ADVERTISEMENT

ಮಹನೀಯರು ಯಾವುದೇ ಒಂದು ಜಾತಿಗೆ ಸೀಮಿತವಲ್ಲ: ನೇಂಪೆ ದೇವರಾಜ್

​ಪ್ರಜಾವಾಣಿ ವಾರ್ತೆ
Published 27 ಜೂನ್ 2022, 13:33 IST
Last Updated 27 ಜೂನ್ 2022, 13:33 IST
ಶೃಂಗೇರಿಯ ಆದಿಚುಂಚನಗಿರಿ ಸಮುದಾಯ ಭವನದಲ್ಲಿ ಸೋಮವಾರ ಆಯೋಜಿಸಿದ ಕಾರ್ಯಕ್ರಮದಲ್ಲಿ ಕೆಂಪೇಗೌಡ ಭಾವಚಿತ್ರಕ್ಕೆ ತಹಶೀಲ್ದಾರ್ ಡಾ.ಎಸ್.ವಿ ಲೋಕೆಶ್ ಪುಷ್ಪರ್ಚನೆ ಮಾಡಿದರು.
ಶೃಂಗೇರಿಯ ಆದಿಚುಂಚನಗಿರಿ ಸಮುದಾಯ ಭವನದಲ್ಲಿ ಸೋಮವಾರ ಆಯೋಜಿಸಿದ ಕಾರ್ಯಕ್ರಮದಲ್ಲಿ ಕೆಂಪೇಗೌಡ ಭಾವಚಿತ್ರಕ್ಕೆ ತಹಶೀಲ್ದಾರ್ ಡಾ.ಎಸ್.ವಿ ಲೋಕೆಶ್ ಪುಷ್ಪರ್ಚನೆ ಮಾಡಿದರು.   

ಶೃಂಗೇರಿ: ‘ಕೆಂಪೇಗೌಡರು, ಕನಕದಾಸರು, ವಾಲ್ಮೀಕಿ, ಮಡಿವಾಳ ಮಾಚಿದೇವ ಮುಂತಾದ ಮಹಾನೀಯರು ಯಾವುದೇ ಒಂದು ಜಾತಿಗೆ ಸೀಮಿತವಾದವರಲ್ಲ. ಸಮಾಜಮುಖಿಯಾಗಿ ದುಡಿದು ಆದರ್ಶ ಮೆರೆದವರಾಗಿದ್ದಾರೆ’ ಎಂದು ಲೇಖಕ ನೇಂಪೆ ದೇವರಾಜ್ ಹೇಳಿದರು.

ಶೃಂಗೇರಿಯ ಆದಿಚುಂಚನಗಿರಿ ಸಮುದಾಯ ಭವನದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ, ತಾಲ್ಲೂಕು ಒಕ್ಕಲಿಗರ ಸಂಘ ಮತ್ತು ಯುವ ಒಕ್ಕಲಿಗರ ವೇದಿಕೆ ಸೋಮವಾರ ಆಯೋಜಿಸಿದ ಕೆಂಪೇಗೌಡ ಜಯಂತಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಕೇಂಪೆಗೌಡರು ಮಾಡಿದ ಸಾಧನೆಯನ್ನು ನಾವು ಅರಿತಾಗ ಜಯಂತಿ ಆಚರಣೆಗೆ ಅರ್ಥ ಬರುತ್ತದೆ. ಇತಿಹಾಸಕಾರ ಪ್ರಭುದ್ಧನಾಗಿದ್ದಾಗ ಮಾತ್ರ ಆತನ ರಚನೆಗಳು ಜಾತ್ಯತೀತವಾಗಿ ಮತ್ತು ವಸ್ತುನಿಷ್ಠವಾಗಿ ಇರುತ್ತದೆ. ನಮ್ಮ ಹಿರಿಯರು ಜಾತಿ-ಭೇದವನ್ನು ಎಂದೂ ಆಚರಣೆಗೆ ತಂದಿರಲಿಲ್ಲ. ಕೇಂಪೇಗೌಡರು ಜನರಿಗೆ ವಾಸಿಸಲು ಯೋಗ್ಯವಾಗಲು ಹಲವಾರು ಪೇಟೆಗಳನ್ನು ನಿರ್ಮಿಸಿ, ಬೇರೆಬೇರೆ ವೃತ್ತಿಯವರಿಗೆ ವ್ಯಾಪಾರ ಮಾಡಲು ಅನುವು ಮಾಡಿಕೊಟ್ಟ ಮಹನೀಯರು’ ಎಂದರು.

