ADVERTISEMENT

ಕನಕ ಚಿಂತನೆಗಳಿಂದ ಸಮಾಜ ದೂರವಾಗಿದೆ: ಕುರುಬ ಮುಖಂಡ ಬೇಸರ

ಕನಕ ಜಯಂತ್ಯುತ್ಸವದಲ್ಲಿ ಕುರುಬ ಸಮಾಜದ ಸಂತೋಷ್ ಕುಮಾರ್ ಬೇಸರ

​ಪ್ರಜಾವಾಣಿ ವಾರ್ತೆ
Published 12 ನವೆಂಬರ್ 2022, 1:23 IST
Last Updated 12 ನವೆಂಬರ್ 2022, 1:23 IST
ಬೀರೂರು ಪುರಸಭೆ ಕಚೇರಿಯಲ್ಲಿ ಶುಕ್ರವಾರ ನಡೆದ ಕನಕ ಜಯಂತಿ ಕಾರ್ಯಕ್ರಮದಲ್ಲಿ ಪುರಸಭೆ ಅಧ್ಯಕ್ಷ ಎಂ.ಪಿ.ಸುದರ್ಶನ್, ಉಪಾಧ್ಯಕ್ಷೆ ಮೀನಾಕ್ಷಮ್ಮ, ಸದಸ್ಯರು ಮತ್ತು ಅಧಿಕಾರಿಗಳು ಇದ್ದರು.
ಬೀರೂರು ಪುರಸಭೆ ಕಚೇರಿಯಲ್ಲಿ ಶುಕ್ರವಾರ ನಡೆದ ಕನಕ ಜಯಂತಿ ಕಾರ್ಯಕ್ರಮದಲ್ಲಿ ಪುರಸಭೆ ಅಧ್ಯಕ್ಷ ಎಂ.ಪಿ.ಸುದರ್ಶನ್, ಉಪಾಧ್ಯಕ್ಷೆ ಮೀನಾಕ್ಷಮ್ಮ, ಸದಸ್ಯರು ಮತ್ತು ಅಧಿಕಾರಿಗಳು ಇದ್ದರು.   

ಬೀರೂರು: ‘ಜಾತಿ ವ್ಯವಸ್ಥೆ ಮತ್ತು ಶ್ರೇಣೀಕೃತ ಸಮಾಜದ ಬಗೆಗಿನ ಅಸಮಾಧಾನವನ್ನು ಕೀರ್ತನೆಗಳ ಮೂಲಕ ವ್ಯಕ್ತ ಪಡಿಸಿದ್ದ ಕನಕದಾಸರ ಬುದ್ಧಿಮಾತುಗಳನ್ನು ಮರೆತಿರುವ ಇಂದಿನ ಸಮಾಜವು ಅವರ ಚಿಂತನೆಗಳಿಂದ ದೂರವಾಗಿದೆ’ ಎಂದು ಕುರುಬ ಸಮಾಜದ ಮುಖಂಡ ಸಂತೋಷ್ ಕುಮಾರ್ ಬೇಸರ ವ್ಯಕ್ತಪಡಿಸಿದರು.

ಪುರಸಭೆ ಕಚೇರಿಯಲ್ಲಿ ಶುಕ್ರವಾರ ನಡೆದ ಕನಕ ಜಯಂತಿ ಕಾರ್ಯಕ್ರಮದಲ್ಲಿ ಕನಕದಾಸರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಅವರು ಮಾತನಾಡಿದರು.

