ಆಲ್ದೂರು: ಆಲ್ದೂರು ಪಟ್ಟಣದಿಂದ ಚಿಕ್ಕಮಗಳೂರು ತಲುಪುವ ರಸ್ತೆಯ ಇಕ್ಕೆಲಗಳಲ್ಲಿ ಬಿದ್ದಿರುವ ಪ್ಲಾಸ್ಟಿಕ್ ರಾಶಿ ಕಾಫಿನಾಡಿನ ಸೌಂದರ್ಯಕ್ಕೆ ಚ್ಯುತಿ ತರುವಂತಿದೆ.
ಇದೇ ಹೆದ್ದಾರಿ ಮೂಲಕ ಪ್ರವಾಸಿಗರು ಶೃಂಗೇರಿ, ಹೊರನಾಡು, ರಂಭಾಪುರಿ ಪೀಠ ಹೀಗೆ ಅನೇಕ ಧಾರ್ಮಿಕ ಕ್ಷೇತ್ರಗಳು, ಪ್ರವಾಸಿ ತಾಣಗಳಿಗೆ ತೆರಳುತ್ತಾರೆ. ರಸ್ತೆ ಬದಿಯಲ್ಲಿ ಬಿದ್ದಿರುವ ಕಸ ನೋಡಿ, ಪ್ರವಾಸಿಗರಿಗೆ ಅಸಹ್ಯ ಮೂಡಬಾರದು. ಈ ಪ್ರದೇಶವನ್ನು ಸ್ವಚ್ಛವಾಗಿಡಲು ಪ್ರಯತ್ನಿಸಬೇಕು ಎಂಬುದು ಸ್ಥಳೀಯರ ಆಗ್ರಹ.
ಪಟ್ಟಣದಿಂದ ಅರ್ಧ ಕಿಲೋಮೀಟರ್ ದೂರದಲ್ಲಿರುವ ಬಿರಂಜಿ ಹೊಳೆ ಹತ್ತಿರದಲ್ಲಿ ಪ್ಲಾಸ್ಟಿಕ್ ಕಸ, ಕೊಳೆತ ತರಕಾರಿ, ಎಳನೀರು ಚಿಪ್ಪನ್ನು ತಂದು ಸುರಿಯಲಾಗುತ್ತದೆ. ಕೊಳೆತ ತರಕಾರಿ, ಹಣ್ಣುತಿನ್ನುವ ಭರದಲ್ಲಿ ಜಾನುವಾರುಗಳು ಪ್ಲಾಸ್ಟಿಕ್ ಅನ್ನು ಸೇವಿಸುತ್ತವೆ. ಅವುಗಳ ಜೀವಕ್ಕೂ ಕುತ್ತು ಬರುವ ಸಾಧ್ಯತೆಗಳು ಹೆಚ್ಚು ಎನ್ನುತ್ತಾರೆ ಪರಿಸರ ಪ್ರೇಮಿಗಳು.
‘ನಿರ್ಜನ ಪ್ರದೇಶಗಳಲ್ಲಿ ರಾತ್ರಿ ಹೊತ್ತು ಕಸ ತಂದು ಎಸೆಯುತ್ತರೆ. ಸಾರ್ವಜನಿಕರು, ಕಸ ಹಾಕುವವರನ್ನು ಕಂಡರೆ ಪಂಚಾಯಿತಿಗೆ ಮಾಹಿತಿ ನೀಡಬೇಕು. ಹವ್ವಳ್ಳಿ ಗ್ರಾಮದಲ್ಲೂ ಪರಿಸ್ಥಿತಿ ಭಿನ್ನವಾಗಿಲ್ಲ. ವಿಶೇಷ ಕಾರ್ಯಕ್ರಮಗಳು ನಡೆದಾಗ ಕೆಲವರು, ಊಟದ ತ್ಯಾಜ್ಯ, ಅಡಿಕೆ ಹಾಳೆತಟ್ಟೆ ರಸ್ತೆ ಬದಿಯಲ್ಲಿ ಎಸೆಯುತ್ತಾರೆ. ತೋಟವೊಂದರ ಬಳಿ ಕೋಳಿ ತ್ಯಾಜ್ಯವನ್ನು ತಂದು ಸುರಿಯಲಾಗುತ್ತದೆ. ಈ ರೀತಿ ಮಾಡುವವರಿಗೆ ಪಂಚಾಯಿತಿ ದಂಡ ವಿಧಿಸಬೇಕು’ ಎನ್ನುತ್ತಾರೆ ರವಿಕುಮಾರ್ ಎಚ್.ಎಲ್.
ಕೃಪಾಕ್ಷ ಕೋಟ್ಯಾನ್, ‘ಬಿರಂಜಿ ಹೊಳೆ ಸೇತುವೆ ಪಕ್ಕದಲ್ಲಿ ಹಾಕುತ್ತಿರುವ ಪ್ಲಾಸ್ಟಿಕ್ ಕಸ ಮತ್ತು ಕೊಳೆತ ತರಕಾರಿ, ಹಣ್ಣುಗಳು ಇನ್ನಿತರ ವಸ್ತುಗಳಿಂದ ದುರ್ವಾಸನೆ ಬರುತ್ತಿದ್ದು, ಮೂಗು ಮುಚ್ಚಿಕೊಂಡು ತೆರಳಬೇಕಾದ ಪರಿಸ್ಥಿತಿ ಎದುರಾಗಿದೆ. ತ್ಯಾಜ್ಯ ವಿಲೇವಾರಿ ಘಟಕ ಸ್ಥಾಪಿಸಿ ಅದರ ಮೂಲಕ ಇಂಧನ ಉತ್ಪಾದಿಸುವ ಯೋಜನೆ ಜಾರಿಗೆ ತರಬೇಕು’ ಎಂದರು.
ಡಿಎಸ್ಎಸ್ ಜಿಲ್ಲಾ ಸಂಚಾಲಕ ತುಡುಕೂರು ಯೋಗೇಶ್, ಕಸ ಬೀಳುವ ಸ್ಥಳದಲ್ಲಿ ಸಿಸಿಟಿವಿ ಕ್ಯಾಮೆರಾವನ್ನು ಅಳವಡಿಸಿದರೆ ಕಸ ಹಾಕುವವರನ್ನು ಪತ್ತೆ ಹಚ್ಚಿ ಕ್ರಮ ಕೈಗೊಳ್ಳಲು ಸುಲಭವಾಗುತ್ತದೆ. ಸ್ಥಳೀಯ ಗ್ರಾಮಗಳ ನಾಗರಿಕರು ಕೂಡ ಗ್ರಾಮದ ಸ್ವಚ್ಛತೆ, ಪರಿಸರದ ಉಳಿವಿಗಾಗಿ ಕೈಜೋಡಿಸಬೇಕು ಎಂದರು.
ಪಂಚಾಯಿತಿ ಅಧ್ಯಕ್ಷೆ ಶ್ರೀದೇವಿ ಕುಮಾರಸ್ವಾಮಿ, ಪಂಚಾಯತಿಯು ಕಸದ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿದ್ದು, ಸ್ವಚ್ಛತೆಗೆ ಆದ್ಯತೆ ನೀಡುವ ನಿಟ್ಟಿನಲ್ಲಿ ಸಮಸ್ಯೆಯ ಕುರಿತು ಸಾಮಾನ್ಯ ಸಭೆಯಲ್ಲಿ ಚರ್ಚಿಸಿ ಪರಿಹಾರದ ಕುರಿತು ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.