ADVERTISEMENT

ಆಕ್ರೋಶ; ದೂರಿನ ಸುರಿಮಳೆ

​ಪ್ರಜಾವಾಣಿ ವಾರ್ತೆ
Published 27 ಜೂನ್ 2012, 5:35 IST
Last Updated 27 ಜೂನ್ 2012, 5:35 IST

ಹಿರಿಯೂರು: `ಪುರಸಭೆ ನೀರು ಬಿಡುವ ವ್ಯಕ್ತಿ ಯಾವಾಗಲು ಕುಡಿದ ಮತ್ತಿನಲ್ಲಿರುತ್ತಾನೆ. ಕುಡಿಯಲು ಹಣಕೊಟ್ಟರೆ ಸಾಕೆನಿಸುವಷ್ಟು ನೀರು. ಚರಂಡಿ ಸ್ವಚ್ಛ ಮಾಡುವವರು ಯಾವಾಗ ಬರುತ್ತಾರೆ ಎನ್ನುವುದೇ ತಿಳಿಯದು.

ಚರಂಡಿಯಿಂದ ತೆಗೆದ ಕಸ ತುಂಬಲು ಮತ್ತೆ ವಾರಗಟ್ಟಲೆ ಕಾಯಬೇಕು. ಹಗಲು ವೇಳೆಯಲ್ಲೂ ಮೂಗು ಮುಚ್ಚಿಕೊಂಡೇ ಓಡಾಡಬೇಕು. ನಮಗೆ ನಗರದಲ್ಲಿ ವಾಸವಾಗಿದ್ದೇವೆ ಎನ್ನಲು ನಾಚಿಕೆ ಎನಿಸುತ್ತದೆ. ಮಳೆ ಬಂದರೆ ನಮ್ಮ ಪಾಡು ಹೇಳಬಾರದು. ಖಾಲಿ ನಿವೇಶನಗಳಲ್ಲಿ ತಿಪ್ಪೆಗುಂಡಿಗಳು ತಲೆ ಎತ್ತಿವೆ.

ರಸ್ತೆಗಳಲ್ಲಿ ಗುಂಡಿಗಳು ಬಿದ್ದಿವೆ. ಬೀದಿ ದೀಪಗಳು ಅಮಾವಾಸ್ಯೆ ಸಮಯಕ್ಕೆ ಸರಿಯಾಗಿ ಕೆಟ್ಟು ಹೋಗುತ್ತವೆ~.
- ಈ ದೂರುಗಳ ಸುರಿಮಳೆ ಆಗಿದ್ದು ಮಂಗಳವಾರ ಶಾಸಕ ಡಿ. ಸುಧಾಕರ್ ಅವರು ಪುರಸಭೆ ಅಧಿಕಾರಿಗಳು, ಜನಪ್ರತಿನಿಧಿಗಳ ಜತೆ ನಗರದ ಎಲ್ಲಾ ವಾರ್ಡ್‌ಗಳಲ್ಲಿ ಪರಿಶೀಲನೆ ನಡೆಸಿದಾಗ.

ಬಹುತೇಕ ಎಲ್ಲಾ ವಾರ್ಡುಗಳಲ್ಲಿ ಸ್ವಚ್ಛತೆ, ಕುಡಿಯುವ ನೀರು, ರಸ್ತೆ, ಚರಂಡಿ ಸಮಸ್ಯೆಗಳನ್ನು ನಿವಾಸಿಗಳು ಶಾಸಕರ ಮುಂದೆ ಬಿಚ್ಚಿಟ್ಟರು. ಸ್ಥಳೀಯ ಆಡಳಿತದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು.

ನಂತರ ಸುದ್ದಿಗಾರರ ಜತೆ ಮಾತನಾಡಿದ ಸುಧಾಕರ್, ನಗರದ ನಿರ್ವಹಣೆ ನೋಡಿಕೊಳ್ಳಲು ಚುನಾಯಿತ ಪ್ರತಿನಿಧಿಗಳ ಪ್ರತ್ಯೇಕ ಸಮಿತಿ ಇದೆ. ಇದರಲ್ಲಿ ನಾನು ಮೂಗು ತೂರಿಸಬಾರದು ಎಂದು ಸುಮ್ಮನಿದ್ದೆ. ಆದರೆ, ನಗರದಲ್ಲಿ ಇಷ್ಟೊಂದು ಪ್ರಮಾಣದಲ್ಲಿ ಸಮಸ್ಯೆಗಳಿರುವುದು ಅತ್ಯಂತ ಬೇಸರ ತಂದಿದೆ ಎಂದರು.

