ADVERTISEMENT

ಕೋಟೆ ನಾಡಲ್ಲಿ ಕಲ್ಲರಳಿ ‘ಕಮಲ’ವಾಗಿ

ಸೋತ ಪ್ರಮುಖ ನಾಯಕರು , ಪುನರಾಯ್ಕೆ ಆದ ಇಬ್ಬರು ಶಾಸಕರು, ಎಣಿಕೆ ಕೇಂದ್ರಕ್ಕೆ ಜನಾರ್ದನ ರೆಡ್ಡಿ ಭೇಟಿ

ಗಾಣಧಾಳು ಶ್ರೀಕಂಠ
Published 16 ಮೇ 2018, 11:29 IST
Last Updated 16 ಮೇ 2018, 11:29 IST

ಚಿತ್ರದುರ್ಗ: ಆಡಳಿತ ವಿರೋಧಿ ಅಲೆ, ಜಾತಿ ಲೆಕ್ಕಾಚಾರ, ಪಕ್ಷಗಳ ವಿಲೀನ, ಸ್ಟಾರ್ ಪ್ರಚಾರಕರ ಭಾಷಣದಂತ ಪ್ರಮುಖ ಅಂಶಗಳಿಂದಾಗಿ ಜಿಲ್ಲೆಯ 6 ಕ್ಷೇತ್ರಗಳ ಪೈಕಿ, ಐದರಲ್ಲಿ ಬಿಜೆಪಿ ಹಾಗೂ ಒಂದರಲ್ಲಿ ಕಾಂಗ್ರೆಸ್ ಜಯಗಳಿಸಿದೆ. ಗೆಲುವಿನ ನಿರೀಕ್ಷೆ ಹುಟ್ಟಿಸಿದ್ದ ಪ್ರಮುಖ ಅಭ್ಯರ್ಥಿಗಳು ಸೋತಿದ್ದಾರೆ !

ಯಡಿಯೂರಪ್ಪ ಅಲೆಯಿಂದ ವೀರಶೈವ ಸಮುದಾಯ, ಶ್ರೀರಾಮುಲು ಪ್ರವೇಶದಿಂದ ನಾಯಕ ಸಮುದಾಯ ಸೆಳೆದ ಬಿಜೆಪಿ, ಐದು ಅಭ್ಯರ್ಥಿಗಳನ್ನು ಗೆಲ್ಲಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಆಡಳಿತ ವಿರೋಧಿ ಅಲೆಯಿಂದಾಗಿ ಸಮಾಜ ಕಲ್ಯಾಣ ಸಚಿವ ಎಚ್. ಆಂಜನೇಯ, ಹಾಲಿ ಶಾಸಕರಾದ ಹಿರಿಯೂರು ಡಿ.ಸುಧಾಕರ್, ಹೊಸದುರ್ಗದ ಬಿ.ಜಿ.ಗೋವಿಂದಪ್ಪ ಮತ್ತು ಬಿಎಸ್ಆರ್ ಕಾಂಗ್ರೆಸ್‌ನಿಂದ ಆಯ್ಕೆಯಾಗಿ ಬಿಜೆಪಿಗೆ ಸೇರಿದ್ದ ಮೊಳಕಾಲ್ಮುರು ಶಾಸಕ ಎಸ್. ತಿಪ್ಪೇಸ್ವಾಮಿ ಸೋತಿದ್ದಾರೆ. ಹಾಲಿ ಶಾಸಕ ಜಿ.ಎಚ್. ತಿಪ್ಪಾರೆಡ್ಡಿ ಚಿತ್ರದುರ್ಗದಿಂದ, ಕಾಂಗ್ರೆಸ್‌ನ ಟಿ.ರಘುಮೂರ್ತಿ ಚಳ್ಳಕೆರೆಯಿಂದ ಪುನರಾಯ್ಕೆಯಾಗಿದ್ದಾರೆ.

