ADVERTISEMENT

ಆಧುನಿಕ ಸವಾಲು ಎದುರಿಸಲು ಕರೆ

​ಪ್ರಜಾವಾಣಿ ವಾರ್ತೆ
Published 1 ಅಕ್ಟೋಬರ್ 2012, 5:05 IST
Last Updated 1 ಅಕ್ಟೋಬರ್ 2012, 5:05 IST

ಚಿತ್ರದುರ್ಗ: ಆಧುನಿಕ ಸಮಾಜದಲ್ಲಿನ ಹೊಸ ಸವಾಲುಗಳನ್ನು ಸ್ವೀಕರಿಸಿ ಮಕ್ಕಳಿಗೆ ಉತ್ತಮ ಸಂಸ್ಕಾರ, ಗುಣಮಟ್ಟದ ಶಿಕ್ಷಣ ನೀಡುವಂತೆ ವಿಧಾನ ಪರಿಷತ್ ಸಭಾಧ್ಯಕ್ಷ ಡಿ.ಎಚ್. ಶಂಕರಮೂರ್ತಿ ಕರೆ ನೀಡಿದರು.

ನಗರದ ಎಸ್‌ಜೆಎಂ ದಂತ ಮಹಾವಿದ್ಯಾಲಯದ ಸಭಾಂಗಣದಲ್ಲಿ ಭಾನುವಾರ ಕರ್ನಾಟಕ ಆರ್ಯವೈಶ್ಯ ಮಹಾಸಭೆ ವತಿಯಿಂದ ಆಯೋಜಿಸಿದ್ದ ರಾಜ್ಯಮಟ್ಟದ ಪ್ರತಿಭಾ ಪುರಸ್ಕಾರ ಹಾಗೂ ಅಂಗವಿಕಲರ ಮಾಸಾಶನ `ವಾಸವಿ ಚೇತನ~ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

ಆರ್ಯವೈಶ್ಯ ಸಮಾಜದ ಮಕ್ಕಳು ಉನ್ನತ ವ್ಯಾಸಂಗ ಮಾಡಲು ಇಚ್ಛಿಸಿದರೆ ಆರ್ಯವೈಶ್ಯ ಮಹಾಸಭೆಯಿಂದ ಆರ್ಥಿಕ ಸಹಾಯ ದೊರೆಯಲಿದೆ ಹಾಗೂ ಐಎಎಸ್, ಐಪಿಎಸ್ ಮತ್ತಿತರ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಹಾಜರಾಗುವವರಿಗೆ ಉಚಿತ ತರಬೇತಿ, ಹಾಸ್ಟೆಲ್ ಸೌಲಭ್ಯ ಒದಗಿಸಲಾಗುತ್ತದೆ ಎಂದು ತಿಳಿಸಿದರು.
ಸಮಾಜದಿಂದ ಎಲ್ಲವನ್ನು ಪಡೆಯುವವರು ಮುಂದೆ ಸಮಾಜದ ಪರವಾಗಿ ಇರಬೇಕು. ಸಮಾಜದ ಜತೆ ಉಳಿದು ಆದರ್ಶಪ್ರಾಯರಾಗಿರಬೇಕು ಎಂದು ಎಚ್ಚರಿಕೆ ನೀಡಿದರು.

ಆರ್ಯವೈಶ್ಯ ಸಮಾಜದ ಹೆಣ್ಣು ಮಕ್ಕಳಿಗೆ ಶಿಕ್ಷಣ ಕೊಡಿಸುವಲ್ಲಿ ಹಿಂಜರಿಕೆ ಇತ್ತು. ಆದರೆ, ಇಂದು ಕಾಲ ಬದಲಾಗಿದೆ. ಸಮಾಜದಲ್ಲಿ ಮಹಿಳೆಯರು ಉನ್ನತ ಸಾಧನೆ ಮಾಡುತ್ತಿದ್ದಾರೆ. ಈ ಹಿಂದೆ ಮದುವೆ ಸಮಯದಲ್ಲಿ ವಧು-ವರರ ಬಗ್ಗೆ ಚರ್ಚೆಯಾಗುತ್ತಿರಲಿಲ್ಲ. ತಂದೆ ಎಷ್ಟು ಆಸ್ತಿ ಮಾಡಿದ್ದಾನೆ, ಏನು ವ್ಯಾಪಾರ ಮಾಡುತ್ತಾನೆ, ಜಮೀನು, ಆಸ್ತಿ, ಮನೆ ಇದೆಯಾ ಎಂದು ಕೇಳುತ್ತಿದ್ದರು. ಆದರೆ, ಇಂದು ಪರಿಸ್ಥಿತಿ ವಿಭಿನ್ನ. ವರ ಏನು ಓದಿದ್ದಾನೆ ಎಂದು ಪ್ರಶ್ನೆ ಮಾಡುತ್ತಿದ್ದಾರೆ. ಇದರಿಂದ ಆರ್ಯವೈಶ್ಯ ಸಮಾಜದವರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಲು ಪ್ರಥಮ ಆದ್ಯತೆ ನೀಡುತ್ತಿದ್ದಾರೆ ಎಂದು ಅವರು ನುಡಿದರು.

ಸಮಾರಂಭದ ಅಂಗವಾಗಿ ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ನಗರದ ಪ್ರಮುಖ ಬೀದಿಗಳಲ್ಲಿ ಆನೆ, ಕುದುರೆ ಮೇಲೆ ಮೆರವಣಿಗೆ ಮಾಡಿ ವೇದಿಕೆಗೆ ಕರೆತರಲಾಯಿತು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.