ADVERTISEMENT

ಮತ ಕಳವು ಪ್ರಕರಣ: ರಾಹುಲ್ ವಿರುದ್ಧ ಟೀಕೆ ಸರಿಯಲ್ಲ; ಎಚ್.ಎಚ್. ದೇವರಾಜ್

​ಪ್ರಜಾವಾಣಿ ವಾರ್ತೆ
Published 14 ಆಗಸ್ಟ್ 2025, 6:01 IST
Last Updated 14 ಆಗಸ್ಟ್ 2025, 6:01 IST
ಎಚ್‌.ಎಚ್.ದೇವರಾಜ್
ಎಚ್‌.ಎಚ್.ದೇವರಾಜ್   

ಚಿಕ್ಕಮಗಳೂರು: ಮತ ಕಳವು ಬಗ್ಗೆ ರಾಹುಲ್ ಗಾಂಧಿ ಮಾಡಿರುವ ಆರೋಪ ಸತ್ಯಕ್ಕೆ ಹತ್ತಿರವಾದುದು. ಆದರೆ, ಅದನ್ನು ಬಿಜೆಪಿ ನಾಯಕರು ಲಘುವಾಗಿ ಪರಿಗಣಿಸಿರುವುದು ವಿಪರ್ಯಾಸ ಎಂದು ಕಾಂಗ್ರೆಸ್ ಜಿಲ್ಲಾ ವಕ್ತಾರ ಎಚ್.ಎಚ್. ದೇವರಾಜ್ ಹೇಳಿದರು.

ಈ ಹಿಂದೆ ನಡೆದ ಲೋಕಸಭಾ ಮತ್ತು ವಿಧಾನಸಭಾ ಚುನಾವಣೆಗಳಲ್ಲಿ ವ್ಯಾಪಕವಾದ ಮತ ಕಳವು ನಡೆದಿರುವುದು ಈಗ ಸ್ಪಷ್ಟವಾಗಿದೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನೇ ಟೀಕಿಸುವುದು ಸರಿಯಲ್ಲ ಎಂದು ಸುದ್ದಿಗೋಷ್ಠಿಯಲ್ಲಿ ಮಂಗಳವಾರ ತಿಳಿಸಿದರು.

‘ರಾಹುಲ್ ಗಾಂಧಿ ಅವರು ಮಹಾರಾಷ್ಟ್ರ ಚುನಾವಣೆಯಲ್ಲಿ ಚುನಾವಣಾ ಆಯೋಗದ ಕಾರ್ಯವೈಖರಿ ಹಾಗೂ ಮತ ಕಳವು ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದರು. ಮತದಾರರ ವಿವರ ಒಳನ್ನೊಳಗೊಂಡ ಎಲ್ಲಾ ಮಾಹಿತಿಯೂ ಚುನಾವಣಾ ಆಯೋಗದ ಬಳಿ ಇದೆ. ಮಹಾರಾಷ್ಟ್ರ ಚುನಾವಣೆ ಸಂದರ್ಭದಲ್ಲಿ ಮತದಾರರ ಪಟ್ಟಿಯಲ್ಲಿ ವ್ಯಾಪಕವಾದ ಅಕ್ರಮ ನಡೆದಿತ್ತು. ಅದರ ಬಗ್ಗೆ ರಾಹುಲ್ ಅವರು ಆಕ್ಷೇಪ ವ್ಯಕ್ತಪಡಿಸಿದಾಗ ಬಿಜೆಪಿ ಮತ್ತು ಚುನಾವಣಾ ಆಯೋಗ ಅದನ್ನು ಲಘುವಾಗಿ ನೋಡುತ್ತಿರುವುದು ವಿಪರ್ಯಾಸ’ ಎಂದು ಹೇಳಿದರು.

ADVERTISEMENT

ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಕಾಂಗ್ರೆಸ್ ಕನಿಷ್ಠ 16 ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆ ಇತ್ತು. ನಮ್ಮ ಆಂತರಿಕ ಸಮೀಕ್ಷೆಯಿಂದ ಆ ವಿಶ್ವಾಸ ನಮ್ಮಲ್ಲಿ ಮೂಡಿತ್ತು. ಮಹದೇವಪುರ ವಿಧಾನಸಭಾ ಕ್ಷೇತ್ರದ ಚುನಾವಣಾ ದಾಖಲೆಗಳನ್ನು ವೈಜ್ಞಾನಿಕವಾಗಿ ಅಧ್ಯಯನ ಮಾಡಿ ರಾಹುಲ್ ಅವರು ಎಲ್ಲರಿಗೂ ಅರ್ಥವಾಗುವಂತೆ ಮತ ಕಳವಿನ ವಿಷಯವನ್ನು ಜನರ ಮುಂದಿಟ್ಟಿದ್ದಾರೆ ಎಂದರು.

‘ಚುನಾವಣೆ ಸಂದರ್ಭದಲ್ಲಿ ಬಿಎಲ್‌ಒ ಅವರಿಂದ ಆದಿಯಾಗಿ ಜಿಲ್ಲಾಧಿಕಾರಿ ತನಕ ಎಲ್ಲರೂ ಆಯೋಗದ ನಿಯಂತ್ರಣದಲ್ಲಿ ಇರುತ್ತಾರೆ. ಸರ್ಕಾರದ ನಿಯಂತ್ರಣ ಇರುವುದಿಲ್ಲ. ಆಯೋಗದ ಲೋಪವನ್ನು ರಾಹುಲ್ ಗಾಂಧಿ ಹೇಳುತ್ತಿದ್ದರೆ, ಆಯೋಗದ ವಕ್ತಾರರಾಗಿ ಬಿಜೆಪಿ ಕೆಲಸ ಮಾಡುತ್ತಿದೆ. ಅಸಲಿ ಸ್ನೇಹ ಏನೆಂಬುದು ಈಗ ಅರ್ಥವಾಗುತ್ತಿದೆ’ ಎಂದು ಹೇಳಿದರು.

ಚುನಾವಣಾ ಆಯೋಗ ಕೂಡಲೇ ಪ್ರಕರಣ ದಾಖಲಿಸಿಕೊಳ್ಳಬೇಕು. ರಾಹುಲ್ ಅವರು ಮಾಡಿರುವ ಆರೋಪಗಳ ಬಗ್ಗೆ ಸಮಗ್ರ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.

ಕಾಂಗ್ರೆಸ್ ಮುಖಂಡ ಲೋಕೇಶ್, ಪ್ರಕಾಶ್, ಸಂತೋಷ್, ಸಿದ್ದಪ್ಪ, ಹಿರೇಮಗಳೂರು ರಾಮಚಂದ್ರ ಇದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.