ADVERTISEMENT

ಇಂದು ಹಿರಿಯೂರಿನಲ್ಲಿ ಕರ್ಪೂರದಾರತಿ

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2011, 10:15 IST
Last Updated 20 ಫೆಬ್ರುವರಿ 2011, 10:15 IST

ಹಿರಿಯೂರು: ದಕ್ಷಿಣ ಕಾಶಿ ಎಂದೇ ಪ್ರಸಿದ್ಧವಾಗಿರುವ ಇಲ್ಲಿನ ತೇರುಮಲ್ಲೇಶ್ವರ ಸ್ವಾಮಿ ಜಾತ್ರಾ ಮಹೋತ್ಸವದ ವಿಶೇಷ ಆಚರಣೆ ಎಂದು ಪರಿಗಣಿಸಲ್ಪಟ್ಟಿರುವ ಕರ್ಪೂರದ ಆರತಿ ಕಾರ್ಯಕ್ರಮ ಫೆ. 20 ರಂದು ರಾತ್ರಿ 9ಕ್ಕೆ ನಡೆಯಲಿದೆ.ದೇವಸ್ಥಾನದ ಒಳ ಆವರಣದಲ್ಲಿ ಗರ್ಭ ಗುಡಿಯ ಮುಂಭಾಗ 48 ಅಡಿ ಎತ್ತರದ ಏಕಶಿಲಾ ಸ್ತಂಭವಿದೆ. ಸ್ತಂಭದ ಮೇಲೆ ಸುಮಾರು 8 ಅಡಿ ಎತ್ತರದ ಬಸವಮಂಟಪ ಇದ್ದು, ಒಳಗೆ ಚಿಕ್ಕದಾದ ನಂದಿಯ ಮೂರ್ತಿಯನ್ನು ಕೆತ್ತಲಾಗಿದೆ. ಇದಕ್ಕೆ 6 ಅಡಿ ಉದ್ದನೆಯ 8 ಕಬ್ಬಿಣದ ಸೌಟುಗಳನ್ನು ಜೋಡಿಸಲಾಗಿದ್ದು, ಕರ್ಪೂರದ ಆರತಿಯ ದಿನ ಒಟ್ಟಾರೆ 56 ಅಡಿ ಎತ್ತರದ ನುಣುಪಾದ ಕೆತ್ತನೆಯಿಂದ ಕೂಡಿರುವ ದೀಪಸ್ತಂಭದ ಮೇಲೆ ಹತ್ತಿ, ಸೌಟು (ಉದ್ದನೆಯ ಹಿಡಿ ಇರುವ ದೀಪಗಳು) ಗಳಿಗೆ ಕರ್ಪೂರ ಹಾಕಿ ಹಚ್ಚುವ ದೃಶ್ಯ ರೋಮಾಂಚನಕಾರಿ ಆಗಿರುತ್ತದೆ.

ಶೌರ್ಯದ ಪ್ರತೀಕ: ಹಿಂದೆ ನಾಡನ್ನು ಆಳುತ್ತಿದ್ದ ದೊರೆಗಳು ಕರ್ಪೂರದ ಆರತಿ ಕಾರ್ಯಕ್ರಮವನ್ನು ಪುರುಷರ ಶೌರ್ಯದ ಪ್ರತೀಕವನ್ನಾಗಿ ಮಾಡಿಕೊಂಡಿದ್ದರು. ಧೀರ ಪುರುಷರು 56 ಅಡಿ ಎತ್ತರದ ದೀಪಸ್ತಂಭವನ್ನು ಚಕಚಕನೆ ಏರಿ ಕರ್ಪೂರ ಹಚ್ಚಿ ನೆರೆದಿದ್ದ ಹೆಂಗಳೆಯರ ಮನಗೆಲ್ಲುವುದು ವಾಡಿಕೆ ಆಗಿತ್ತು. ಕಾರ್ತಿಕ ಮಾಸ ಹಾಗೂ ಜಾತ್ರೆಯ ಸಂದರ್ಭದಲ್ಲಿ ಈ ಸೌಟುಗಳಲ್ಲಿ ದೀಪ ಹಚ್ಚುವ ಸಂಪ್ರದಾಯ ನಡೆದು ಬಂದಿದೆ. ದೀಪದ ಬೆಳಕು ರಾತ್ರಿ ವೇಳೆ 3 ಕಿ.ಮೀ. ದೂರದವರೆಗೂ ಕಾಣುತ್ತದೆ ಎಂದು ಹಿರಿಯರು ಹೇಳುತ್ತಾರೆ. ಸಾವಿರಾರು ಮಹಿಳೆಯರು, ಮಕ್ಕಳು ಪಾಲ್ಗೊಳ್ಳುವುದು ವಿಶೇಷ.

ಹರಾಜು: ಕರ್ಪೂರದ ಆರತಿಯ ಮೊದಲ ಸೇವೆಯನ್ನು ಯಾರು ಮಾಡಬೇಕೆನ್ನುವುದನ್ನು ಹರಾಜು ಮೂಲಕ ನಿರ್ಧರಿಸಲಾಗುತ್ತದೆ. ಕೆಲವೊಮ್ಮೆ ಮೊದಲ ಪೂಜೆ `10 ಸಾವಿರಕ್ಕೂ ಹೆಚ್ಚು ಹೋಗಿರುವುದುಂಟು. ಹರಾಜಿನಲ್ಲಿ ಭಾಗವಹಿಸಲು ವಿವಿಧ ಜಿಲ್ಲೆಗಳಿಂದ ಭಕ್ತರು ಬರುವುದುಂಟು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.