ADVERTISEMENT

ಶೃಂಗೇರಿ: 5ರಂದು ಪಂಚಲೋಹ ಮೂರ್ತಿ ಹಸ್ತಾಂತರ ಕೈಂಕರ್ಯ

ಕಾಶ್ಮೀರದಲ್ಲಿ ಶಾರದಾ ದೇಗುಲ ನಿರ್ಮಾಣ – ಶೇ 75 ಕಾಮಗಾರಿ ಪೂರ್ಣ

​ಪ್ರಜಾವಾಣಿ ವಾರ್ತೆ
Published 2 ಅಕ್ಟೋಬರ್ 2022, 5:22 IST
Last Updated 2 ಅಕ್ಟೋಬರ್ 2022, 5:22 IST
ಕಾಶ್ಮೀರದ ಗಡಿಯ ಕಿಶನ್‌ ಗಂಗಾ ಕಣಿವೆ ಪ್ರದೇಶದಲ್ಲಿ ನಿರ್ಮಿಸುತ್ತಿರುವ ಶಾರದಾ ದೇಗುಲ.
ಕಾಶ್ಮೀರದ ಗಡಿಯ ಕಿಶನ್‌ ಗಂಗಾ ಕಣಿವೆ ಪ್ರದೇಶದಲ್ಲಿ ನಿರ್ಮಿಸುತ್ತಿರುವ ಶಾರದಾ ದೇಗುಲ.   

ಚಿಕ್ಕಮಗಳೂರು: ಕಾಶ್ಮೀರದ ಗಡಿ ಭಾಗದ ಕಿಶನ್‌ ಗಂಗಾ ಕಣಿವೆಯಲ್ಲಿ ಶಾರದಾ ದೇವಿ ದೇಗುಲ ನಿರ್ಮಾಣ ಕೈಗೆತ್ತಿಕೊಂಡಿದ್ದು, ಶೃಂಗೇರಿಯ ಶಾರದಾ ಸನ್ನಿಧಿಯಲ್ಲಿ ವಿಜಯದಶಮಿ ದಿನ ಪಂಚಲೋಹ ಮೂರ್ತಿ ಹಸ್ತಾಂತರ ನಡೆಯಲಿದೆ.

ಕಾಶ್ಮೀರದ ಸೇವ್‌ ಶಾರದಾ ಸಮಿತಿಯವರು ಶೃಂಗೇರಿಗೆ ಬಂದು ಪಂಚಲೋಹ ವಿಗ್ರಹ ಪಡೆಯುವರು. ಈ ನಿಟ್ಟಿನಲ್ಲಿ ಸಿದ್ಧತೆಗಳು ನಡೆದಿವೆ.

ಸಮಿತಿ ಮುಖ್ಯಸ್ಥ ರವೀಂದ್ರ ಪಂಡಿತ ‘ಪ್ರಜಾವಾಣಿ’ಯೊಂದಿಗೆ ಫೋನ್‌ನಲ್ಲಿ ಮಾತನಾಡಿ, ‘ಸಮಿತಿಯ 12 ಮಂದಿ ಶೃಂಗೇರಿಗೆ ಹೋಗಿ ಪಂಚಲೋಹ ಮೂರ್ತಿ ಪಡೆಯುತ್ತೇವೆ. ಕಾಶ್ಮೀರದಲ್ಲಿ ದೇಗುಲ ನಿರ್ಮಾಣ ಕಾರ್ಯ ಪೂರ್ಣ ಮುಗಿದಿಲ್ಲ. ಹೀಗಾಗಿ, ಸದ್ಯಕ್ಕೆ ಮೂರ್ತಿಯನ್ನು ಶೃಂಗೇರಿ ಅಥವಾ ಬೆಂಗಳೂರಿನಲ್ಲಿ ಇಡುತ್ತೇವೆ’ ಎಂದು ತಿಳಿಸಿದರು.

ADVERTISEMENT

‘ದೇಗುಲ ನಿರ್ಮಾಣಕ್ಕೆ ₹ 1.5 ಕೋಟಿ ವೆಚ್ಚ ಅಂದಾಜಿಸಲಾಗಿದೆ. ಈವರೆಗೆ ₹1 ಕೋಟಿ ಖರ್ಚಾಗಿದೆ. ಗರ್ಭಗುಡಿ 12X12 ವಿಸ್ತೀರ್ಣ ಇದೆ. ದೇಗುಲಕ್ಕೆ ನಾಲ್ಕು ದಿಕ್ಕುಗಳಲ್ಲಿ ನಾಲ್ಕು ಬಾಗಿಲುಗಳು ಇವೆ. ಚಾವಣಿ, ನೆಲಹಾಸು, ಅಲಂಕಾರ ಕಾಮಗಾರಿಗಳು ಬಾಕಿ ಇವೆ’ ಎಂದರು.

‘ದೇಗುಲಕ್ಕೆ ಸಾಗುವ ಹಾದಿ ಹದಗೆಟ್ಟಿದೆ. ರಸ್ತೆ ನಿರ್ಮಾಣಕ್ಕೆ ಜಮ್ಮು–ಕಾಶ್ಮೀರ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದೇವೆ. ವಿಸ್ತೃತ ಯೋಜನಾ ವರದಿ (ಡಿಪಿಆರ್‌) ಸಿದ್ಧವಾಗಿದೆ. ಈವರೆಗೆ ಕಾಮಗಾರಿಗೆ ಕ್ರಮ ವಹಿಸಿಲ್ಲ’ ಎಂದರು.

‘2021 ಡಿಸೆಂಬರ್‌ 2ರಂದು ದೇಗುಲ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಲಾಗಿತ್ತು. 2023ರ ನವರಾತ್ರಿಗೆ ಉದ್ಘಾಟನೆ ನೆರವೇರಿಸಲು ಉದ್ದೇಶಿಸಿದ್ದೇವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.