ADVERTISEMENT

ಕುಸಿದ ಅಂತರ್ಜಲ: ಸಂಕಷ್ಟದಲ್ಲಿ ಬೆಳೆಗಾರ

​ಪ್ರಜಾವಾಣಿ ವಾರ್ತೆ
Published 26 ಜುಲೈ 2013, 4:52 IST
Last Updated 26 ಜುಲೈ 2013, 4:52 IST
ಹೊಸದುರ್ಗ ತಾಲ್ಲೂಕಿನ ಕುರುಬರಹಳ್ಳಿ ಬಳಿ ಅಂತರ್ಜಲ ಕುಸಿತದಿಂದ ಒಣಗಿರುವ ಅಡಿಕೆ ತೋಟದ ಜತೆ ಸಂಕಷ್ಟದಲ್ಲಿರುವ ಬೆಳೆಗಾರ
ಹೊಸದುರ್ಗ ತಾಲ್ಲೂಕಿನ ಕುರುಬರಹಳ್ಳಿ ಬಳಿ ಅಂತರ್ಜಲ ಕುಸಿತದಿಂದ ಒಣಗಿರುವ ಅಡಿಕೆ ತೋಟದ ಜತೆ ಸಂಕಷ್ಟದಲ್ಲಿರುವ ಬೆಳೆಗಾರ   

ಹೊಸದುರ್ಗ: ಕಳೆದ 3-4  ವರ್ಷಗಳಿಂದ ನೀರು ನಿಲ್ಲುವಂತಹ ಹದಮಳೆ ಆಗದ ಕಾರಣ ತಾಲ್ಲೂಕಿನ ಕುರುಬರಹಳ್ಳಿ ಬಳಿ ಅಡಿಕೆ ತೋಟಗಳು ಒಣಗಿ ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ತಾಲ್ಲೂಕಿನ ಅನೇಕ ಬೆಳೆಗಾರರು ಲಕ್ಷಾಂತರ ರೂಪಾಯಿ ಸಾಲ ಮಾಡಿ ಅಡಿಕೆ ಹಾಗೂ ತೆಂಗಿನ ತೋಟ ಮಾಡಲು ಮುಂದಾಗಿದ್ದರು. ಆದರೆ ಈಚೆಗೆ ಸಕಾಲಕ್ಕೆ ಮಳೆ ಆಗುತ್ತಿಲ್ಲ. ಮಳೆಗಾಲದಲ್ಲಿ ನೀರು ನಿಲ್ಲುತ್ತಿದ್ದ ಕೆರೆಗಳ ಹೂಳನ್ನು ಸಹ ತೆಗೆಸದ ಕಾರಣ, ಬಳ್ಳಾರಿ ಜಾಲಿ ವಿಫುಲವಾಗಿ ಬೆಳೆದಿದೆ. ಕೊಳವೆ ಬಾವಿಗಳಲ್ಲಿಯೂ ನೀರು ಬತ್ತಿದ್ದು, ಮುಂದಿನ ಜೀವನಕ್ಕೆ ಚಿಂತಿಸುವ ಪರಿಸ್ಥಿತಿ ನಿರ್ಮಾಣವಾಗಿದೆ ಎನ್ನುತ್ತಾರೆ ಬೆಳೆಗಾರರಾದ ತಿಪ್ಪೇಶಪ್ಪ, ಕರಿಯಪ್ಪ ಹಾಗೂ ರಾಮಣ್ಣ.

ಪ್ರತಿ ವಿಧಾನಸಭಾ ಚುನಾವಣೆ ಸಂದರ್ಭದಲ್ಲೂ ಈ ಭಾಗಕ್ಕೆ ಆದಷ್ಟು ಬೇಗನೆ ಭದ್ರಾ ಮೇಲ್ದಂಡೆಯ ನೀರಾವರಿ ಸೌಲಭ್ಯ ಕಲ್ಪಿಸಲು ಪ್ರಥಮ ಆದ್ಯತೆ ನೀಡಲಾಗುವುದು ಎಂದು ವಿವಿಧ ಪಕ್ಷಗಳು ಘೋಷಿಸುತ್ತಲೇ ಬಂದಿವೆ. ಆದರೆ ಸುಮಾರು ಐದು ದಶಕಗಳು ಕಳೆದರೂ ಭರವಸೆಗಳು ಸಾಕಾರಗೊಂಡಿಲ್ಲ.

ಕುರುಬರಹಳ್ಳಿಯಲ್ಲಿ ಕೃಷ್ಣಾ ಆರ್.ಪಾಲಂಕರ್ ಅವರು ತಮ್ಮ 6 ಎಕರೆ ಜಮೀನಿನಲ್ಲಿ ಸುಮಾರು 2,500 ಅಡಿಕೆ ಸಸಿಗಳನ್ನು ಬೆಳೆಸಿದ್ದರು. ಈ ಅಡಿಕೆ ತೋಟ ಉಳಿಸಿಕೊಳ್ಳಲು ಲಕ್ಷಾಂತರ ರೂಪಾಯಿ ಸಾಲ ಮಾಡಿ ನಾಲ್ಕೈದು ಕೊಳವೆ ಬಾವಿ ಕೊರೆಸಿದರೂ ನೀರು ಸಿಕ್ಕಿಲ್ಲ. ಅಡಿಕೆ ತೋಟ ಸಂಪೂರ್ಣ ಒಣಗಿದ್ದು, ಸಾಲ ಹೇಗೆ ತೀರಿಸುವುದು ಎಂಬ ಚಿಂತೆ ಎದುರಾಗಿದೆ ಎನ್ನುತ್ತಾರೆ ಅವರು.

ಇದೇ ಪರಿಸ್ಥಿತಿಯನ್ನು ತಾಲ್ಲೂಕಿನ ಇನ್ನೂ ಅನೇಕ ಅಡಿಕೆ ಹಾಗೂ ತೆಂಗಿನ ಬೆಳೆಗಾರರು ಅನುಭವಿಸುತ್ತಿದ್ದಾರೆ. ಇಂತಹ ರೈತರು ಆರ್ಥಿಕ ಸಂಕಷ್ಟದ ಭೀತಿಯಿಂದ ಮುಕ್ತರಾಗಬೇಕಾದರೆ ಸರ್ಕಾರ ನೆರವಿಗೆ ಬರಬೇಕು ಎನ್ನುವುದು ರೈತರ ಆಗ್ರಹ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.