ADVERTISEMENT

ರಸ್ತೆ ಸುಧಾರಣೆ; ಗುರುತರ ಕಾರ್ಯ

ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದ ಶಾಸಕ ಬೆಳ್ಳಿಪ್ರಕಾಶ್

​ಪ್ರಜಾವಾಣಿ ವಾರ್ತೆ
Published 28 ಜನವರಿ 2023, 12:50 IST
Last Updated 28 ಜನವರಿ 2023, 12:50 IST
ಕಡೂರು ತಾಲ್ಲೂಕಿನ ಬಂಜೇನಹಳ್ಳಿ ಗ್ರಾಮದಲ್ಲಿ ₹4 ಕೋಟಿ ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ಬೆಳ್ಳಿಪ್ರಕಾಶ್ ಭೂಮಿಪೂಜೆ ನೆರವೇರಿಸಿದರು. ಬಳ್ಳೇಕೆರೆ ಶಶಿ, ರಾಜಣ್ಣ, ರೇಣುಕಪ್ಪ, ಕುಶಕುಮಾರ, ಶಂಕರಮೂರ್ತಿ, ಬಸವರಾಜ್ ಇದ್ದರು
ಕಡೂರು ತಾಲ್ಲೂಕಿನ ಬಂಜೇನಹಳ್ಳಿ ಗ್ರಾಮದಲ್ಲಿ ₹4 ಕೋಟಿ ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ಬೆಳ್ಳಿಪ್ರಕಾಶ್ ಭೂಮಿಪೂಜೆ ನೆರವೇರಿಸಿದರು. ಬಳ್ಳೇಕೆರೆ ಶಶಿ, ರಾಜಣ್ಣ, ರೇಣುಕಪ್ಪ, ಕುಶಕುಮಾರ, ಶಂಕರಮೂರ್ತಿ, ಬಸವರಾಜ್ ಇದ್ದರು   

ಕಡೂರು: ‘ಕ್ಷೇತ್ರಕ್ಕೆ ಶಾಸಕನಾಗಿ ಆಯ್ಕೆಯಾದಾಗ ನೀರು-ಟಾರು-ಸೂರು ಎಂಬ ಪರಿಕಲ್ಪನೆಗೆ ಆದ್ಯತೆ ನೀಡಿ ಯಶಸ್ವಿಯಾಗಿದ್ದೇನೆಂಬ ಆತ್ಮತೃಪ್ತಿ ಇದೆ’ ಎಂದು ಶಾಸಕ ಬೆಳ್ಳಿಪ್ರಕಾಶ್ ತಿಳಿಸಿದರು.

ತಾಲ್ಲೂಕಿನ ಬಂಜೇನಹಳ್ಳಿ ಗ್ರಾಮದಲ್ಲಿ ಶನಿವಾರ ₹4 ಕೋಟಿ ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.

ಶಾಸಕನಾಗಿ ನಾಲ್ಕು ಮುಕ್ಕಾಲು ವರ್ಷಗಳು ಕಳೆದಿವೆ. ಎರಡು ವರ್ಷ ಕೋವಿಡ್ ಹಾವಳಿಯಿಂದಾಗಿ ಕ್ಷೇತ್ರದ ಅಭಿವೃದ್ದಿಗೆ ತೊಡಕು ಉಂಟಾಯಿತು. ನಂತರದ ಎರಡು ಮುಕ್ಕಾಲು ವರ್ಷಗಳ ಅವಧಿಯಲ್ಲಿ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಿದ್ದೇನೆ. ಗ್ರಾಮೀಣ ರಸ್ತೆಗಳ‌ ಸುಧಾರಣೆಯ ನಿಟ್ಟಿನಲ್ಲಿ ಗುರುತರ ಕಾರ್ಯಗಳಾಗಿವೆ. ತಾಲ್ಲೂಕಿನ ಜೋಡಿಲಿಂಗದಹಳ್ಳಿ ರಸ್ತೆಯಿಂದ ಎಸ್.ಎಚ್. 152ಗೆ ಸೇರುವ ರಸ್ತೆ ಮಾರ್ಗದ ಬಂಜೇನಹಳ್ಳಿ, ಚೀಲನಹಳ್ಳಿ, ಮತಿಘಟ್ಟ ಮತ್ತು ಸಾದರಹಳ್ಳಿ ಜಿಲ್ಲಾ ಮುಖ್ಯ ರಸ್ತೆ 9ಕಿ.ಮೀ.ವರೆಗಿನ ಆಯ್ದ ಭಾಗಗಳಲ್ಲಿ ರಸ್ತೆ ಅಭಿವೃದ್ಧಿಗಾಗಿ ಎಸ್‌ಎಚ್‌ಡಿಪಿ ನಾಲ್ಕನೇ ಹಂತದಲ್ಲಿ ₹4 ಕೋಟಿ ಅನುದಾನ ಬಿಡುಗಡೆ ಗೊಂಡಿದೆ. ಬಂಜೇನಹಳ್ಳಿ ಗ್ರಾಮದಿಂದ ರಾಷ್ಟ್ರೀಯ ಹೆದ್ದಾರಿ 206ರವರೆಗೆ 5 ಕಿ.ಮೀ ರಸ್ತೆಯ ಆಯ್ದ ಭಾಗಗಳಲ್ಲಿ ಕಾಮಗಾರಿ ನಡೆಯಲಿದೆ ಎಂದು ಮಾಹಿತಿ ನೀಡಿದರು.