ಕರ್ನಾಟಕ ಒಳಚರಂಡಿ ಮಂಡಳಿ, ಪುರಸಭೆ, ಲೋಕೋಪಯೋಗಿ ಇಲಾಖೆ ಎಂಜಿನಿಯರ್‌ಗಳ ಜತೆ ಲ್ಲಾ ಬಡಾವಣೆಗಳ ಪರಿಶೀಲನೆ ನಡೆಸಿದ್ದು, ತುರ್ತಾಗಿ ಆಗಬೇಕಿರುವ ಕಾಮಗಾರಿಗಳ ಪಟ್ಟಿ ತಯಾರಿಸಲಾಗಿದೆ. ಆಜಾದ್‌ನಗರ, ಚಿಕ್ಕಪೇಟೆ, ಸಿದ್ಧನಾಯಕ ವೃತ್ತ, ಗೋಪಾಲಪುರ, ಪರಿಶಿಷ್ಟರ ಕಾಲೊನಿ, ವಾಟರ್‌ಟ್ಯಾಂಕ್ ರಸ್ತೆ, ಶ್ರೀಶೈಲ ವೃತ್ತ, ತಮಿಳು ಕಾಲೊನಿ, ಕುವೆಂಪು ನಗರ ಸೇರಿದಂತೆ ಎಲ್ಲ ಕಡೆ ರಸ್ತೆ, ಚರಂಡಿ ಅಭಿವೃದ್ಧಿಪಡಿಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.

ಎಸ್‌ಎಫ್‌ಸಿ ಅನುದಾನದಲ್ಲಿ ರೂ 3.5 ಕೋಟಿ, ಕೆಎಂಆರ್‌ಪಿ ಯೋಜನೆಯ ಅಡಿ ರೂ 6 ಕೋಟಿ, ಮುಖ್ಯಮಂತ್ರಿಗಳ ವಿಶೇಷ ಅನುದಾನ ರೂ 7.5 ಕೋಟಿ, ಮುಖ್ಯಮಂತ್ರಿಗಳ ಅನುದಾನದಿಂದ ರೂ 5 ಕೋಟಿ, 13ನೇ ಹಣಕಾಸು ಯೋಜನೆಯ ಅಡಿ ರೂ 56 ಲಕ್ಷ ಮಂಜೂರಾಗಿದೆ. ಇಡೀ ನಗರದ ಅಭಿವೃದ್ಧಿಗೆ ಸಮಗ್ರ ಯೋಜನೆ ರೂಪಿಸಿ, ತಕ್ಷಣ ಕಾಮಗಾರಿ ಆರಂಭಿಸಲಾಗುವುದು. ಕರ್ತವ್ಯ ಲೋಪ ಮಾಡುವ ಅಧಿಕಾರಿಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮಕ್ಕೆ ಶಿಫಾರಸು ಮಾಡಲಾಗುವುದು ಎಂದು ಮಾಹಿತಿ ನೀಡಿದರು.

ಪುರಸಭಾಧ್ಯಕ್ಷೆ ಮಂಜುಳಾ ವೆಂಕಟೇಶ್, ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಆರ್. ವೆಂಕಟೇಶ್, ಸದಸ್ಯರಾದ ಜಬೀವುಲ್ಲಾ, ಎ. ಮಂಜುನಾಥ್, ಈ. ಮಂಜುನಾಥ್, ಸಿಗ್ಬತ್ ಉಲ್ಲಾ, ತಿಪ್ಪಮ್ಮ ಮಂಜುನಾಥ್, ಟಿ. ತಿಮ್ಮಣ್ಣ, ಜಿಲ್ಲಾ ಪಂಚಾಯ್ತಿ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಎಚ್. ಚಂದ್ರಪ್ಪ, ಮುಖಂಡರಾದ ಬಿ.ವಿ. ಮಾಧವ, ಅಜೀಜ್, ಅಜಯ್‌ಕುಮಾರ್, ರಾಘವೇಂದ್ರರೆಡ್ಡಿ, ಈರಲಿಂಗೇಗೌಡ, ಪ್ರಶಾಂತಬಾಬು, ಸುರೇಶ್‌ಬಾಬು, ಹಿರಿಯ ವಕೀಲ ಜಬೀವುಲ್ಲಾ, ಮುಖ್ಯಾಧಿಕಾರಿ ಚಂದ್ರಶೇಖರಪ್ಪ ಪಾಲ್ಗೊಂಡಿದ್ದರು.

ಪ್ರತಿಭಾ ಪುರಸ್ಕಾರ:
ಚಿತ್ರದುರ್ಗ ಜಿಲ್ಲೆ ಮಾದಿಗ ನೌಕರರ ಸಂಘದ ವತಿಯಿಂದ ಎಸ್ಸೆಸ್ಸೆಲ್ಸಿ ಮತ್ತು ಪಿಯು ತರಗತಿಗಳಲ್ಲಿ ಹೆಚ್ಚು ಅಂಕ ಗಳಿಸಿರುವ ಜನಾಂಗದ ಪ್ರತಿಭಾವಂತರನ್ನು ಸನ್ಮಾನಿಸಲು ಅರ್ಜಿ ಆಹ್ವಾನಿಸಲಾಗಿದೆ. ವಿವರಕ್ಕೆ ಮೊಬೈಲ್: 94495 05798 ಸಂಪರ್ಕಿಸುವಂತೆ ಸಂಘದ ತಾಲ್ಲೂಕು ಸಮಿತಿ ಅಧ್ಯಕ್ಷ ವೈ. ಮಹಾಂತಪ್ಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.