ADVERTISEMENT

ಅಭ್ಯರ್ಥಿಗಳ ಭವಿಷ್ಯ ಇಂದು ನಿರ್ಧಾರ

​ಪ್ರಜಾವಾಣಿ ವಾರ್ತೆ
Published 4 ಜನವರಿ 2011, 10:05 IST
Last Updated 4 ಜನವರಿ 2011, 10:05 IST

ಚಿತ್ರದುರ್ಗ: ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯ್ತಿ ಕ್ಷೇತ್ರಗಳ ಮತ ಎಣಿಕೆ ಜಿಲ್ಲಾ ಕೇಂದ್ರದಲ್ಲಿ ಜ. 4ರಂದು ಬೆಳಿಗ್ಗೆ 8ರಿಂದ ಆರಂಭವಾಗಲಿದ್ದು, ಅಭ್ಯರ್ಥಿಗಳು ಹಾಗೂ ಎಣಿಕೆ ಏಜೆಂಟರು ನಿಷೇಧಿಸಿದ ವಸ್ತುಗಳನ್ನು ತರದಂತೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಅಮ್ಲಾನ್ ಆದಿತ್ಯ ಬಿಸ್ವಾಸ್ ತಿಳಿಸಿದ್ದಾರೆ. ಮೊಳಕಾಲ್ಮುರು ಹಾಗೂ ಚಿತ್ರದುರ್ಗ ತಾಲ್ಲೂಕಿನ ಜಿಲ್ಲಾ ಪಂಚಾಯತ್ ಹಾಗೂ ತಾಲ್ಲೂಕು ಪಂಚಾಯತ್ ಕ್ಷೇತ್ರಗಳ ಮತ ಎಣಿಕೆ ಸರ್ಕಾರಿ ಕಲಾ ಕಾಲೇಜಿನಲ್ಲಿ ನಡೆಯಲಿದೆ.

ಹೊಳಲ್ಕೆರೆ ಹಾಗೂ ಹಿರಿಯೂರು ತಾಲ್ಲೂಕಿನ ಜಿ.ಪಂ ಹಾಗೂ ತಾ.ಪಂ ಕ್ಷೇತ್ರಗಳ ಮತ ಎಣಿಕೆ ಸರ್ಕಾರಿ ವಿಜ್ಞಾನ ಕಾಲೇಜಿನಲ್ಲಿ ನಡೆಯಲಿದೆ. ಹೊಸದುರ್ಗ ಮತ್ತು ಚಳ್ಳಕೆರೆ ತಾಲ್ಲೂಕುಗಳ ಜಿ.ಪಂ. ಮತ್ತು ತಾ.ಪಂ. ಕ್ಷೇತ್ರಗಳ ಮತ ಎಣಿಕೆ ಸರ್ಕಾರಿ ಬಾಕಲರ ಪದವಿಪೂರ್ವ ಕಾಲೇಜಿನಲ್ಲಿ ನಡೆಯಲಿದೆ. ಜಿಲ್ಲಾ ಪಂಚಾಯ್ತಿ ಕ್ಷೇತ್ರಕ್ಕೆ ಅಭ್ಯರ್ಥಿಯೊಂದಿಗೆ 3 ಮತ ಎಣಿಕೆ ಏಜೆಂಟರು ಸೇರಿ 4 ಜನರಿಗೆ ಮತ್ತು ತಾಲ್ಲೂಕು ಪಂಚಾಯತ್‌ಗೆ ಅಭ್ಯರ್ಥಿ ಹಾಗೂ ಒಬ್ಬ ಎಣಿಕೆ ಏಜೆಂಟ್ ಸೇರಿ ಇಬ್ಬರಿಗೆ ಅವಕಾಶವಿದೆ.

ಎಣಿಕೆ ಕೇಂದ್ರವನ್ನು ಪ್ರವೇಶಿಸಲು ಈಗಾಗಲೇ ಗುರುತಿನ ಚೀಟಿಯನ್ನು ನೀಡಲಾಗಿದ್ದು, ಗುರುತಿನ ಚೀಟಿ ಇದ್ದವರಿಗೆ ಮಾತ್ರ ಪ್ರವೇಶಕ್ಕೆ ಅವಕಾಶ ನೀಡಲಾಗುತ್ತದೆ. ಮತ ಎಣಿಕೆ ಕೇಂದ್ರದೊಳಗೆ ಮೊಬೈಲ್ ಫೋನ್, ಕ್ಯಾಲ್ಕುಲೇಟರ್ ಹಾಗೂ ಯಾವುದೇ ಎಲೆಕ್ಟ್ರಾನಿಕ್ ವಸ್ತುಗಳು, ಹರಿತವಾದ ಚೂಪಾದ ಹಾಗೂ ಗಾಜಿನ ವಸ್ತುಗಳು, ಬೆಂಕಿ ಪೊಟ್ಟಣ, ಲೈಟರ್, ಬ್ಲೇಡ್, ಚಾಕು, ಕತ್ತರಿ, ಕತ್ತಿ, ಸೂಜಿ, ಸುತ್ತಿಗೆ, ಕೋಲು, ಕಬ್ಬಿಣದ ರಾಡ್ ಹಾಗೂ ಇತರ ಆಯುಧಗಳು, ಬಂದೂಕು, ಇಂಧನ, ಎಣ್ಣೆ ಹಾಗೂ ಯಾವುದೇ ತರಹದ ದ್ರವ ರೂಪದ ಪದಾರ್ಥಗಳು, ಇಂಕ್ ಪೆನ್ ಹಾಗೂ ಇಂಕ್ ಬಾಟಲ್‌ಗಳನ್ನು ಮತ ಎಣಿಕೆ ಕೇಂದ್ರಕ್ಕೆ ತರುವುದನ್ನು ನಿಷೇಧಿಸಲಾಗಿದೆ.

ಅಭ್ಯರ್ಥಿಗಳು ಹಾಗೂ ಯಾವುದೇ ಚುನಾವಣಾ ಸಿಬ್ಬಂದಿಯವರು ಮೇಲಿನ ಯಾವುದೇ ವಸ್ತುಗಳನ್ನು ಎಣಿಕೆ ಕೇಂದ್ರಕ್ಕೆ ತರಬಾರದೆಂದು ತಿಳಿಸಲಾಗಿದೆ. ಮತ ಎಣಿಕೆ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ 144 ಸೆಕ್ಷನ್ ಜಾರಿಗೊಳಿಸಿ ವಿಜಯೋತ್ಸವ ಹಾಗೂ ಮೆರವಣಿಗೆ ಮತ್ತು ಪಟಾಕಿ ಸಿಡಿಸುವುದನ್ನು ಸಂಪೂರ್ಣ ನಿಷೇಧಿಸಲಾಗಿದೆ. ಜನವರಿ 4ರ ಮಧ್ಯರಾತ್ರಿ 12 ಗಂಟೆಯವರೆಗೆ ಜಿಲ್ಲೆಯಾದ್ಯಂತ ಎಲ್ಲ ಬಗೆಯ ಮದ್ಯ ಮಾರಾಟ ನಿಷೇಧಿಸಿ ಮದ್ಯದಂಗಡಿಗಳನ್ನು ಮುಚ್ಚುವಂತೆ ಆದೇಶಿಸಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.