ADVERTISEMENT

ಚಿಕ್ಕಮಗಳೂರು | ಕೆರೆ ಮಣ್ಣು ಅಕ್ರಮ ಮಾರಾಟ: ಕ್ರಮಕ್ಕೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 15 ಏಪ್ರಿಲ್ 2025, 14:39 IST
Last Updated 15 ಏಪ್ರಿಲ್ 2025, 14:39 IST
ಕರ್ನಾಟಕ ಮಾಹಿತಿ ಹಕ್ಕು ಕಾರ್ಯಕರ್ತರು ಹೆಚ್ಚುವರಿ ಜಿಲ್ಲಾಧಿಕಾರಿ ನಾರಾಯಣ ಕನಕರಡ್ಡಿ ಅವರಿಗೆ ಮನವಿ ಸಲ್ಲಿಸಿದರು
ಕರ್ನಾಟಕ ಮಾಹಿತಿ ಹಕ್ಕು ಕಾರ್ಯಕರ್ತರು ಹೆಚ್ಚುವರಿ ಜಿಲ್ಲಾಧಿಕಾರಿ ನಾರಾಯಣ ಕನಕರಡ್ಡಿ ಅವರಿಗೆ ಮನವಿ ಸಲ್ಲಿಸಿದರು   

ಚಿಕ್ಕಮಗಳೂರು: ಕಡೂರು ತಾಲ್ಲೂಕು ಮದಗದ ಕೆರೆಯ ಮಣ್ಣಿನ ಅಕ್ರಮ ಮಾರಾಟ ತಡೆಗಟ್ಟುವಂತೆ ಆಗ್ರಹಿಸಿ ಕರ್ನಾಟಕ ಮಾಹಿತಿ ಹಕ್ಕು ಕಾರ್ಯಕರ್ತರ ಸಂಘ ಜಿಲ್ಲಾಡಳಿತವನ್ನು ಒತ್ತಾಯಿಸಿದೆ.

ಸಂಘಟನೆ ರಾಜ್ಯ ಘಟಕದ ಅಧ್ಯಕ್ಷ ಸೋಮು ನಾಯಕ್ ನೇತೃತ್ವದಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ನಾರಾಯಣ ಕನಕರಡ್ಡಿ ಅವರಿಗೆ ಮನವಿ ಸಲ್ಲಿಸಿದ ಕಾರ್ಯಕರ್ತರು, ಅಕ್ರಮ ಮಣ್ಣು ಸಾಗಣೆ ದಂಧೆ ನಿಯಂತ್ರಿಸಬೇಕು ಎಂದು ಆಗ್ರಹಿಸಿದರು.

ರೈತರೆಂದು ಹೇಳಿಕೊಳ್ಳುವ ಹಲವರು ಮದಗದ ಕೆರೆ ಬಗೆದು ಮಣ್ಣನ್ನು ಟ್ರ್ಯಾಕ್ಟರ್ ಮತ್ತು ಲಾರಿಗಳಲ್ಲಿ ಸಾಗಿಸಿ ಮಾರಾಟ ಮಾಡುತ್ತಿದ್ದಾರೆ. ಈ ದಂಧೆ ಹಗಲು– ರಾತ್ರಿ ಎನ್ನದೇ ಹಲವು ದಿನಗಳಿಂದ ನಡೆಯುತ್ತಿದೆ ಎಂದು ದೂರಿದರು.

ADVERTISEMENT

ಕೆರೆ ಒಡಲು ಬಗೆದು ಮಣ್ಣು ಸಾಗಿಸುತ್ತಿರುವುದರಿಂದಾಗಿ ಮದಗದ ಕೆರೆ ಪಾತ್ರದಲ್ಲಿ ಅಲ್ಲಲ್ಲಿ ದೊಡ್ಡ ದೊಡ್ಡ ಗುಂಡಿಗಳಾಗಿದ್ದು, ಅದರಲ್ಲಿ ಮಕ್ಕಳು, ಜನ, ಜಾನುವಾರುಗಳು ಬಿದ್ದು ಜೀವ ಕಳೆದುಕೊಳ್ಳುತ್ತಿದ್ದಾರೆ ಎಂದರು.

ಅಕ್ರಮವಾಗಿ ಮಣ್ಣು ಬಗೆಯುವುದರಿಂದ ಕೆರೆಯ ಪಾತ್ರ ಬರಿದಾಗುತ್ತಿದೆ. ಮಳೆಗಾಲದ ವೇಳೆ ಅನಾಹುತ ಸಂಭವಿಸುವ ಮುನ್ನ ಜಿಲ್ಲಾಡಳಿತ  ಎಚ್ಚೆತ್ತುಕೊಳ್ಳಬೇಕು. ಮಣ್ಣಿನ ಅಕ್ರಮ ಮಾರಾಟವನ್ನು ತಕ್ಷಣ ತಡೆಗಟ್ಟಬೇಕು ಎಂದು ಆಗ್ರಹಿಸಿದರು.

ಕರ್ನಾಟಕ ಮಾಹಿತಿ ಹಕ್ಕು ಕಾರ್ಯಕರ್ತರ ಸಂಘಟನೆ ಜಿಲ್ಲಾ ಘಟಕದ ಅಧ್ಯಕ್ಷ ಪಿ.ಕುಮಾರ್, ಕಾರ್ಯದರ್ಶಿ ಪಿ.ಲೋಕೇಶ್, ನಿರ್ದೇಶಕ ಶಿವಕುಮಾರ್, ತಾಲೂಕು ಉಪಾಧ್ಯಕ್ಷ ರೂಪೇಶ್ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.