ADVERTISEMENT

ಭದ್ರಾ ಉಪಕಣಿವೆ ಯೋಜನೆಯಿಂದ ತಾಲ್ಲೂಕಿನ ಕೆರೆಗಳಿಗೆ ನೀರು ಬರಲಿದೆ. ಜಲಜೀವನ್ ಮಿಷನ್ ಯೋಜನೆಯಡಿ ಮನೆ ಮನೆಗೆ ಶುದ್ಧ ಕುಡಿಯುವ ನೀರು ದೊರಕಲಿದೆ. ಪ್ರಧಾನಿ ನರೇಂದ್ರ ಮೋದಿಯವರ ಕನಸಿನ ಯೋಜನೆ ಕ್ಷೇತ್ರದಲ್ಲಿಯೂ ಸಾಕಾರಗೊಳ್ಳುತ್ತಿರುವುದು ಹೆಮ್ಮೆಯ ಸಂಗತಿ ಎಂದರು.

‘ನನ್ನ ಅಧಿಕಾರವಧಿಯಲ್ಲಿ ಗ್ರಾಮೀಣ ಭಾಗದ ಅಭಿವೃದ್ಧಿಯ ಜೊತೆಗೆ ಕಡೂರು ಬೀರೂರು ಪಟ್ಟಣಗಳ ಅಭಿವೃದ್ಧಿಗೂ ಹೆಚ್ಚಿನ ಆದ್ಯತೆ ನೀಡಿ ಕೆಲಸ ಮಾಡಲಾಗಿದೆ. ₹46 ಕೋಟಿ ಅಂದಾಜು ವೆಚ್ಚದಲ್ಲಿ ಕೈಗಾರಿಕಾ ಪ್ರದೇಶದ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿವೆ. ಇದರಿಂದಾಗಿ ದೊಡ್ಡ ದೊಡ್ಡ ಕೈಗಾರಿಕೆಗಳು ಸ್ಥಾಪನೆಗೊಳ್ಳುವುದರ ಮೂಲಕ ಹೆಚ್ಚಿನ ಉದ್ಯೋಗಾವಕಾಶಗಳು ಲಭ್ಯವಾಗಲಿವೆ’ ಎಂದರು.

ಬಳ್ಳೇಕೆರೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಬಿ.ಆರ್. ರಾಜಣ್ಣ, ಸದಸ್ಯರಾದ ಕಲ್ಪನಾ ರೇಣುಕಪ್ಪ, ಚಂದ್ರಮ್ಮ ಮಲ್ಲೇಶಪ್ಪ, ರೇಣುಕಮ್ಮ ಮಂಜಪ್ಪ, ಕೆ. ಶೋಭಾ, ತಹಶೀಲ್ದಾರ್ ಜೆ.ಉಮೇಶ್, ಸಿಪಿಐ ಶಿವುಕುಮಾರ್, ಗುತ್ತಿಗೆದಾರ ಹಾಲಪ್ಪ, ಸಿದ್ದಪ್ಪ, ಮುಖಂಡರಾದ ಬಳ್ಳೇಕೆರೆ ಶಶಿ, ಮಲ್ಲಪ್ಪನಹಳ್ಳಿ ಶಶಿಕುಮಾರ್, ಕುಶಕುಮಾರ್, ಶಂಕರಮೂರ್ತಿ, ಬಸವರಾಜ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.