ADVERTISEMENT

‘ಪ್ರಜಾಸೌಧ’ಕ್ಕೆ ₹56 ಕೋಟಿ ಮಂಜೂರಾತಿ: ಶಾಸಕ ತಮ್ಮಯ್ಯ

​ಪ್ರಜಾವಾಣಿ ವಾರ್ತೆ
Published 21 ಮೇ 2025, 16:11 IST
Last Updated 21 ಮೇ 2025, 16:11 IST
ಎಚ್‌.ಡಿ.ತಮ್ಮಯ್ಯ
ಎಚ್‌.ಡಿ.ತಮ್ಮಯ್ಯ   

ಚಿಕ್ಕಮಗಳೂರು: ‘ವಿಧಾನಸಭಾ ಕ್ಷೇತ್ರದಲ್ಲಿ ಕಳೆದ 2 ವರ್ಷದಲ್ಲಿ ಒಟ್ಟು ₹529 ಕೋಟಿ ವೆಚ್ಚದ ವಿವಿಧ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದ್ದು, ಅದರಲ್ಲಿ ಬಹಳಷ್ಟು ಕಾಮಗಾರಿಗಳು ಮುಕ್ತಾಯ ಹಂತದಲ್ಲಿವೆ’ ಎಂದು ಶಾಸಕ ಎಚ್.ಡಿ.ತಮ್ಮಯ್ಯ ಹೇಳಿದರು.

‘ಅಧಿಕಾರಕ್ಕೆ ಬಂದು 2 ವರ್ಷದಲ್ಲಿ ನುಡಿದಂತೆ 5ಗ್ಯಾರಂಟಿಗಳನ್ನು ಪೂರೈಸಿದ್ದೇವೆ. 6ನೇ ಗ್ಯಾರಂಟಿಯಾಗಿ ಭೂ ಗ್ಯಾರಂಟಿ ಮೂಲಕ ಹೊಸ ಕಂದಾಯ ಗ್ರಾಮಗಳಿಗೆ ಹಕ್ಕುಪತ್ರ ನೀಡಲಿದ್ದೇವೆ. ಬಡವರ, ಶೋಷಿತರ ಏಳಿಗೆಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಯೋಜನೆ ಅನುಷ್ಠಾನ ಮಾಡುತ್ತಿದ್ದಾರೆ’ ಎಂದು ಸುದ್ದಿಗೋಷ್ಠಿಯಲ್ಲಿ ಬುಧವಾರ ತಿಳಿಸಿದರು.

ಭದ್ರಾ ಉಪಕಣಿವೆ ಯೋಜನೆಯಲ್ಲಿ ಚಿಕ್ಕಮಗಳೂರು ವಿಭಾಗಕ್ಕೆ ದೊರೆಯುವ ಹಣ ಹೊರತುಪಡಿಸಿ ₹529 ಕೋಟಿ ಅನುದಾನವನ್ನು ಸರ್ಕಾರ ಒದಗಿಸಿದೆ. ಬಸವ ತತ್ವ ಪೀಠದ ಮೂಲಸೌಕರ್ಯಗಳ ಅಭಿವೃದ್ಧಿಗೆ ₹50 ಲಕ್ಷ, ಜಿಲ್ಲಾಧಿಕಾರಿ ಕಚೇರಿ ಪ್ರಜಾಸೌಧಕ್ಕೆ ₹56 ಕೋಟಿ ಮಂಜೂರಾತಿ ದೊರೆತಿದೆ ಎಂದು ಹೇಳಿದರು.

ADVERTISEMENT

ಕ್ಷೇತ್ರದಲ್ಲಿ ರಾಜ್ಯ ಹೆದ್ದಾರಿಗಳ ಅಭಿವೃದ್ಧಿಗೆ ₹6.50 ಕೋಟಿ, ಜಿಲ್ಲಾ ಮುಖ್ಯ ರಸ್ತೆ ಮತ್ತು ಇತರೆ ರಸ್ತೆಗಳ ಅಭಿವೃದ್ಧಿಗೆ ₹41.5 ಕೋಟಿ, ಕಳೆದ ವರ್ಷ ನೆರೆ ಹಾವಳಿಯಿಂದ ಹಾನಿಯಾದ ರಸ್ತೆ ಸೇತುವೆ ಅಭಿವೃದ್ಧಿಗೆ ₹290 ಲಕ್ಷ, ಜಿಲ್ಲಾ ಗ್ರಾಹಕರ ಆಯೋಗದ ಕಟ್ಟಡದ ನವೀಕರಣಕ್ಕೆ ₹36.26 ಲಕ್ಷ ಬಿಡುಗಡೆಯಾಗಿದೆ ಎಂದರು.

