ADVERTISEMENT

ಒಂದಾಗಿ ಬಾಳಲು ಸಾಮರಸ್ಯ ಬಹುಮುಖ್ಯ

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2013, 5:29 IST
Last Updated 6 ಫೆಬ್ರುವರಿ 2013, 5:29 IST
ಚಿತ್ರದುರ್ಗದಲ್ಲಿ ಮಂಗಳವಾರ ನಡೆದ ಸಾಮೂಹಿಕ ಕಲ್ಯಾಣ ಮಹೋತ್ಸವದಲ್ಲಿ ಮುರುಘಾಮಠದ ಶಿವಮೂರ್ತಿ ಮುರುಘಾ ಶರಣರು, ಜಯಬಸವಾನಂದ ಸ್ವಾಮೀಜಿ, ಸಂಗನಬಸವ ಸ್ವಾಮೀಜಿ ವಧು-ವರರಿಗೆ ಆಶೀರ್ವದಿಸಿದರು.
ಚಿತ್ರದುರ್ಗದಲ್ಲಿ ಮಂಗಳವಾರ ನಡೆದ ಸಾಮೂಹಿಕ ಕಲ್ಯಾಣ ಮಹೋತ್ಸವದಲ್ಲಿ ಮುರುಘಾಮಠದ ಶಿವಮೂರ್ತಿ ಮುರುಘಾ ಶರಣರು, ಜಯಬಸವಾನಂದ ಸ್ವಾಮೀಜಿ, ಸಂಗನಬಸವ ಸ್ವಾಮೀಜಿ ವಧು-ವರರಿಗೆ ಆಶೀರ್ವದಿಸಿದರು.   

ಚಿತ್ರದುರ್ಗ: ಮದುವೆಯಾದ ನಂತರ ಪತಿ-ಪತ್ನಿಯರಲ್ಲಿ ಸಾಮರಸ್ಯ ಬಹುಮುಖ್ಯ. ಕಿರುಕುಳ ಕೊಡುವ ಮನೋಭಾವನೆ ಯಾರೂ ಕೂಡ ಬೆಳೆಸಿಕೊಳ್ಳದೇ ಸಮಾಧಾನ ಹಾಗೂ ಶಾಂತಿಯಿಂದ ಬಾಳಬೇಕು ಎಂದು ಮುರುಘಾಮಠದ ಶಿವಮೂರ್ತಿ ಮುರುಘಾ ಶರಣರು ಸಲಹೆ ನೀಡಿದರು.

ನಗರದ ಮುರುಘಾಮಠದ ಬಸವೇಶ್ವರ ಸಭಾಂಗಣದಲ್ಲಿ ಮಂಗಳವಾರ ನಡೆದ 19 ಜೋಡಿಗಳ ಸಾಮೂಹಿಕ ಕಲ್ಯಾಣಮಹೋತ್ಸವದಲ್ಲಿ ಅವರು ಮಾತನಾಡಿದರು. 

ಸಂಸಾರದಲ್ಲಿ ಕೆಲವೊಮ್ಮೆ ಅಸಹನೆ, ಅಶಾಂತಿ, ಅತೃಪ್ತಿಗೆ ಒಳಗಾಗುವುದು ಸಹಜ. ಅದು ಸಾಮಾನ್ಯ ಸಂಗತಿಯೂ ಹೌದು. ಆದರೆ, ಮನುಷ್ಯ ತನ್ನ ಮಾನವೀಯತೆ ಮರೆಯದೇ ತಾಳ್ಮೆ, ಸಮಾಧಾನ ತಂದುಕೊಳ್ಳಬೇಕು. ಅತ್ತೆಯಾದವರು ಸೊಸೆಯನ್ನು ತಮ್ಮ ಮಗಳಂತೆ ಭಾವಿಸಿದಾಗ ಮಾತ್ರ ಅವರು ಕೂಡ ತಾಯಿಯ ಸ್ಥಾನ ನೀಡುತ್ತಾರೆ. ಆದ್ದರಿಂದ, ಪ್ರತಿಯೊಬ್ಬರೂ ತಮ್ಮ ಬದುಕಿನಲ್ಲಿ ಮಾನವೀಯ ಮೌಲ್ಯ ಅಳವಡಿಸಿಕೊಳ್ಳುವುದು ಅತ್ಯವಶ್ಯಕ ಎಂದು ತಿಳಿಸಿದರು.