‘ಸಮಾಜದ ಎಲ್ಲ ಸ್ತರಗಳಲ್ಲಿಯೂ ಇಂದು ಜಾತಿ, ಕುಲ ಎನ್ನುವುದು ಹಾಸುಹೊಕ್ಕಾಗಿದೆ. ಸಮಸಮಾಜ ನಿರ್ಮಿಸಬೇಕಾಗಿದ್ದ ಸರ್ಕಾರ ಹಾಗೂ ರಾಜಕೀಯ ಪಕ್ಷಗಳು, ಜಾತಿ ಆಧಾರದಲ್ಲಿ ರಾಜಕೀಯ, ಶೈಕ್ಷಣಿಕ, ಔದ್ಯೋಗಿಕ ಮೀಸಲಾತಿ ಕಲ್ಪಿಸುವ ವ್ಯವಸ್ಥೆಗೆ ಶರಣಾಗಿವೆ. ಎಲ್ಲಾ ಕ್ಷೇತ್ರಗಳಲ್ಲಿಯೂ ಜಾತಿ, ವರ್ಗಗಳ ಮಾಹಿತಿ ಕೇಳುವ ವ್ಯವಸ್ಥೆ ಇರುವಾಗ, ಕನಕದಾಸರ ಚಿಂತನೆಗಳನ್ನು ಅಳವಡಿಸಿಕೊಳ್ಳಬೇಕು ಎನ್ನುವುದು ಭಾಷಣಕ್ಕೆ ಸೀಮಿತವಾಗುತ್ತದೆ. ದಾಸರ ಚಿಂತನೆಗಳಿಗೆ ನಾವು ಗೌರವ ಕೊಡುತ್ತೇವೆಯೇ ಎಂಬ ಆತ್ಮಾವಲೋಕನ ಮಾಡಬೇಕಾಗಿದೆ’ ಎಂದರು.

ADVERTISEMENT

ಅಧ್ಯಕ್ಷತೆ ವಹಿಸಿದ್ದ ಪುರಸಭೆ ಅಧ್ಯಕ್ಷ ಎಂ.ಪಿ. ಸುದರ್ಶನ್, ‘ಕುಲಕಟ್ಟಳೆಯ ನಿಯಮಗಳಿಗೆ ಹೊರತಾದ, ಮಾನವೀಯ ಮೌಲ್ಯಗಳ ಮೇಲ್ಮೆಯ ಕನಸುಕಂಡ ಕನಕದಾಸರ ವಿಚಾರಗಳು ನಮ್ಮ ಕಲುಷಿತ ಮನಸ್ಸನ್ನು ತಿಳಿಗೊಳಿಸಲು ಪ್ರೇರಕ ಶಕ್ತಿಯಾಗಲಿ’ ಎಂದು ಹಾರೈಸಿದರು.

ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಬಿ.ಆರ್. ಮೋಹನ್ ಕುಮಾರ್, ಪುರಸಭೆ ಸದಸ್ಯೆ ವನಿತಾ ಮಧು, ಆರೋಗ್ಯ ನಿರೀಕ್ಷಕ ಲಕ್ಷ್ಮಣ್, ನಾಮನಿರ್ದೇಶಿತ ಸದಸ್ಯ ಮಲ್ಲಿಕಾರ್ಜುನ್, ಕುರುಬ ಸಮಾಜದ ಮುಖಂಡ ವಿನಾಯಕ್ ಮಾತನಾಡಿದರು.

ಉಪಾಧ್ಯಕ್ಷೆ ಮೀನಾಕ್ಷಮ್ಮ, ಸದಸ್ಯರಾದ ಎನ್.ಎಂ. ನಾಗರಾಜ್, ರಘು, ಮಾನಿಕ್ ಬಾಷಾ, ಶ್ರೀಧರ್, ಕಂದಾಯ ಅಧಿಕಾರಿ ಯೋಗೀಶ್, ಗಿರಿರಾಜ್, ದೀಪಕ್, ಬಾವಿಮನೆ ಮಧು, ಬಿ.ಎನ್. ಮೋಹನ್, ವೆಂಕಟೇಶ್, ಪ್ರಸಾದ್ ಇದ್ದರು.

ಕಡೂರಿನಲ್ಲಿ ಸರ್ಕಾರಿ ಕಾರ್ಯಕ್ರಮದ ನಂತರ ಶಾಸಕ ಬೆಳ್ಳಿಪ್ರಕಾಶ್ ಬೀರೂರು ಪುರಸಭೆಗೆ ಭೇಟಿ ನೀಡಿ ಕನಕದಾಸರ ಭಾವಚಿತ್ರಕ್ಕೆ ಗೌರವನಮನ ಸಲ್ಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.