ಶಾಸಕ ಜಿ.ಎಚ್. ತಿಪ್ಪಾರೆಡ್ಡಿ, ಐದನೇ ಬಾರಿಗೆ ಶಾಸಕರಾಗಿ ಪುನರಾಯ್ಕೆಯಾಗಿದ್ದಾರೆ. ಬಿ.ಎಸ್.ಯಡಿಯೂರಪ್ಪ, ನರೇಂದ್ರ ಮೋದಿ ಅಲೆ, ಬಿಜೆಪಿಯ ಸಾಂಪ್ರದಾಯಿಕ ಮತಗಳ ಜತೆಗೆ, ನಾಲ್ಕು ದಶಕಗಳ ರಾಜಕೀಯದ ಅನುಭವ, ಚುನಾವಣೆಯ ತಂತ್ರಗಾರಿಕೆ ಹಾಗೂ ಪಟ್ಟುಗಳು ಗೆಲುವಿನ ಹಿಂದಿರುವ ಶಕ್ತಿ ಎಂದು ವಿಶ್ಲೇಷಿಸಲಾಗುತ್ತಿದೆ. ಕಾಂಗ್ರೆಸ್‌ನಲ್ಲಿನ ಸಂಘಟನೆ ಕೊರತೆ ಹಾಗೂ ನಿರೀಕ್ಷಿತ ಮಟ್ಟದಲ್ಲಿ ಜೆಡಿಎಸ್ ಪ್ರತಿರೋಧ ಒಡ್ಡದ ಕಾರಣ ತಿಪ್ಪಾರೆಡ್ಡಿ ಗೆಲ್ಲಲು ಕಾರಣವಾಗಿದೆ. ಅಭಿವೃದ್ಧಿ ವಿಚಾರದಲ್ಲಿ ಮತದಾರರಲ್ಲಿ ಅಸಮಾಧಾನವಿದ್ದರೂ, ಆ ಅಲೆ ಯಾವ ಕಡೆ ತಿರುಗಿತೋ ಗೊತ್ತಾಗಲಿಲ್ಲ.

ADVERTISEMENT

ಹೊಳಲ್ಕೆರೆಯಲ್ಲಿ ಸಮಾಜ ಕಲ್ಯಾಣ ಸಚಿವ ಎಚ್. ಆಂಜನೇಯ ಹೀನಾಯ ಸೋಲನುಭವಿಸಿದ್ದಾರೆ. ಕ್ಷೇತ್ರದಲ್ಲಿ ಚುನಾವಣೆ ಆರಂಭದಿಂದಲೂ ಆಡಳಿತ ವಿರೋಧಿ ಅಲೆ ಎದುರಿಸುತ್ತಿದ್ದ ಆಂಜನೇಯ, ‘ಸ್ವಜಾತಿಯವರಿಗೆ, ತನ್ನ ಹಿಂಬಾಲಕರಿಗಷ್ಟೇ ಸೌಲಭ್ಯಗಳನ್ನು ಕೊಟ್ಟಿದ್ದಾರೆ’ ಎಂಬ ಅಸಮಾಧಾನ, ‘ಕ್ಷೇತ್ರ ಕಡೆಗಣಿಸಿದ್ದಾರೆ’ ಎಂಬ ಆಕ್ಷೇಪ, ‘ಗಂಗಾ ಕಲ್ಯಾಣ ಯೋಜನೆ ಅಕ್ರಮ’ ನಡೆದಿದೆ ಎಂಬ ವಿರೋಧಪಕ್ಷದ ಆರೋಪಗಳು ಸೋಲಿನ ಭಾಗವಾಗಿವೆ ಎಂದು ವಿಶ್ಲೇಷಿಸಲಾಗುತ್ತಿದೆ. ಕಳೆದ ಚುನಾವಣೆಯಲ್ಲಿ ಬಿಜೆಪಿ–ಕೆಜೆಪಿ ಒಡಕಿನಿಂದಾಗಿ 12 ಸಾವಿರ ಮತಗಳ ಅಂತರದಿಂದ ಸೋತಿದ್ದ ಚಂದ್ರಪ್ಪಗೆ ಈ ಬಾರಿ ಪಕ್ಷ ಜತೆಯಾಗಿದ್ದು ಹಾಗೂ ಯಡಿಯೂರಪ್ಪ ಅಲೆ ಪ್ಲಸ್ ಪಾಯಿಂಟ್.