ಪರಿಸರ ಶುದ್ಧಿಗಾಗಿ ನಿರ್ಮಲ ಗ್ರಾಮದ ಅಡಿ ಶೌಚಾಲಯ ವ್ಯವಸ್ಥೆ ಮಾಡಿಕೊಳ್ಳಬೇಕು. ಸರ್ಕಾರ ಅದಕ್ಕಾಗಿ ಅನುದಾನ ನೀಡುತ್ತಿದೆ. ಮನೆಯಲ್ಲಿ ದೃಶ್ಯ ಮಾಧ್ಯಮ ಎಷ್ಟು ಮುಖ್ಯ ಅಂದುಕೊಂಡಿದ್ದೀರೋ ಶೌಚಾಲಯ ಅದಕ್ಕಿಂತ ಮುಖ್ಯವಾಗಿದೆ. ಜತೆಗೆ, ಇಂದಿನ ದಿನಗಳಲ್ಲಿ ಕೆಲವೆಡೆ ನಡೆಯುತ್ತಿರುವ ಹೆಣ್ಣು ಭ್ರೂಣಹತ್ಯೆ ತಡೆಯಲು ಎಲ್ಲರೂ ಮುಂದಾಗಬೇಕು ಎಂದು ಕರೆ ನೀಡಿದರು.

ಚಿಕ್ಕಮಗಳೂರು ಬಸವಮಂದಿರದ ಜಯಬಸವಾನಂದ ಸ್ವಾಮೀಜಿ ಮಾತನಾಡಿ, ಮುರುಘಾಮಠದ ಶರಣರು ಬಸವತತ್ವದ ದ್ಯೋತಕವಾಗಿ ಸರ್ವರೂ ಒಪ್ಪಿಕೊಳ್ಳುವ ಕಾರ್ಯಕ್ರಮ ಮಾಡುತ್ತಿದ್ದಾರೆ. ಇಲ್ಲಿನ ಮದುವೆಗಳು ಆದರ್ಶಪ್ರಾಯವಾಗಿವೆ. ಯಾವುದೇ, ಭೇದ-ಭಾವ ಮಾಡದೇ ಎಲ್ಲರೂ ನಮ್ಮವರೆ ಎನ್ನುವುದಾಗಿ ಒಪ್ಪಿಕೊಳ್ಳುವ ಮುರುಘಾಮಠ ಮಾದರಿ ಮಠವಾಗಿದೆ ಎಂದು ತಿಳಿಸಿದರು.

ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ. ರಾಜು ಮಾತನಾಡಿ, ಲೋಕ ಕಲ್ಯಾಣಕ್ಕಾಗಿ ಬುದ್ಧ ಮನೆ ತ್ಯಜಿಸಿದ, ಬಸವಣ್ಣ ಕಲ್ಯಾಣ ಕ್ರಾಂತಿಗೆ ಹೊರಟ, ಅಂಬೇಡ್ಕರ್ ಸಂವಿಧಾನ ರಚಿಸಲು ನಿರ್ಧರಿಸಿದ ಹಾಗೂ ಗಾಂಧೀಜಿ ಅಹಿಂಸಾ ತತ್ವ ಬೋಧಿಸಲು ಹೊರಟ ಗಳಿಗೆಯಂತೆ ಶಿವಮೂರ್ತಿ ಮುರುಘಾ ಶರಣರು ಜಾತ್ಯತೀತ ನಾಡನ್ನು ಕಟ್ಟಲು ಹೊರಟ ಗಳಿಗೆ ಉತ್ತಮ ಕಾರ್ಯಕ್ಕಾಗಿ ಎಂಬುದನ್ನು ಅಲ್ಲಗೆಳೆಯುವಂತಿಲ್ಲ ಎಂದು ಹೇಳಿದರು.

ಬಸವನ ಬಾಗೇವಾಡಿ ವಿರಕ್ತಮಠದ ಸಂಗನಬಸವ ಸ್ವಾಮೀಜಿ ಮಾತನಾಡಿದರು.  ಕೆ.ವಿ. ಪ್ರಭಾಕರ, ಎಲ್.ಯು. ಸತೀಶ್ ಅವರನ್ನು ಸನ್ಮಾನಿಸಲಾಯಿತು. ಜಮುರಾ ಕಲಾವಿದರು ವಚನ ಪ್ರಾರ್ಥಿಸಿದರು. ಪಿ. ವೀರೇಂದ್ರಕುಮಾರ್ ಸ್ವಾಗತಿಸಿದರು. ಪ್ರದೀಪ್ ಕಾರ್ಯಕ್ರಮ ನಿರೂಪಿಸಿದರು. ಜ್ಞಾನಮೂರ್ತಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.