ADVERTISEMENT

ಅನುಮೋದನೆ ನೀಡಿದ್ದು ಕೃಷ್ಣ

ಭದ್ರಾ ಮೇಲ್ದಂಡೆ; ಎಚ್.ಡಿ. ಕುಮಾರಸ್ವಾಮಿ ಹೇಳಿಕೆಗೆ ತಿರುಗೇಟು

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2012, 9:42 IST
Last Updated 19 ಡಿಸೆಂಬರ್ 2012, 9:42 IST

ಹಿರಿಯೂರು: ಭದ್ರಾ ಮೇಲ್ದಂಡೆ ಯೋಜನೆಗೆ ಆಡಳಿತಾತ್ಮಕ ಅನುಮೋದನೆ ನೀಡಿದ್ದು ಅಂದಿನ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಎಂದು ಮಾಜಿ ಸಚಿವ ಟಿ.ಬಿ. ಜಯಚಂದ್ರ ತಿಳಿಸಿದರು.

ಮಾಜಿ ಮುಖ್ಯಮಂತ್ರಿ ಎಸ್. ನಿಜಲಿಂಗಪ್ಪ ನಿಧನರಾದ ಸಂದರ್ಭದಲ್ಲಿ ಅವರ ಕೊನೆ ಆಸೆಯಂತೆ ಈ ಕ್ರಮವನ್ನು ಎಸ್.ಎಂ. ಕೃಷ್ಣ ಕೈಗೊಂಡಿದ್ದರು ಎಂದು ಮಂಗಳವಾರ ಖಾಸಗಿ ಕಾರ್ಯಕ್ರಮಕ್ಕೆ ಆಗಮಿಸಿದ್ದ ಅವರು ಸುದ್ದಿಗಾರರಿಗೆ ತಿಳಿಸಿದರು.

ಹಿರಿಯೂರಿನಲ್ಲಿ ನಡೆದ ಜೆಡಿಎಸ್ ಕಾರ್ಯಕರ್ತರ ಸಮಾವೇಶದಲ್ಲಿ ಭದ್ರಾ ಮೇಲ್ದಂಡೆ ಯೋಜನೆಗೆ ಆಡಳಿತಾತ್ಮಕ ಮಂಜೂರಾತಿ ನೀಡಿದ್ದು ನಾನು ಎಂಬ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹೇಳಿಕೆಗೆ ಈ ಪ್ರತಿಕ್ರಿಯೆ ನೀಡಿದರು.

ಭದ್ರಾ ಮೇಲ್ದಂಡೆ ಯೋಜನೆ ಕುರಿತಂತೆ ನಿಜಲಿಂಗಪ್ಪ ಅವರ ನಿಧನಕ್ಕೆ ಮುಂಚೆ ಆರೇಳು ಯೋಜನೆ ಸಿದ್ಧಗೊಳಿಸಲಾಗಿತ್ತು. ಆದರೂ, ನಾನಾ ಕಾರಣಗಳಿಂದ ಮುಂದೆ ಹಾಕಲಾಗುತ್ತಿತ್ತು. ಈ ಯೋಜನೆ ಜಾರಿ ಕಷ್ಟ ಎಂಬ ಅಭಿಪ್ರಾಯಕ್ಕೆ ಬರಲಾಗಿತ್ತು. 1976ರಲ್ಲಿ `ಬಚಾವತ್' ತೀರ್ಪಿನಲ್ಲಿ ಮಧ್ಯ ಕರ್ನಾಟಕದ ತುಮಕೂರು, ಚಿತ್ರದುರ್ಗ ಜಿಲ್ಲೆಗಳಿಗೆ ಕುಡಿಯುವ ನೀರು ಕೊಡಬೇಕು ಎಂಬ ತೀರ್ಪು ಬಂದಿತು. ತೀರ್ಪು ಬಂದರೂ ನೀರು ಕೊಡುವುದು ಹೇಗೆ ಎಂಬ ಸಮಸ್ಯೆ ಹಾಗೆಯೇ ಉಳಿಯಿತು. ಸ್ವಲ್ಪ ಗೊಂದಲವಿದ್ದರೂ ್ಙ 4,350 ಕೋಟಿ ವೆಚ್ಚದ ಯೋಜನೆಗೆ ಎಸ್.ಎಂ. ಕೃಷ್ಣ ಅವರು ಆಡಳಿತಾತ್ಮಕ ಮಂಜೂರಾತಿ ಕೊಟ್ಟರು. ಈ ಯೋಜನೆಗೆ ಎಸ್ಸೆನ್ ಕನಸು ಹಾಗೂ ಎಸ್.ಎಂ. ಕೃಷ್ಣ ತೋರಿಸಿದ ಬದ್ಧತೆ ಕಾರಣ ಎಂದರು.

