ADVERTISEMENT

ರಾಷ್ಟ್ರೀಯ ಹೆದ್ದಾರಿ ಬದಿ ಕಾಡಾನೆಗಳು ಪ್ರತ್ಯಕ್ಷ

ಅಣಜೂರು, ಬಿದರಹಳ್ಳಿಯಲ್ಲಿ ಮೂಡಿದ ಆತಂಕ

​ಪ್ರಜಾವಾಣಿ ವಾರ್ತೆ
Published 7 ಅಕ್ಟೋಬರ್ 2022, 6:14 IST
Last Updated 7 ಅಕ್ಟೋಬರ್ 2022, 6:14 IST
ಮೂಡಿಗೆರೆ ತಾಲ್ಲೂಕಿನ ಮುತ್ತಿಗೆಪುರ ಗ್ರಾಮದ ಬಳಿ ಗುರುವಾರ ಬೆಳಿಗ್ಗೆ ಮನೆಯಂಗಳಕ್ಕೆ ಬಂದ ಕಾಡಾನೆ.
ಮೂಡಿಗೆರೆ ತಾಲ್ಲೂಕಿನ ಮುತ್ತಿಗೆಪುರ ಗ್ರಾಮದ ಬಳಿ ಗುರುವಾರ ಬೆಳಿಗ್ಗೆ ಮನೆಯಂಗಳಕ್ಕೆ ಬಂದ ಕಾಡಾನೆ.   

ಮೂಡಿಗೆರೆ: ತಾಲ್ಲೂಕಿನಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ 173 ರ ಅಣಜೂರು ಹಾಗೂ ಬಿದರಹಳ್ಳಿ ಗ್ರಾಮದಲ್ಲಿ ಗುರುವಾರ ಬೆಳಿಗ್ಗೆ ಕಾಡಾನೆಗಳು ಕಾಣಿಸಿಕೊಂಡಿದ್ದು ಸುತ್ತಮುತ್ತಲ ಗ್ರಾಮದ ಜನರಲ್ಲಿ ಆತಂಕ ಮೂಡಿಸಿದೆ.

ಸಕಲೇಶಪುರದ ಗಡಿ ಭಾಗದಿಂದ ಬಂದಿರಬಹುದು ಎಂದು ಶಂಕಿಸಲಾಗಿರುವ ಮೂರು ಕಾಡಾನೆಗಳು ಗುರುವಾರ ನಸುಕಿನಲ್ಲಿ ತಾಲ್ಲೂಕಿನ ಅಣಜೂರು ಗ್ರಾಮಕ್ಕೆ ಪ್ರವೇಶಿಸಿದ್ದು, ಅಣಜೂರು, ಮುತ್ತಿಗೆಪುರ ಗ್ರಾಮಗಳಲ್ಲಿ ಸಂಚರಿಸಿ ಅಪಾರ ಪ್ರಮಾಣದ ಬೆಳೆ ನಾಶಗೊಳಿಸಿವೆ. ಬೆಳಿಗ್ಗೆ 7 ರ ಸುಮಾರಿಗೆ ಮುತ್ತಿಗೆಪುರದಲ್ಲಿ ರಾಷ್ಟ್ರೀಯ ಹೆದ್ದಾರಿ 173 ನ್ನು ದಾಟಿದ್ದು, ವಾಹನ ಸವಾರರು ಆತಂಕಗೊಂಡಿದ್ದರು. ವಿಷಯ ತಿಳಿದು ಸ್ಥಳಕ್ಕೆ ಬಂದ ಅರಣ್ಯ ಇಲಾಖೆ ಅಧಿಕಾರಿಗಳು ಪಟಾಕಿ ಸಿಡಿಸಿ ಓಡಿಸಲು ಪ್ರಯತ್ನಿಸಿದರು.

ಮೂರು ಕಾಡಾನೆಗಳಲ್ಲಿ ಎರಡು ಕಾಡಾನೆಗಳು ಮುತ್ತಿಗೆಪುರ, ಕೃಷ್ಣಾಪುರದ ಹಳೇಕೋಟೆ ಮೂಲಕ ಬಿದರಹಳ್ಳಿ ಗ್ರಾಮಕ್ಕೆ ಬಂದಿದ್ದು, ರಾಷ್ಟ್ರೀಯ ಹೆದ್ದಾರಿಯನ್ನು ದಾಟಿ ಲೋಕವಳ್ಳಿ ಗ್ರಾಮದ ಕಡೆಗೆ ಚಲಿಸಿವೆ. ಕಾಡಾನೆಗಳು ದಾಳಿ ನಡೆಸಿದ ಬೆನ್ನಲ್ಲೇ ಅರಣ್ಯ ಇಲಾಖೆ ಅಧಿಕಾರಿಗಳು ಧ್ವನಿವರ್ಧಕದ ಮೂಲಕ ಸಾರ್ವಜನಿಕರಿಗೆ ಮನೆಯಿಂದ ಹೊರಗೆ ಬರದಂತೆ ಎಚ್ಚರಿಕೆ ಸಂದೇಶ ನೀಡಿದರು. ಲೋಕವಳ್ಳಿಯಲ್ಲಿದ್ದ ಕಾಡಾನೆಗಳನ್ನು ಓಡಿಸಲು ಅರಣ್ಯ ಇಲಾಖೆ ಸಿಬ್ಬಂದಿ ಸಿಬ್ಬಂದಿ ಹರ ಸಾಹಸ ಪಡುತ್ತಿದ್ದಾರೆ.

ADVERTISEMENT

‘ಮೂರು ದಿನಗಳ ಹಿಂದೆ ಪಟ್ಟಣಕ್ಕೆ ಬಂದಿದ್ದ ಕಾಡಾನೆ, ಈಗ ರಾಷ್ಟ್ರಿಯ ಹೆದ್ದಾರಿ ಬದಿಯಲ್ಲಿಯೇ ಕಾಣಿಸಿಕೊಂಡಿವೆ. ಸುತ್ತಮುತ್ತಲಿನ ಗ್ರಾಮದಲ್ಲಿ ಭಯದ ವಾತಾವರಣ ಸೃಷ್ಟಿಯಾಗಿದೆ. ಕೇವಲ ಕಾಡಾನೆಗಳನ್ನು ಓಡಿಸಿದರೆ ಸಮಸ್ಯೆ ಬಗೆಹರಿಯುವುದಿಲ್ಲ. ಬದಲಾಗಿ ಕಾಡಾನೆಗಳನ್ನು ಸ್ಥಳಾಂತರಿಸಿ ಮತ್ತೆ ಬಾರದಂತೆ ಶಾಶ್ವತ ಪರಿಹಾರ ಕಲ್ಪಿಸಬೇಕು.

ಈಗಾಗಲೇ ಕಾಡಾನೆಗಳಿಂದ ಬೆಳೆ ಹಾನಿ ಮಾತ್ರವಲ್ಲ, ಜೀವ ಹಾನಿ ಉಂಟಾಗಿರುವುದರಿಂದ ಅರಣ್ಯ ಇಲಾಖೆಯು ತ್ವರಿತವಾಗಿ ಕ್ರಮ ಕೈಗೊಳ್ಳಬೇಕು’ ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.