ಮೊಳಕಾಲ್ಮುರು ಕ್ಷೇತ್ರದಿಂದ ಆಯ್ಕೆಯಾದ ಸಂಸದ ಬಿ.ಶ್ರೀರಾಮುಲುಗೆ ಸ್ಟಾರ್ ನಟರು, ಬಿಜೆಪಿ ಹಿರಿಯ ರಾಜಕಾರಣಿಗಳ ಪ್ರಚಾರ, ಉಪ ಮುಖ್ಯಮಂತ್ರಿಯಾಗುತ್ತಾರೆಂಬ ನಂಬಿಕೆ, ಮಧ್ಯ ಕರ್ನಾಟಕದ ನಾಯಕ ಸಮುದಾಯಕ್ಕೆ ಒಬ್ಬ ರಾಜಕೀಯ ನಾಯಕ ಬೇಕೆಂಬ ಅಂಶ ಗೆಲುವಿನ ಒತ್ತಾಸೆಗೆ ನಿಂತಿತು. ಶ್ರೀರಾಮುಲುಗೆ ಪ್ರತಿಸ್ಪರ್ಧೆ ನೀಡಿದವರು ಬಿಜೆಪಿ ಟಿಕೆಟ್ ವಂಚಿತ ಹಾಲಿ ಶಾಸಕ ಎಸ್. ತಿಪ್ಪೇಸ್ವಾಮಿ. ಕಾಂಗ್ರೆಸ್ ಅಭ್ಯರ್ಥಿ ಡಾ. ಯೋಗೇಶ್ ಬಾಬು. ತಿಪ್ಪೇಸ್ವಾಮಿಗೆ ಆರಂಭದಲ್ಲಿ ಸಿಕ್ಕಂಥ ಜನಬೆಂಬಲ, ಚುನಾವಣೆಯಲ್ಲಿ ಮತಗಳಾಗಿ ಪರಿವರ್ತನೆಯಾದಂತೆ ಕಾಣಲಿಲ್ಲ.

ಹೈಕಮಾಂಡ್ ಬೆಂಬಲ, ಸ್ಥಳೀಯರ ಜನಮನ ಗೆದ್ದಿದ್ದ ಯೋಗೇಶ್ ಬಾಬು ಕೊನೆವರೆಗೂ ಕ್ಷೇತ್ರದಲ್ಲಿ ಗೆಲುವಿನ ‘ಅಲೆ’ ಸೃಷ್ಟಿಸಿದ್ದರು. ಆದರೆ, ರಾಜ್ಯಮಟ್ಟದ ಕಾಂಗ್ರೆಸ್ ನಾಯಕರು ‘ಕೈ’ ಹಿಡಿಯದಿರುವುದು ಈ ಸೋಲಿಗೆ ಕಾರಣವಿರಬಹುದೆಂದು ವಿಶ್ಲೇಷಿಸಲಾಗುತ್ತಿದೆ.

ಹಿರಿಯೂರು ಕ್ಷೇತ್ರದಿಂದ ಆಯ್ಕೆಯಾಗಿರುವ ಬಿಜೆಪಿಯ ಕೆ.ಪೂರ್ಣಿಮಾ, ಜಿಲ್ಲೆಯಲ್ಲೇ ಏಕೈಕ ಮಹಿಳಾ ಅಭ್ಯರ್ಥಿ. ಯಾದವ ಸಮುದಾಯಕ್ಕೆ ಸೇರಿದ ಪೂರ್ಣಿಮಾ ಅವರಿಗೆ ಮಹಿಳೆ ಎಂಬ ಅಂಶ ಪ್ಲಸ್ ಪಾಯಿಂಟ್. ತಂದೆ ಜೆಡಿಎಸ್ ಕೆ.ಕೃಷ್ಣಪ್ಪ ಹೆಸರು, ಯಡಿಯೂರಪ್ಪ ಅಲೆ, ಬಿಜೆಪಿ ಸಾಂಪ್ರದಾಯಿಕ ಮತಗಳು, ಸ್ವಜಾತಿಯ ಮತಗಳು, ಗೆಲುವಿನ ದಡ ತಲುಪಿಸಿವೆ. ಅಧಿಕಾರವಿರದಿದ್ದರೂ ನಾಲ್ಕು ವರ್ಷಗಳಿಂದ ಪತಿ ಡಿ.ಟಿ.ಶ್ರೀನಿವಾಸ್ ಜತೆ ನಿರಂತರವಾಗಿ ಕ್ಷೇತ್ರದ ಜನರ ಸಂಪರ್ಕದಲ್ಲಿದ್ದು, ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿವೆ. ಕ್ಷೇತ್ರದಲ್ಲಿ ಆರಂಭ
ದಿಂದಲೂ ಕೇಳಿಬಂದಿದ್ದ ಆಡಳಿತ ವಿರೋಧಿ ಅಲೆ, ಹಾಲಿ ಶಾಸಕ ಡಿ.ಸುಧಾಕರ ಅವರ ಸೋಲಿಗೆ ಕಾರಣ
ಎಂಬುದು ರಾಜಕೀಯ ವಿಶ್ಲೇಷಣೆ.

