ಬಾಳೆಹೊನ್ನೂರು: ಸಾಮಾಜಿಕ ಬದ್ಧತೆ, ಯೋಗ್ಯತೆ ಇದ್ದವರು, ಜನರ ಬದುಕನ್ನು ಬದಲಾಯಿಸುವ ಮನಃಸ್ಥಿತಿ ಹೊಂದಿರುವವರು ಜನಪ್ರತಿನಿಧಿಗಳಾಗಬೇಕು ಎಂದು ಕರ್ನಾಟಕ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮೀ ಚೌಧರಿ ಹೇಳಿದರು.
ಕಲಾರಂಗ ಕ್ರೀಡಾಂಗಣದಲ್ಲಿ ಭೀಮ್ ಆರ್ಮಿ ಭಾರತ್ ಏಕತಾ ಮಿಷನ್ ಬಾಳೆಹೊನ್ನೂರು ಹೋಬಳಿ ಸಮಿತಿ ವತಿಯಿಂದ ಭಾನುವಾರ ಆಯೋಜಿಸಿದ್ದ ಅಂಬೇಡ್ಕರ್ ಜಯಂತಿ ಉದ್ಘಾಟಿಸಿ ಅವರು ಮಾತನಾಡಿದರು.
ಹೆಣ್ಣು ಮಕ್ಕಳು ಸಾವಿರಾರು ವರ್ಷಗಳಿಂದ ಗುಲಾಮಗಿರಿಯಲ್ಲಿದ್ದಾರೆ ಶಿಕ್ಷಣದಿಂದ ತಿಳಿವಳಿಕೆ, ಸಂಘಟನೆಯಿಂದ ಹೋರಾಟ ಸಾಧ್ಯ. ದೇಶದಲ್ಲಿ ದರ್ಮಗಳ ನಡುವೆ ಬೆಂಕಿ ಹಚ್ಚುವ ಕೆಲಸ ನಡೆಯುತ್ತಿದೆ. ಇದು ಸರಿಯಲ್ಲ. ಹೆಣ್ಣು ಮಕ್ಕಳ ಮೇಲಿನ ದೌರ್ಜನ್ಯ ತಡೆಯಲು ಪ್ರತಿ ಗ್ರಾಮದಲ್ಲೂ ‘ಕಾವಲು ಸಮಿತಿ’ ರಚಿಸಬೇಕು. ಹೆಣ್ಣು ಮಕ್ಕಳು, ಮಹಿಳೆಯರ ಸಭೆ ನಡೆಸಿ ಸಮಸ್ಯೆಗಳನ್ನು ಆಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ರಾಜ್ಯ ಕಾಂಗ್ರೆಸ್ ವಕ್ತಾರ ಸುಧೀರ್ ಕುಮಾರ್ ಮುರೊಳ್ಳಿ ಮಾತನಾಡಿ, ಅಂಬೇಡ್ಕರ್ ಹೆಸರಿನಲ್ಲಿ ಭವನ ನಿರ್ಮಾಣ ಮಾಡಿದರೆ ಸಾಲದು. ತತ್ವಗಳನ್ನು ಮೈಗೂಡಿಸಿಕೊಳ್ಳಬೇಕು. ಸಮಾಜದ ಕಟ್ಟಡೆಯ ವ್ಯಕ್ತಿಯೂ ಉನ್ನತ ಹುದ್ದೆ ಗಳಿಸಬೇಕು. ಸಂವಿಧಾನ ದೇಶದ ಅತಿ ದೊಡ್ಡ ಶಕ್ತಿ. ಅದರಿಂದಲೇ ನಾವಿಂದು ಸಮ ಸಮಾಜದ ಕನಸು ಕಾಣುತ್ತಿದ್ದೇವೆ ಎಂದರು.
ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.
ಸಭೆಯ ನಂತರ ಮಹಿಳೆಯರ ಅಹವಾಲು ಆಲಿಸಿ ಪರಿಶಿಷ್ಟ ಜಾತಿ ಮತ್ತು ಪಂಗಡದ ಹಾಸ್ಟೆಲ್ ಹಾಗೂ ಸರ್ಕಾರಿ ಪ್ರಾಥಮಿಕ ಆಸ್ಪತ್ರೆಗೆ ಭೇಟಿ ನೀಡಿದ ನಾಗಲಕ್ಷ್ಮೀ ಕುಂದು ಕೊರತೆ ಬಗ್ಗೆ ವಿಚಾರಿಸಿದರು.
ನರಸಿಂಹರಾಜಪುರ ತಹಶೀಲ್ದಾರ್ ತನುಜಾ ಸವದತ್ತಿ, ಬಿ.ಕಣಬೂರು ಗ್ರಾಮ ಪಂಚಾಯಿತಿ ಸದಸ್ಯೆ ಅಂಬುಜಾ, ಎಂ.ಎಸ್.ಅರುಣೇಶ್, ಶಾಸಕರ ಕಾರ್ಯಾಲಯದ ಅಪ್ತ ಕಾರ್ಯದರ್ಶಿ ರಾಜೇಂದ್ರ, ಭೀಮ್ ಆರ್ಮಿ ಹೋಬಳಿ ಅಧ್ಯಕ್ಷ ಎನ್.ಉಮೇಶ್, ರವಿಕೊರನಹಳ್ಳಿ, ಮಾಲತೇಶ, ಗಿರೀಶ್, ಹೊನ್ನೇಶ್, ಸತೀಶ್ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.