ADVERTISEMENT

ತಾ.ಪಂ.ಗೆ ₹32.25 ಲಕ್ಷ ಬಿಡುಗಡೆ

ತರೀಕೆರೆ ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಪದ್ಮಾವತಿ ಮಾಹಿತಿ

​ಪ್ರಜಾವಾಣಿ ವಾರ್ತೆ
Published 27 ಫೆಬ್ರುವರಿ 2021, 3:08 IST
Last Updated 27 ಫೆಬ್ರುವರಿ 2021, 3:08 IST
ತರೀಕೆರೆ ಪಟ್ಟಣದಲ್ಲಿ ನಡೆದ ತಾಲ್ಲೂಕು ಪಂಚಾಯಿತಿ ಸಾಮಾನ್ಯ ಸಭೆಯ ಅಧ್ಯಕ್ಷತೆಯನ್ನು ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಪದ್ಮಾವತಿ ವಹಿಸಿದ್ದರು.
ತರೀಕೆರೆ ಪಟ್ಟಣದಲ್ಲಿ ನಡೆದ ತಾಲ್ಲೂಕು ಪಂಚಾಯಿತಿ ಸಾಮಾನ್ಯ ಸಭೆಯ ಅಧ್ಯಕ್ಷತೆಯನ್ನು ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಪದ್ಮಾವತಿ ವಹಿಸಿದ್ದರು.   

ತರೀಕೆರೆ: ಸರ್ಕಾರವು ₹ 32.25 ಲಕ್ಷವನ್ನು ಅನಿರ್ಬಂಧಿತ ಅನುದಾನ ವಾಗಿ ತಾಲ್ಲೂಕು ಪಂಚಾಯಿತಿಗೆ ಬಿಡುಗಡೆ ಮಾಡಿದ್ದು, ತ್ವರಿತವಾಗಿ ಕ್ರಿಯಾ ಯೋಜನೆ ರೂಪಿಸಬೇಕಿದೆ ಎಂದು ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಪದ್ಮಾವತಿ ಹೇಳಿದರು.

ತಾಲ್ಲೂಕು ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಅವರು ಮಾತನಾಡಿ, ‘ಪ್ರಸಕ್ತ ಸಾಲಿನ ಹಣಕಾಸು ವರ್ಷ ಮುಕ್ತಾಯ ಹಂತದಲ್ಲಿದ್ದು, ಕಾಮಗಾರಿಗಳ ಬಿಲ್ ಪಾವತಿ ಕೆಲಸವನ್ನು ಶನಿವಾರವೂ ಅಧಿಕಾರಿಗಳು ಕರ್ತವ್ಯಕ್ಕೆ ಹಾಜರಾಗಿ ನಿರ್ವಹಿಸಬೇಕು ಎಂದು ಸೂಚಿಸಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಹೊನ್ನೇಶ ಕುಮಾರ್ ಮಾತನಾಡಿ, ‘ಪಟ್ಟಣದ ಕಸ್ತೂರ ಬಾ ಬಾಲಕಿಯರ ವಸತಿ ಶಾಲೆ ಕಟ್ಟಡ ಶಿಥಿಲಗೊಂಡಿದ್ದು, ಆತಂಕದ ಹಿನ್ನೆಲೆಯಲ್ಲಿ ಈ ವರ್ಷ ದಾಖಲಾತಿಯಾಗಿಲ್ಲ. ಬೇರೆ ಕಟ್ಟಡಕ್ಕೆ ಅವಕಾಶ ಕಲ್ಪಿಸಿ’ ಎಂದು ಸಭೆಗೆ ಮನವಿ ಮಾಡಿದರು.

ADVERTISEMENT

‘ಲಕ್ಕವಳ್ಳಿಯಲ್ಲಿಯಲ್ಲಿನ ಸರ್ಕಾರಿ ಶಾಲೆಗೆ ಮಕ್ಕಳು ದಾಖಲಾತಿ ಇಲ್ಲದ ಕಾರಣ ಕಟ್ಟಡ ಬಳಸಿಕೊಳ್ಳುವ ಬಗ್ಗೆ ಅಧಿಕಾರಿಗಳು ಪರೀಶಿಲಿಸಿ ವರದಿ ನೀಡಿ’ ಎಂದು ಪದ್ಮಾವತಿ ಸೂಚಿಸಿದರು.

‘ಹಾಸ್ಟೆಲ್‌ಗಳಲ್ಲಿ ಮಕ್ಕಳು ದಾಖಲಾಗುತ್ತಿದ್ದು, ಕೋವಿಡ್–19 ಪರೀಕ್ಷಾ ವರದಿಯ ಅನ್ವಯ ದಾಖಲಿಸಿಕೊಂಡು ಆಗಾಗ ಮಕ್ಕಳಿಗೆ ಆರೋಗ್ಯ ತಪಾಸಣೆ ನಡೆಸಲಾಗುತ್ತಿದೆ’ ಎಂದು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಪರಶಿವಮೂರ್ತಿ ಹಾಗೂ ಹಿಂದುಳಿದ ವರ್ಗಗಳ ವಿಸ್ತರಣಾಧಿಕಾರಿ ರಾಜೇಶ್ವರಿ ಮಾಹಿತಿ ನೀಡಿದರು.

ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಚಂದ್ರಶೇಖರ್ ಮಾತನಾಡಿ, ‘ಕೋವಿಡ್–19 ಲಸಿಕೆಯನ್ನು ಅವಶ್ಯಕತೆ ಯಿದ್ದವರಿಗೂ ನೀಡಲಾಗುತ್ತಿದೆ. ಯಾವುದೇ ಅಡ್ಡ ಪರಿಣಾಮದ ವರದಿಯಾಗಿಲ್ಲ’ ಎಂದು ಹೇಳಿದರು.

ಉಪಾಧ್ಯಕ್ಷೆ ಶಿವಮ್ಮ, ಸ್ಥಾಯಿ ಸಮಿತಿ ಅಧ್ಯಕ್ಷ ಹಾಲಾ ನಾಯ್ಕ, ಸದಸ್ಯರಾದ ಕೆಂಪೇಗೌಡ, ರಾಮಪ್ಪ, ಮಂಜುಳಾ ಬಾಯಿ ತಾಲ್ಲೂಕು ಪಂಚಾಯಿತಿ ಇಒ ನಾರಾಯಣಸ್ವಾಮಿ ಸೇರಿದಂತೆ ಸದಸ್ಯರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.