ಹೊಸದುರ್ಗದಲ್ಲಿ ಬಿಜೆಪಿಯಿಂದ ಗೂಳಿಹಟ್ಟಿ ಡಿ. ಶೇಖರ್ ಗೆದ್ದಿದ್ದಾರೆ. 2013ರ ಚುನಾವಣೆಯಲ್ಲಿ, ಶೇಖರ್ ಪಕ್ಷೇತರರಾಗಿ 37 ಸಾವಿರ, ಅದೇ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಲಿಂಗಮೂರ್ತಿ 37 ಸಾವಿರ ಮತ ಪಡೆದು ಸೋತಿದ್ದರು. ಆಗ ಕಾಂಗ್ರೆಸ್‌ನಿಂದ ಬಿ.ಜಿ.ಗೋವಿಂದಪ್ಪ ಗೆದ್ದಿದ್ದರು. ಈ ಚುನಾವಣೆಯಲ್ಲಿ ಬಿಜೆಪಿ ಮತ್ತು ಗೂಳಿಹಟ್ಟಿ ವೈಯಕ್ತಿಕ ಮತಗಳ ಜತೆಗೆ, ಕ್ಷೇತ್ರದಲ್ಲಿದ್ದ ಆಡಳಿತ ವಿರೋಧಿ, ಅಲೆ 90 ಸಾವಿರದಷ್ಟು ಮತಗಳನ್ನು ಪಡೆದು ಗೆಲ್ಲಲು ಕಾರಣವಾಯಿತು. ಕಾಂಗ್ರೆಸ್ ಅಭ್ಯರ್ಥಿ ಗೋವಿಂದಪ್ಪ ವಿರುದ್ಧದ ಅಕ್ರಮ ಮರಳುಗಾರಿಕೆ ಆರೋಪ, ಸ್ವಜಾತಿಯವರಿಗಷ್ಟೇ ಆದ್ಯತೆ ನೀಡುತ್ತಾರೆಂಬ ಕ್ಷೇತ್ರದ ಜನರಲ್ಲಿನ ಅಸಮಾಧಾನ, ಸೋಲಿಗೆ ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ.

ಬಾರದ ಆಂಜನೇಯ

ಸರ್ಕಾರಿ ಕಲಾ ಕಾಲೇಜಿನಲ್ಲಿ ಮಂಗಳವಾರ ನಡೆದ ಮತ ಎಣಿಕೆ ಕೇಂದ್ರದ ಬಳಿಗೆ ಹೊಳಲ್ಕೆರೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಚ್.ಆಂಜನೇಯ ಕೊನೆಗೂ ಬರಲಿಲ್ಲ.

ಮನೆಯಲ್ಲೇ ಕೂತು ಎಣಿಕೆ ಸುತ್ತಿನ ಮುನ್ನಡೆ ಬಗ್ಗೆ ಮಾಹಿತಿ ಪಡೆಯುತ್ತಿದ್ದರು. ಎಣಿಕೆ ಕಾರ್ಯ ಮುಗಿಯುವವರೆಗೂ ಅವರು ಎಲ್ಲಿಯೂ ಕಾಣಿಸಿಕೊಳ್ಳಲಿಲ್ಲ. ಸಂಜೆ ಕಾಂಗ್ರೆಸ್ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಕಾಣಿಸಿಕೊಂಡರು. ಹೊಸದುರ್ಗದ ಕಾಂಗ್ರೆಸ್ ಅಭ್ಯರ್ಥಿ ಬಿ.ಜಿ.ಗೋವಿಂದಪ್ಪ ಕೂಡ ಕೇಂದ್ರದ ಬಳಿಗೆ ಬರಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.