2004ರಲ್ಲಿ ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದ ಆಡಳಿತದ ಅವಧಿಯಲ್ಲಿ ಮುಖ್ಯಮಂತ್ರಿ ಧರಂಸಿಂಗ್ ಯೋಜನೆಯ ಸಾಧಕ-ಬಾಧಕಗಳ ಬಗ್ಗೆ ವರದಿ ನೀಡಲು ಕೆ.ಸಿ. ರೆಡ್ಡಿ ನೇತೃತ್ವದಲ್ಲಿ ನೀರಾವರಿ ಸಮಿತಿ ರಚಿಸಿದರು. ಶಿರಾದಿಂದ ರೆಡ್ಡಿಬಳಿ ತಾವು ನಿಯೋಗ ಕೊಂಡೊಯ್ದು, ಸುರಂಗ ಮಾರ್ಗದ ಮೂಲಕ ನೀರಾವರಿ ಯೋಜನೆ ಜಾರಿ ಮಾಡಿರುವ ಮಾಹಿತಿ ನೀಡಿದ್ದೆವು. ಇದಾದ ನಂತರ ರೆಡ್ಡಿ ಅವರು ಭದ್ರಾ ನಾಲೆ ಆಧುನೀಕರಣದಿಂದ 13 ಟಿಎಂಸಿ ನೀರು, ಹಾಗೂ ಭದ್ರಾ ಅಲೋಕೇಷನ್‌ನಲ್ಲಿನ 10 ಟಿಎಂಸಿ ಸೇರಿಸಿ ಒಟ್ಟು 23 ಟಿಎಂಸಿ ನೀರು ಲಭ್ಯವಾಗುವುದನ್ನು ಮನಗಂಡು, ಚಿತ್ರದುರ್ಗ ಶಾಖಾ ನಾಲೆ ಹಾಗೂ ತುಮಕೂರು ಶಾಖಾನಾಲೆ ನಿರ್ಮಿಸಿ ನೀರು ಪೂರೈಕೆ ಮಾಡಲು ಸಾಧ್ಯವಿದೆ ಎಂದು ರೆಡ್ಡಿ ವರದಿ ನೀಡಿದರು ಎಂದರು.

ಕೃಷ್ಣ `ಐ' ತೀರ್ಪಿನ ಪ್ರಕಾರ ಮಾಸ್ಟರ್‌ಪ್ಲಾನ್ ರೂಪಿತವಾದರೆ ಇನ್ನೂ ಐದಾರು ಟಿಎಂಸಿ ನೀರು ಭದ್ರಾ ಮೇಲ್ದಂಡೆ ಯೋಜನೆಗೆ ಸಿಗುವ ಸಾಧ್ಯತೆ ಇದೆ. ಮುಖ್ಯಮಂತ್ರಿ ಅಧ್ಯಕ್ಷರಾಗಿರುವ ನೀರಾವರಿ ಸಮಿತಿಯಲ್ಲಿ ಚಿತ್ರದುರ್ಗ ನಾಲೆಗೆ 10, ತುಮಕೂರು ನಾಲೆಗೆ 10 ಟಿಎಂಸಿ ನೀರು ಹಂಚಲು ಕರ್ನಾಟಕ ನೀರಾವರಿ ನಿಗಮ ಒಪ್ಪಿಗೆ ಕೊಟ್ಟಿದೆ. ಸಹಜ ಹರಿವಿನ ಮೂಲಕ ಅಜ್ಜಂಪುರದಿಂದ ಈ ಪ್ರದೇಶಕ್ಕೆ ನೀರು ಹರಿಸಬಹುದಾಗಿದೆ ಎಂದು ತಿಳಿಸಿದರು.

ರಾಜಕೀಯ ಕಾರಣಕ್ಕಾಗಿ ಸಾಧ್ಯ ಯೋಜನೆ ವಿರೋಧಿಸುವ ಪ್ರವೃತ್ತಿ ಕೆಲವರಲ್ಲಿದೆ. ಹೇಮಾವತಿ ನೀರನ್ನು ಶಿರಾಕ್ಕೆ ತರಲು ಸಾಧ್ಯವೇ ಇಲ್ಲ ಎಂದವರು, ಭದ್ರಾ ಮೇಲ್ದಂಡೆ ಯೋಜನೆ ಜಾರಿ ಅಸಂಭವ ಎಂದು ರಾಜಕೀಯ ನಿವೃತ್ತಿ ಘೋಷಣೆ ಮಾಡುತ್ತೇನೆ ಎಂದವರು ಇನ್ನೂ ರಾಜಕೀಯದಲ್ಲಿದ್ದಾರೆ. ಎಂದು ವ್ಯಂಗ್ಯವಾಡಿದರು.

ಹೇಮಾವತಿ ಈಗಾಗಲೇ ಶಿರಾಕ್ಕೆ ಬಂದಾಗಿದೆ. ಕೃಷ್ಣಾ ಕೊಳ್ಳ ನೀರಾವರಿ ಹೋರಾಟ ಸಮಿತಿ ರಚಿಸಿಕೊಂಡು ನಿರಂತರ ಹೋರಾಟ ನಡೆಸಿದ ಫಲವಾಗಿ ಈಗ ತುಮಕೂರು ಶಾಖಾನಾಲೆಗೆ ತಾತ್ವಿಕ ಒಪ್ಪಿಗೆ ಸಿಕ್ಕಿದೆ. ಕೆಲವೇ ವರ್ಷಗಳಲ್ಲಿ ಭದ್ರೆಯ ನೀರೂ ಹರಿಯಲಿದೆ. ಓಟಿಗಾಗಿ ರಾಜಕೀಯ ಮಾಡದೇ, ಬಯಲುಸೀಮೆಯ ಜನರ ಬದುಕು ಹಸನುಗೊಳಿಸುವ ಇಚ್ಛಾಶಕ್ತಿ ಪ್ರದರ್ಶಿಸ ಬೇಕಿದೆ. ಅದನ್ನು ನಾನು ಮಾಡಿದ್ದೇನೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.