಣ್ಯ ಸಂಪತ್ತಿಗೆ ಹಾನಿ ಮಾಡಿದ್ದು, ಅಕ್ರಮವಾಗಿ ಸಾಗುವಳಿ ಮಾಡಿದ ಪ್ರದೇಶವನ್ನು ಪುನಃ ವಶಕ್ಕೆ ಪಡೆಯಲಾಗಿದೆ. ಬಂಧಿತ ರಮೇಶ ನಾಯ್ಕನನ್ನು ಕಡೂರು ಜೆಎಂಎಫ್‌ಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ ಎಂದು ಕಡೂರು ವಲಯ ಅರಣ್ಯಾಧಿಕಾರಿ ಹರೀಶ್ ಎಂ.ಆರ್ ಮಾಹಿತಿ ನೀಡಿದ್ದಾರೆ.
ಕಾರ್ಯಾಚರಣೆಯಲ್ಲಿ ಎಮ್ಮೆದೊಡ್ಡಿ ಶಾಖೆಯ ಉಪ ವಲಯ ಅರಣ್ಯಾಧಿಕಾರಿ ಅಮೃತಾ ಬಿ.ಎಸ್, ಅರಣ್ಯ ಪಾಲಕ ರಜಿತ್ ಟಿ.ಕೆ, ಅರಣ್ಯ ಅಭಿವೃದ್ಧಿ ನಿಗಮದ ಸತೀಶ್ ಜೆ, ಶಶಿಧರ್, ಅರುಣ್‌ಕುಮಾರ್, ಮಧು ಆರ್. ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.