ನಗರದ ಗ್ರಾಮೀಣ ಬಸ್ ನಿಲ್ದಾಣದ ಉನ್ನತೀಕರಣಕ್ಕೆ ₹19.87 ಕೋಟಿ ಮೊತ್ತಕ್ಕೆ ಆಡಳಿತಾತ್ಮಕ ಅನುಮೋದನೆ ದೊರೆತಿದೆ. ಮುಖ್ಯಮಂತ್ರಿಗಳ ವಿಶೇಷ ಅನುದಾನದಡಿ ರಸ್ತೆ, ಸೇತುವೆ, ಚರಂಡಿ ಕಾಮಗಾರಿಗೆ ₹10 ಕೋಟಿ ಬಿಡುಗಡೆ ಮಾಡಲಾಗಿದೆ. ಎಸ್ಸಿ, ಎಸ್ಟಿ ಕಾರ್ಯಕ್ರಮದಡಿ ₹1.50 ಕೋಟಿ, ಗ್ರಾಮೀಣ ರಸ್ತೆ ನಿರ್ವಹಣೆಗೆ ₹88 ಲಕ್ಷ, ಜಲಸಂಪನ್ಮೂಲ ಇಲಾಖೆಗೆ ವಿವಿಧ ಜಲಮೂಲಗಳ ಅಭಿವೃದ್ಧಿಗೆ ₹25 ಕೋಟಿ ಅನುಮೋದನೆ ನೀಡಲಾಗಿದೆ. ಭದ್ರಾ ಉಪಕಣಿವೆ ಯೋಜನೆ ಅಡಿ ಕೆರೆ ತುಂಬಿಸುವ ಕಾಮಗಾರಿಗೆ ₹407.50 ಕೋಟಿ ಮೊತ್ತಕ್ಕೆ ಟೆಂಡರ್ ಕರೆಯಲು ತೀರ್ಮಾನಿಸಲಾಗಿದೆ ಎಂದು ವಿವರಿಸಿದರು.

ಜಿಲ್ಲಾ ಶತಮಾನೋತ್ಸವ ಕ್ರೀಡಾಂಗಣ ಅಭಿವೃದ್ಧಿಗೆ ಈ ಹಿಂದೆ ₹3.37 ಕೋಟಿ ಬಿಡುಗಡೆಯಾಗಿತ್ತು. ಬಾಕಿ ₹1.93 ಕೋಟಿ ಜತೆಗೆ ಕಾಮಗಾರಿ ಪೂರ್ಣಗೊಳಿಸಲು ಅಗತ್ಯವಿರುವ ₹5 ಕೋಟಿಯನ್ನು ಸಿಎಸ್‌ಆರ್ ನಿಧಿಯಡಿ ನೀಡಲು ಜಿಲ್ಲಾ ಸಚಿವರು ಒಪ್ಪಿದ್ದಾರೆ. ಶೀಘ್ರದಲ್ಲಿ ಕಾಮಗಾರಿ  ಪೂರ್ಣಗೊಳಿಸಲಾಗುವುದು. ಕಲ್ಯಾಣ ನಗರದ ಒಳಾಂಗಣ ಕ್ರೀಡಾಂಗಣದ ಬಾಸ್ಕೆಟ್‌ ಬಾಲ್ ಅಂಕಣಕ್ಕೆ ಮರದ ನೆಲಹಾಸು ಅಳವಡಿಸುವ ಕಾಮಗಾರಿಗೆ ₹75 ಲಕ್ಷ ಅನುದಾನ ಒದಗಿಸಲಾಗಿದೆ ಎಂದರು.

ಕ್ಷೇತ್ರದ 216 ಗ್ರಾಮಗಳ ಫಲಾನುಭವಿಗಳಿಗೆ  ಕಂದಾಯ ಗ್ರಾಮ ಹಾಗೂ ಉಪಗ್ರಾಮಗಳ ಘೋಷಣೆಯೊಂದಿಗೆ ಹಕ್ಕುಪತ್ರ ನೀಡಲಾಗುವುದು ಎಂದರು.

ಗ್ಯಾರಂಟಿ ಪ್ರಾಧಿಕಾರದ ಜಿಲ್ಲಾ ಘಟಕದ ಅಧ್ಯಕ್ಷ ಶಿವಾನಂದಸ್ವಾಮಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಪಿ.ಮಂಜೇಗೌಡ, ಮುಖಂಡರಾದ ಮಹಡಿಮನೆ ಸತೀಶ್, ತನೋಜ್, ಮಲ್ಲೇಶಸ್ವಾಮಿ, ಪ್ರವೀಣ್, ಸಾದಬ್, ರೂಬಿನ್‌ ಮೊಸೆಸ್ ಸುದ್ದಿಗೋಷ್ಠಿಯಲ್ಲಿ ಇದ್ದರು.

ನಗರದ ರಸ್ತೆ ಡಾಂಬರ್‌ಗೆ ₹10 ಕೋಟಿ

ನಗರದ ವಿವಿಧ ರಸ್ತೆ ಡಾಂಬರೀಕರಣಕ್ಕೆ ₹10 ಕೋಟಿ ವಿಶೇಷ ಅನುದಾನ ಬಂದಿದೆ ಎಂದು ಎಚ್.ಡಿ.ತಮ್ಮಯ್ಯ ತಿಳಿಸಿದರು. ಪ್ರಗತಿ ಕಾಲೋನಿ ಯೋಜನೆ ಅಡಿ ₹2.50 ಕೋಟಿ ಮಲ್ಲೇನಹಳ್ಳಿ ಮೊರಾರ್ಜಿ ಶಾಲಾ ಕಟ್ಟಡಕ್ಕೆ ₹22 ಕೋಟಿ ಸೇರಿದಂತೆ ಕ್ಷೇತ್ರದಲ್ಲಿ ಒಟ್ಟು ₹529 ಕೋಟಿ ಮೊತ್ತದ ಕಾಮಗಾರಿಗಳು ನಡೆಯುತ್ತಿವೆ ಎಂದು ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.