ADVERTISEMENT

ತಾಲ್ಲೂಕು ಒಕ್ಕಲಿಗರ ಸಂಘದ ಗೇರ್‌ಬೈಲ್ ಶಂಕರಪ್ಪ ಮಾತನಾಡಿ, ‘ಕೆಂಪೇಗೌಡರು ಜಾತ್ಯತೀತವಾಗಿ ಬೆಂಗಳೂರು ನಿರ್ಮಾಣ ಮಾಡಿದ್ದರಿಂದ ಅವರಿಗೆ ನಾಡಪ್ರಭು ಎಂಬ ಬಿರುದು ಬರಲು ಕಾರಣವಾಯಿತು. ಅವರ ಆದರ್ಶಗಳನ್ನು ನಾವು ಅಳವಡಿಸಿಕೊಂಡಲ್ಲಿ ಮುಂದಿನ ಪೀಳಿಗೆಗೆ ಅವರ ಆದರ್ಶ ದಾರಿದೀಪ ಆಗುತ್ತದೆ’ ಎಂದರು.

ಅಧ್ಯಕ್ಷತೆ ವಹಿಸಿದ್ದ ತಹಶೀಲ್ದಾರ್ ಡಾ.ಎಸ್.ವಿ ಲೋಕೆಶ್ ಮಾತನಾಡಿ, ‘ಹಿಂದಿನ ಕಾಲದಲ್ಲಿ ತಂತ್ರಜ್ಞಾನ ಮತ್ತು ಯಂತ್ರೋಪಕರಣಗಳ ಕೊರತೆ ಇದ್ದರೂ ಬೆಂಗಳೂರು ನಗರವನ್ನು ನಿರ್ಮಿಸಿದ ಕೆಂಪೇಗೌಡರ ಕರ್ತತ್ವ ಶಕ್ತಿಯು ಅನುಪಮವಾಗಿದೆ’ ಎಂದರು.

ವಿದ್ಯಾರಣ್ಯಪುರ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುನೀತಾ ಗಣೇಶ್ ಆಚಾರ್ಯ ಉದ್ಘಾಟಿಸಿದರು. ಹೊಳೆಕೊಪ್ಪ ವೈದ್ಯ ಡಾ.ನಾಗರಾಜ್ ಹಾಗೂ ಪ್ರೌಢ ಶಿಕ್ಷಣ ಇಲಾಖೆಯ ನಿವೃತ್ತ ನಿರ್ದೇಶಕ ಎಂ.ಚಂದ್ರಶೇಖರಯ್ಯ ಅವರನ್ನು ಗೌರವಿಸಲಾಯಿತು.

ಯುವ ಒಕ್ಕಲಿಗ ಸಂಘದ ಅಧ್ಯಕ್ಷ ಶಿರಾಂಕ್ ಹೆಗ್ಡೆ, ಬಿಇಒ ಎನ್.ಜಿ.ರಾಘವೇಂದ್ರ, ತಾಲ್ಲೂಕು ಪಂಚಾಯಿತಿ ಅಧಿಕಾರಿ ಪಾರ್ವತಿ, ತಾಲ್ಲೂಕು ಒಕ್ಕಲಿಗರ ಸಂಘದ ಪದಾಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.