ಮೂಡಿಗೆರೆ: ಎಲ್ಲಾ ಧರ್ಮದ ತುಳು ಭಾಷಿಗರನ್ನು ಒಂದೇ ವೇದಿಕೆಯಲ್ಲಿ ಒಗ್ಗೂಡಿಸುವ ಸಲುವಾಗಿ 16ನೇ ವರ್ಷದ ತುಳು ವೈಭವ ಕಾರ್ಯಕ್ರಮವನ್ನು ಶುಕ್ರವಾರ (ಫೆ.21) ಸಂಜೆ 5.45ಕ್ಕೆ ಇಲ್ಲಿ ಆಯೋಜಿಸಲಾಗಿದೆ ಎಂದು ತುಳುಕೂಟದ ಅಧ್ಯಕ್ಷ ಹಮ್ಜದ್ ಹೇಳಿದರು.
ಪಟ್ಟಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘15 ವರ್ಷಗಳಿಂದ ಮಲೆನಾಡಿನಲ್ಲಿ ವಾಸವಿರುವ ಎಲ್ಲಾ ಧರ್ಮದ ತುಳು ಭಾಷಿಗರು ಒಂದೆಡೆ ಸೇರಿ ತುಳುಕೂಟ ರಚಿಸಿ, ಪ್ರತಿ ವರ್ಷ ತುಳು ವೈಭವ ಕಾರ್ಯಕ್ರಮವನ್ನು ಅದ್ಧೂರಿಗಾಗಿ ನಡೆಸಿಕೊಂಡು ಬರಲಾಗಿದೆ. ಈ ವರ್ಷವೂ ತುಳು ವೈಭವ ಕಾರ್ಯಕ್ರಮಕ್ಕೆ ಸಿದ್ಧತೆ ನಡೆದಿದೆ. ಕಾರ್ಯಕ್ರಮವನ್ನು ಮಂಗಳೂರಿನ ಚಿರಾಯು ಆಯುರ್ವೇದ ಕ್ಲಿನಿಕ್‍ನ ಡಾ. ಆಶಾ ಜ್ಯೋತಿ ರೈ ಉದ್ಘಾಟಿಸುವರು. ಶಾಸಕಿ ನಯನಾ ಮೋಟಮ್ಮ ಅಧ್ಯಕ್ಷತೆ ವಹಿಸುವರು. ವಿಧಾನಸಭಾಧ್ಯಕ್ಷ ಯು.ಟಿ. ಖಾದರ್, ಸಂಸದ ಕೋಟಾ ಶ್ರೀನಿವಾಸ ಪೂಜಾರಿ, ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ. ಜಾರ್ಜ್, ಉಪ ಸಭಾಪತಿ ಎಂ.ಕೆ. ಪ್ರಾಣೇಶ್, ಮಂಗಳೂರಿನ ತುಳು ಅಕಾಡೆಮಿ ಅಧ್ಯಕ್ಷ ತಾರನಾಥ್ ಶೆಟ್ಟಿ ಕಾಪಿಕಾಡ್, ಚಿಕ್ಕಮಗಳೂರು ಸಂತ ಜೋಸೆಫರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ವಂ. ಸ್ವಾಮಿ ಮಾರ್ಷಲ್ ಪಿಂಟೊ, ಮಂಗಳೂರಿನ ವಾಗ್ಮಿ ಮಹಮ್ಮದ್ ಭಾಗವಹಿಸುವರು.
ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದ ಸಾಧಕರನ್ನು ಗೌರವಿಸಲಾಗುವುದು. ಬೇಲೂರಿನ ಚೈತನ್ಯ ಕಲಾವಿದರಿಂದ ಅಷ್ಟಮಿ ತುಳು ನಾಟಕ ಪ್ರದರ್ಶನ ನಡೆಯಲಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ಜಾನಪ್ಪ, ಕಾರ್ಯದರ್ಶಿ ಎಂ.ಎಸ್. ಗೋಪಾಲಶೆಟ್ಟಿ, ಹಸೇನರ್, ಶಿಹಾಬುದ್ದೀನ್, ಸುಂದರ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.